ಗಂಗಾವತಿ: ಭಾರತೀಯ ವಕೀಲ ಪರಿಷತ್ತಿನ ಸದಸ್ಯ ಹಾಗೂ ವಕೀಲ ವೈ.ಆರ್. ಸದಾಶಿವರೆಡ್ಡಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಸೋಮವಾರ ಕೋರ್ಟ್ ಆವರಣದಲ್ಲಿ ಗಂಗಾವತಿ ವಕೀಲರ ಸಂಘದ ಸದಸ್ಯರು ಕೆಂಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.
ವಕೀಲರ ಸಂಘದ ಕಾರ್ಯದರ್ಶಿ ಎಚ್.ಎಂ. ಮಂಜುನಾಥ ಮಾತನಾಡಿ, ‘ಏ.15ರಂದು ವೈ.ಆರ್. ಸದಾಶಿವರೆಡ್ಡಿ ಅವರ ಕಚೇರಿಗೆ ದುಷ್ಕರ್ಮಿಗಳು ಏಕಾಏಕಿ ನುಗ್ಗಿ, ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದು ಖಂಡನೀಯ. ಈಗಾಗಲೇ ವಕೀಲರ ರಕ್ಷಣೆಗೆ ಕಾಯ್ದೆ ಜಾರಿಯಾದರೂ, ಕೃತ್ಯಗಳು ನಿಲ್ಲುತ್ತಿಲ್ಲ. ರಾಜ್ಯ ಸರ್ಕಾರವು ಇಂತಹ ಹೇಯ ಕೃತ್ಯಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು. ಸದಾಶಿವರೆಡ್ಡಿ ಅವರ ಮೇಲೆ ಹಲ್ಲೆ ಮಾಡಿದ ದುಷ್ಕರ್ಮಿಗಳನ್ನು ಪೊಲೀಸರು ಬಂಧಿಸಿ, ಕಠಿಣ ಶಿಕ್ಷೆಗೆ ಒಳಪಡುವಂತೆ ಮಾಡಬೇಕು’ ಎಂದು ಆಗ್ರಹಿಸಿ ಗ್ರೇಡ್-2 ತಹಶೀಲ್ದಾರ್ ಮಹಾಂತಗೌಡ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ವಕೀಲರ ಸಂಘದ ಅಧ್ಯಕ್ಷ ಶರಣಪ್ಪ ನಾಯಕ, ಉಪಾಧ್ಯಕ್ಷ ಪ್ರಕಾಶ, ಜಂಟಿ ಕಾರ್ಯದರ್ಶಿ ಅರುಣ ಎ.ಜಿ., ಹಿರಿಯ ವಕೀಲ ಬಿ. ಮಲ್ಲಪ್ಪ, ಡಿ.ಹಾಲಸಮುದ್ರ, ಕೆ.ಆರ್. ದೇಶಪಾಂಡೆ ಎಂ. ಪಂಪನಗೌಡ, ಸೋಮನಾಥ ಪಟ್ಟಣಶೆಟ್ಟಿ, ಅನಂತರಾವ, ಎಂ.ಗಂಗಾಧರ, ಕೆ.ಕೃಷ್ಣಪ್ಪ, ಸೈಯದ್ ಹಸಮುದ್ದೀನ್, ಸೌಭಾಗ್ಯಲಕ್ಷ್ಮಿ, ರಾಜೇಶ್ವರಿ, ನಾಗರಾಜ ನಾಯಕ, ಮರಿಯಪ್ಪ, ಮಂಜುನಾಥ ತಾಳೂರು, ವೆಂಕಟೇಶಗೌಡ, ಎಸ್.ಎಂ.ಸಂಜೀವ ಸೇರಿ ವಕೀಲರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.