ADVERTISEMENT

ಗಂಗಾವತಿ ನಗರಸಭೆ: ಅಧ್ಯಕ್ಷ, ಉಪಾಧ್ಯಕ್ಷ ಗಾದಿಗೆ ಮೂಲ, ವಲಸಿಗರ ಪೈಪೋಟಿ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2025, 5:02 IST
Last Updated 17 ಏಪ್ರಿಲ್ 2025, 5:02 IST
<div class="paragraphs"><p>ಗಂಗಾವತಿ ನಗರಸಭೆ ಕಚೇರಿ</p></div>

ಗಂಗಾವತಿ ನಗರಸಭೆ ಕಚೇರಿ

   

ಗಂಗಾವತಿ: ಇಲ್ಲಿನ ನಗರಸಭೆಯ ಅಧಿಕಾರ ಹಂಚಿಕೆ ಒಳ ಒಪ್ಪಂದದನ್ವಯ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷೆ ಮೊದಲ ಅವಧಿಗೆ ಆಡಳಿತ ನಡೆಸಿ, ಜಿಲ್ಲಾಧಿಕಾರಿಗಳಿಗೆ ರಾಜೀನಾಮೆ ಸಲ್ಲಿಸಿದ್ದು, ಎರಡನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷ ಗಾದಿಗೆ ಮೂಲ ಮತ್ತು ವಲಸೆ ಬಿಜೆಪಿ ಸದಸ್ಯರ ನಡುವೆ ಸ್ಪರ್ಧೆ ಏರ್ಪಟ್ಟು, ಶಾಸಕರ ಚಿತ್ತ, ಯಾರತ್ತ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಕುತೂಹಲ ಕೆರಳಿಸಿದೆ.

ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿದ ಗಂಗಾವತಿ ನಗರದಲ್ಲಿ ಒಟ್ಟು 35 ವಾರ್ಡುಗಳಿದ್ದು, ಇಲ್ಲಿಂದ ಮೊದಲಿಗೆ 17 ಕಾಂಗ್ರೆಸ್, 14 ಬಿಜೆಪಿ, 2 ಜೆಡಿಎಸ್, 2 ಪಕ್ಷೇತರ ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆದ್ದು, ನಗರಸಭೆ ಸದಸ್ಯರಾಗಿ ಆಯ್ಕೆಯಾಗಿದ್ದರು.‌ ಮೊದಲ ಅವಧಿಗೆ ಕಾಂಗ್ರೆಸ್ ಪಕ್ಷದ ಮಹಿಳೆಯೇ ಅಧ್ಯಕ್ಷೆಯಾಗಿದ್ದರು.

ADVERTISEMENT

ನಂತರ ಎರಡನೇ ಅವಧಿಗೆ ವಿಧಾನಸಭಾ ಕ್ಷೇತ್ರ ಚುನಾವಣೆ, ಕೆಲವರು ಎರಡನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ಪರಿಷ್ಕರಣೆ ಕೋರಿ ಕೋರ್ಟ್ ಮೆಟ್ಟಿಲೇರಿದ ಪರಿಣಾಮ 1ವರ್ಷ ಕಳೆದು, ಕೊನೆಯ 15 ತಿಂಗಳ ಅಧಿಕಾರವಧಿ ದಕ್ಕಿಸಿಕೊಳ್ಳಲು ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ತಮ್ಮ ಪಕ್ಷದ ನಗರಸಭೆ ಸದಸ್ಯರ ಸ್ಥಾನಗಳ ಬಲಾಬಲ ಪ್ರದರ್ಶನ ಮಾಡುವ ಪ್ರತಿಷ್ಠತೆ ಇತ್ತು.

