
ಕುಷ್ಟಗಿ (ಕೊಪ್ಪಳ ಜಿಲ್ಲೆ): ಯಲಬುರ್ಗಾ ತಾಲ್ಲೂಕಿನ ಮದ್ಲೂರು ಗ್ರಾಮದ ಬಳಿ ಮಹಿಳೆಯೊಬ್ಬರ ಮೇಲೆ ನಡೆದಿದೆ ಎನ್ನಲಾದ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಕ್ಕೆ ಸಂಬಂಧಿಸಿದಂತೆ ಪಟ್ಟಣದಲ್ಲಿ ಸೋಮವಾರ ವಿವಿಧ ಸ್ಥಳಗಳಿಗೆ ತೆರಳಿ ಐವರು ಆರೋಪಿಗಳೊಂದಿಗೆ ಪೊಲೀಸರು ಮಹಜರು ನಡೆಸಿದರು.
ಯಲಬುರ್ಗಾ ಸರ್ಕಲ್ ಇನ್‌ಸ್ಪೆಕ್ಟರ್ ಮೌನೇಶ್ ಮಾಲಿಪಾಟೀಲ ನೇತೃತ್ವದಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಒಳಗೊಂಡ ತಂಡ ಪಟ್ಟಣಕ್ಕೆ ಬಂದಿದ್ದರು. ಭಾನುವಾರ ಪಟ್ಟಣದಲ್ಲಿ ಕೆಲ ಅಂಗಡಿಗಳಿಗೆ ಹೋಗಿರುವುದಾಗಿ ಆರೋಪಿಗಳು ಬಾಯ್ಬಿಟ್ಟಿದ್ದರು.
ಬಸ್ ನಿಲ್ದಾಣದ ಬಳಿ ಇರುವ ಎಂಎಸ್‌ಐಎಲ್ ಮದ್ಯ ಮಾರಾಟ ಮಳಿಗೆಯಲ್ಲಿ ಆರೋಪಿಗಳು ಮದ್ಯ ಖರೀದಿಸಿದ್ದಾರೆ.
ನಂತರ ಕೊಪ್ಪಳ ರಸ್ತೆಯಲ್ಲಿರುವ ಎಗ್‌ರೈಸ್ ಅಂಗಡಿಯಲ್ಲಿ ಆಹಾರ ವಸ್ತುಗಳನ್ನು ಖರೀದಿಸಿದ್ದಾರೆ. ನಂತರ ಬಸ್ ನಿಲ್ದಾಣದ ಆವರಣದಲ್ಲಿನ ನಂದಿನಿ ಮಿಲ್ಕ್ ಪಾರ್ಲರ್‌ನಲ್ಲಿ ಬೇಕರಿ ವಸ್ತುಗಳನ್ನು ತೆಗೆದುಕೊಂಡಿದ್ದಾರೆ. ಈ ಕಾರಣಕ್ಕೆ ಆರೋಪಿಗಳನ್ನು ಈ ಎಲ್ಲ ಸ್ಥಳಗಳಿಗೆ ಕರೆದೊಯ್ದು ಪಂಚನಾಮೆ ನಡೆಸಿದರು.
ಆರೋಪಿಗಳನ್ನು ಜನನಿಬಿಡ ಸ್ಥಳದಲ್ಲಿನ ರಸ್ತೆಯಲ್ಲಿ ಕರೆದೊಯ್ದು ಮಹಜರು ನಡೆಸುವ ವೇಳೆ ಕುತೂಹಲದಿಂದ ನೂರಾರು ಜನ ಜಮಾಯಿಸಿದ್ದರು. ಇದರಿಂದ ಪ್ರಮುಖ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ಜನರನ್ನು ನಿಭಾಯಿಸುವಲ್ಲಿ ಪೊಲೀಸರು ಹರಸಾಹಸ ನಡೆಸಬೇಕಾಯಿತು. ಆರೋಪಿಗಳ ಪರೇಡ್ ನಡೆಯುತ್ತಿದ್ದ ಸಂದರ್ಭವನ್ನು ಜನರು ಮೊಬೈಲ್‌ಗಳಲ್ಲಿ ಚಿತ್ರೀಕರಿಸಿಕೊಳ್ಳುವುದು ಸಾಮಾನ್ಯವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.