ಪ್ರಾಧಿನಿಧಿಕ ಚಿತ್ರ
ಐಸ್ಟಾಕ್ ಚಿತ್ರ
ಗಂಗಾವತಿ: ವಯಸ್ಕಳಲ್ಲದ ತಮ್ಮ ಮಗಳನ್ನು ಬಾಲ್ಯವಿವಾಹ ಮಾಡಲು ಪ್ರಯತ್ನಿಸಿದ ಪೋಷಕರ ಮೇಲಿನ ಆರೋಪ ಸಾಬೀತಾಗಿದ್ದು, ಅವರಿಗೆ ಇಲ್ಲಿನ ಪ್ರಧಾನ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ನಾಗೇಶ ಪಾಟೀಲ ಅವರು ಬಾಲಕಿಯ ಪೋಷಕರಿಗೆ ಮತ್ತು ಅದಕ್ಕೆ ಸಹಕರಿಸಿವರಿಗೆ ಶಿಕ್ಷೆ ವಿಧಿಸಿ ಸೋಮವಾರ ಆದೇಶಿಸಿದ್ದಾರೆ.
2017ರ ಏಪ್ರಿಲ್‌ನಲ್ಲಿ ತಮ್ಮ ಮಗಳು ವಯಸ್ಕಳು ಅಲ್ಲದಿದ್ದರೂ ಪೋಷಕರು ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಧ್ಯಾಯರು ನೀಡಿದ್ದಾರೆ ಎಂದು ಖೊಟ್ಟಿ ವರ್ಗಾವಣೆ ಪತ್ರ ತಂದು ಮದುವೆ ಮಾಡಲು ಮುಂದಾಗಿದ್ದರು. ಆಗ ಬಾಲಕಿಯ ತಂದೆಯನ್ನು ಎ–1, ತಾಯಿಯನ್ನು ಎ–2 ಆರೋಪಿಯನ್ನಾಗಿ ಮಾಡಲಾಗಿತ್ತು. ಮದುವೆ ನಿಶ್ಚಯ ಮಾಡಿದ್ದ ಹುಡುಗ ಹಾಗೂ ಸಹಕರಿಸಿದ್ದ ಇನ್ನಿಬ್ಬರು ಸೇರಿ ಒಟ್ಟು ಐದು ಜನರನ್ನು ಆರೋಪಿಗಳನ್ನಾಗಿಸಲಾಗಿತ್ತು.
ಆಗಿನ ತನಿಖಾಧಿಕಾರಿಯಾಗಿದ್ದ ಗುಲಾಮ್ ಅಹ್ಮದ್ ಅವರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಬಾಲ್ಯ ವಿವಾಹ ನಿಷೇಧ ಕಾಯ್ದೆ ಕಲಂ 10ರ ಅಪರಾಧಕ್ಕೆ ಎರಡು ವರ್ಷಗಳ ಕಾಲ ಜೈಲು ಮತ್ತು ತಲಾ ₹10 ಸಾವಿರ ದಂಡ ವಿಧಿಸಲಾಗಿದೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ನಿರಂಜನಸ್ವಾಮಿ ದೇವಯ್ಯಸ್ವಾಮಿ ಹಿರೇಮಠ ಅವರು ವಾದ ಮಂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.