ಅಧ್ಯಕ್ಷ ಸ್ಥಾನ (ಹಿಂದುಳಿದ ವರ್ಗ ಅ), ಉಪಾಧ್ಯಕ್ಷ ಸ್ಥಾನ (ಪರಿಶಿಷ್ಟ ಜಾತಿ ಮಹಿಳೆ) ಮೀಸಲಾತಿಯಿಂದ ಅಧಿಕಾರ ಪಡೆಯಲು ಮ್ಯಾಜಿಕ್ ನಂಬರ್ 18 ಬೇಕಿದ್ದಾಗ, ಶಾಸಕ ಜಿ. ಜನಾರ್ದನರೆಡ್ಡಿ ತಂತ್ರ-ರಣತಂತ್ರಗಳ ಮೂಲಕ 14ಬಿಜೆಪಿ, 2ಜೆಡಿಎಸ್, 2 ಪಕ್ಷೇತರ, ಚುನಾವಣೆ ವೇಳೆ ಕೆಆರ್‌ಪಿಪಿಗೆ ಬೆಂಬಲಿಸಿದ 10 ಕಾಂಗ್ರೆಸ್ ಸದಸ್ಯರನ್ನು ಸೆಳೆದು 4-5ದಿನ ರೆಸಾರ್ಟ್ ರಾಜಕೀಯ ನಡೆಸಿ, ಚುನಾವಣೆ ದಿನ 28 ಸಂಖ್ಯಾ ಬಲ ತೋರಿಸಿ ಅಧಿಕಾರ ವಶಕ್ಕೆ ಪಡೆದಿದ್ದರು.

ಒಳ ಒಪ್ಪಂದ ರಾಜೀನಾಮೆ:

15 ತಿಂಗಳ ನಗರಸಭೆ ಅಧಿಕಾರದ ಗದ್ದುಗೆ ಏರಿದ ನಂತರ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ವಿಚಾರದಲ್ಲಿ ವಲಸೆ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರಲ್ಲಿ ನಾವು, ನೀವು ಎಂಬ ತಿಕ್ಕಾಟ ನಡೆದಿತ್ತು. ಶಾಸಕರು 15 ತಿಂಗಳ ಅವಧಿಯನ್ನ 2 ಭಾಗವಾಗಿ ಹಂಚಿಕೆ ಮಾಡಿ, ಮೊದಲಿಗೆ ವಲಸೆ ಕಾಂಗ್ರೆಸ್ಸಿಗರಿಗೆ, ನಂತರ ಬಿಜೆಪಿ ಸದಸ್ಯರಿಗೆ ಅಧಿಕಾರ ನಡೆಸುವ ಬಗ್ಗೆ ಒಳ ಒಪ್ಪಂದ ಮಾಡಿಕೊಳ್ಳಲಾಗಿತ್ತು.

ಈ ಒಪ್ಪಂದಂತೆಯೇ ಅಧ್ಯಕ್ಷ ಮೌಲಸಾಬ, ಉಪಾಧ್ಯಕ್ಷ ಪಾರ್ವತಮ್ಮ ದೊಡ್ಡಮನಿ 7 ತಿಂಗಳು ಆಡಳಿತ ನಡೆಸಿ, ಏ.3ರಂದು ಜಿಲ್ಲಾಧಿಕಾರಿಗಳಿಗೆ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶಚೌಡ್ಕಿ ನೇತೃತ್ವದಲ್ಲಿ ರಾಜೀನಾಮೆ ಸಲ್ಲಿಸಿದ್ದರು. ಏ.15ರಂದು ಜಿಲ್ಲಾಧಿಕಾರಿ ರಾಜೀನಾಮೆ ಅಂಗೀಕರಿಸಿ, ತೆರವಾದ ಸ್ಥಾನಗಳಿಗೆ ಚುನಾವಣೆ ನಡೆಸಲು ಕಚೇರಿಗೆ ಪಾಲನಾ ವರದಿ ಸಲ್ಲಿಸುವಂತೆ ಸಹಾಯಕ ಆಯುಕ್ತರಿಗೆ ಸೂಚಿಸಿದ್ದಾರೆ.

ಪೈಪೋಟಿ: ಒಳ ಒಪ್ಪಂದದ ಪ್ರಕಾರ ಅಧ್ಯಕ್ಷ, ಉಪಾಧ್ಯಕ್ಷರು ರಾಜೀನಾಮೆ ಸಲ್ಲಿಸಿದ್ದು, 2ನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಆಯ್ಕೆಗೆ ಮೂಲ ಮತ್ತು ವಲಸೆ ಬಿಜೆಪಿಗರ ನಡುವೆ ತೀವ್ರ ಪೈಪೋಟಿ ಜತೆಗೆ ಲೆಕ್ಕಚಾರಗಳು ಶುರುವಾಗಿವೆ.

