ADVERTISEMENT

ಅಂಜನಾದ್ರಿ ಅಭಿವೃದ್ಧಿಗೆ ಬೇಕು ಒತ್ತು

ಗಂಗಾವತಿ ಕ್ಷೇತ್ರದಲ್ಲಿ ಪ್ರಗತಿ ಕಾರ್ಯಕ್ಕೆ ಬರ, ಜನರ ಬೇಡಿಕೆಗಳೂ ಅಪಾರ

ಎನ್.ವಿಜಯ್
Published 24 ಫೆಬ್ರುವರಿ 2026, 7:20 IST
Last Updated 24 ಫೆಬ್ರುವರಿ 2026, 7:20 IST
   

ಗಂಗಾವತಿ: ರಾಜ್ಯದ ಭತ್ತದ ಕಣಜ ಮತ್ತು ಹನುಮನ ನಾಡು ಎಂದೇ ಖ್ಯಾತಿ ಪಡೆದ ಗಂಗಾವತಿ ಕ್ಷೇತ್ರದ ಅಭಿವೃದ್ಧಿಗೆ ಹೇರಳ ಅವಕಾಶಗಳು ಇದ್ದರೂ ಜನರ ಬೇಡಿಕೆಗಳು ಈಡೇರಿಲ್ಲ. ಅಭಿವೃದ್ಧಿ ಕೆಲಸಗಳ ವಿಚಾರದಲ್ಲಿ ನಿರ್ಲಕ್ಷ್ಯದ ಜೊತೆಗೆ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ ಎನ್ನುವ ಆರೋಪವೂ ವ್ಯಾಪಕವಾಗಿದೆ.

ತಾಲ್ಲೂಕಿನಲ್ಲಿ ವಿಜಯನಗರ ಸಾಮ್ರಾಜ್ಯದ ಕಾಲದ ದೇವಾಲಯಗಳು, ಮಂಟಪ, ರಾಮಾಯಣ ಕಾಲದ ಪಂಪಾಸರೋವರ, ಋಷಿಮುಖ ಪರ್ವತ ಸೇರಿ ಹಲವು ಐತಿಹಾಸಿಕ ಪ್ರದೇಶಗಳಿವೆ. ಇವುಗಳ ಅಭಿವೃದ್ಧಿಯಾಗಬೇಕಿದೆ. ತಾಲ್ಲೂಕು ರಚನೆಯಾದ ಬಳಿಕ ಗಂಗಾವತಿ ನಿರೀಕ್ಷೆಯಷ್ಟು ಅಭಿವೃದ್ಧಿ ಕಂಡಿಲ್ಲ. 2023ರ ನಂತರ ಗಂಗಾವತಿಯ ಅಭಿವೃದ್ಧಿ ಇಳಿಮುಖವಾಗಿದೆ ಎಂದು ಜನ ಬಹಿರಂಗವಾಗಿಯೇ ಬೇಸರ ವ್ಯಕ್ತಪಡಿಸುತ್ತಿದ್ದಾರೆ. 

ನಗರ ಪ್ರದೇಶ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು, ಭತ್ತ ಬೆಳೆಯುವ ಪ್ರದೇಶದಲ್ಲಿ ಸಾಕಷ್ಟು ಅಕ್ಕಿಗಿರಣಿಗಳೂ ಇವೆ. ಇಲ್ಲಿನ ಅಕ್ಕಿ ದೇಶ-ವಿದೇಶಗಳಿಗೆ ರಪ್ತು ಆಗುತ್ತಿದ್ದರೂ ಭತ್ತ ಅಭಿವೃದ್ಧಿ ಮಂಡಳಿ ಸ್ಥಾಪನೆ ಕಾರ್ಯರೂಪಕ್ಕೆ ಬಂದಿಲ್ಲ. ದರೋಜಿ-ಬಾಗಲಕೋಟಿ ರೈಲ್ವೆ ಆರಂಭ, ವ್ಯಾಪಾರಿಗಳಿಗೆ ಅಗತ್ಯ ಸೌಲಭ್ಯಗಳು ಬೇಕಾಗಿವೆ. ಗಂಗಾವತಿ ಕೇಂದ್ರವಾಗಿರಿಸಿ ಕಿಷ್ಕಿಂಧಾ ಜಿಲ್ಲೆ ರಚನೆ ಮಾಡಲು ಕಿಷ್ಕಿಂಧಾ ಹೋರಾಟ ಸಮಿತಿ ಒಂದು ವರ್ಷದಿಂದ ಹೋರಾಟ ನಡೆಸುತ್ತಿದೆ.  ಈ ಬೇಡಿಕೆಯೂ ಈಡೇರಿಲ್ಲ.  