ಶಾಸಕ ಜಿ.ಜನಾರ್ದನರೆಡ್ಡಿ ಮೊದಲ ಅವಧಿ ವೇಳೆಯೇ, ಎರಡನೇ ಅವಧಿಗೆ ಅಧ್ಯಕ್ಷ ಸ್ಥಾನ ಅವಕಾಶ ಕೊಡಿಸುವ ಭರವಸೆ ನೀಡಿದ್ದರು. ಹಾಗಾಗಿ ಈ ಬಾರಿ ಅಧ್ಯಕ್ಷ ಸ್ಥಾನ ದೊರೆಯುವ ವಿಶ್ವಾಸವಿದೆ.
ಪರಶುರಾಮ ಮಡ್ಡೇರಾ, ಆಕಾಂಕ್ಷಿ

ಪ್ರಬಲ ಆಕಾಂಕ್ಷಿ ಎನಿಸಿಕೊಂಡ ಪರಶುರಾಮ ಮಡ್ಡೇರಾ ಕಳೆದ 25 ವರ್ಷಗಳಿಂದ ಬಿಜೆಪಿಯಲ್ಲಿ ಸಕ್ರಿಯವಾಗಿದ್ದು, ಬಿಜೆಪಿಯ ವಿವಿಧ ಜವಾಬ್ದಾರಿ ನಿರ್ವಹಣೆ ಜೊತೆಗೆ, 2 ಬಾರಿ ನಗರಸಭೆ ಸದಸ್ಯರಾಗಿ ಆಯ್ಕೆಯಾಗಿ, ಮೂಲ ಬಿಜೆಪಿಗ ಎನಿಸಿಕೊಂಡಿದ್ದಾರೆ. ಇನ್ನೋರ್ವ ಆಕಾಂಕ್ಷಿ ಅಜಯ್ ಬಿಚ್ಚಾಲಿ ಬಿಜೆಪಿಯಿಂದ ಗೆದ್ದು, ವಿಧಾನಸಭಾ ಕ್ಷೇತ್ರ ಚುನಾವಣೆ ವೇಳೆ ಜನಾರ್ದನರೆಡ್ಡಿಯ ಕೆಆರ್‌ಪಿಪಿ ಪಕ್ಷ ಸೇರಿ, ಅವರ ಬಳಿ ಗುರುತಿಸಿಕೊಂಡು ವಲಸೆ ಬಿಜೆಪಿಗ ಎನಿಸಿಕೊಂಡಿದ್ದಾರೆ.

ಶಾಸಕರ ಚಿತ್ತ, ಯಾರತ್ತ?:

ಅಧ್ಯಕ್ಷ, ಉಪಾಧ್ಯಕ್ಷ ರಾಜೀನಾಮೆ ಸಲ್ಲಿಕೆ ನಂತರ ಮುಂದಿನ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಬಗ್ಗೆ ಶಾಸಕ ಜಿ.ಜನಾರ್ದನರೆಡ್ಡಿ ಈವರೆಗೆ ತುಟಿಯೇ ಬಿಚ್ಚಿಲ್ಲ. ಬದಲಾಗಿ ಪ್ರಬಲ ಆಕಾಂಕ್ಷಿಗಳನ್ನ ಕರೆದು ಆಯ್ಕೆ ವಿಚಾರವಾಗಿ ಯಾವ ಸಭೆ, ಮಾತುಕತೆ ನಡೆಸಿಲ್ಲ. ಇದರಿಂದ ಅಕಾಂಕ್ಷಿಗಳಲ್ಲಿ ಆಯ್ಕೆ ವಿಚಾರದಲ್ಲಿ ದುಗುಡ ಶುರುವಾಗಿದೆ.

ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ವಿಚಾರದಲ್ಲಿ ಶಾಸಕ ಜಿ.ಜನಾರ್ದನರೆಡ್ಡಿಯ ನಿರ್ಧಾರವೇ ಅಂತಿಮವಿರಲಿದ್ದು, ಬಿಜೆಪಿ ಪಕ್ಷದ ಪರಶುರಾಮ ಮಡ್ಡೇರಾ ಅವರನ್ನ ಅಧ್ಯಕ್ಷ ಪಟ್ಟಕ್ಕೇರಿಸುತ್ತಾರೋ, ಇಲ್ಲವೇ ಕ್ಷೇತ್ರದಲ್ಲಿ ಗೆಲುವಿಗೆ ಸಹಕಾರಿಯಾದ ಕೆಆರ್‌ಪಿಪಿ ಪಕ್ಷಕ್ಕೆ ದುಡಿದ ಅಜಯ್ ಬಿಚ್ಚಾಲಿಗೆ ಕೃಪಕಟಾಕ್ಷ ತೋರಿಸುತ್ತಾರೋ? ಎಂಬುದು ಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.