ADVERTISEMENT

ಕ್ಷೇತ್ರದ ಅಭಿವೃದ್ಧಿಗೆ ಏನಾಗಬೇಕು?: ಗಂಗಾವತಿ ಅಭಿವೃದ್ಧಿ ಭಾಗವಾಗಿ ಆರ್.ಟಿ.ಒ, ಸಹಾಯಕ ಆಯುಕ್ತರ ಕಚೇರಿ, ನಗರದಲ್ಲಿ ಬೈಪಾಸ್ ರಸ್ತೆ ನಿರ್ಮಾಣ, ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಇರಕಲ್ಲಗಡ ಭಾಗದಲ್ಲಿ ಕರಡಿಧಾಮ ನಿರ್ಮಾಣ, ತಾಲ್ಲೂಕು ಕ್ರೀಡಾಂಗಣ ಅಭಿವೃದ್ಧಿ, ಮಹಿಳಾ ಪದವಿ ಕಾಲೇಜು, ಬಾಲಕರ ಮತ್ತು ಬಾಲಕಿಯರ ವಸತಿ ನಿಲಯಗಳು ಮಂಜೂರು ಆಗಬೇಕಿದ್ದು, ಈ ಬಾರಿಯ ಬಜೆಟ್‌ನಲ್ಲಿ ಸಾಕಷ್ಟು ನಿರೀಕ್ಷೆಯಿದೆ.

ಹೋಬಳಿ ಮಟ್ಟದಲ್ಲಿ ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳ ಆರಂಭ, ಸಿಬ್ಬಂದಿ ನೇಮಕ, ನಗರ ಮತ್ತು ಗ್ರಾಮೀಣ ಭಾಗದಲ್ಲಿ ಸುಸಜ್ಜಿತ ರಸ್ತೆ, ಉಪ ಬಂಧಿಖಾನೆ, ಒಳಚರಂಡಿ ವ್ಯವ ಸ್ಥೆ ಪಾದಚಾರಿಗಳ ಮಾರ್ಗ, ರಸ್ತೆಗಳ ಒತ್ತುವರಿ ತೆರವು, ಸಾರ್ವಜನಿಕ ಶೌಚಾಲಯಗಳ ನಿರ್ಮಾಣ ಆಗಬೇಕಿದೆ.

ಬೇಕಿದೆ ಆದ್ಯತೆ: ಅಂಜನಾದ್ರಿ ಜಾಗತಿಕ ಮಟ್ಟದಲ್ಲಿ ಮನ್ನಣೆ ಪಡೆದಿದೆ. ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರಿಗೆ ಈವರೆಗೆ ವಸತಿ, ಊಟ ಸೇರಿ ಮೂಲ ಸೌಲಭ್ಯಗಳಿಲ್ಲ. ಇಲ್ಲಿ ಪ್ರಾಥಮಿಕ ಚಿಕಿತ್ಸಾ ಕೇಂದ್ರ, ಪೊಲೀಸ್ ಠಾಣೆ ಅಗತ್ಯವಿದೆ. ಕಿಷ್ಕಿಂಧಾ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಬೇಕಿದೆ ಎನ್ನುವುದು ಇತಿಹಾಸಕಾರರ ಒತ್ತಾಯವಾಗಿದೆ.

ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಹಿರೇಬೆಣಕಲ್ ನೆಲೆಗಳಿಗೆ ರಕ್ಷಣೆ ಬೇಕಿದೆ. ಇಲ್ಲಿನ ಸಮಾಧಿಗಳು ಅವನತಿಯಲ್ಲಿದ್ದು, ಸರಿಪಡಿಸಿ ಇತಿಹಾಸದ ಮಹತ್ವ ಸಾರಬೇಕಿದೆ. ಆನೆಗೊಂದಿ ಸುತ್ತಮುತ್ತಲಿನ ವಿಜಯನಗರ ಕಾಲದ ಮಂಟಪ,‌ ದೇವಾಲ‌ಯ‌ಗಳ ನಿರ್ವಹಣೆ ಆಗಬೇಕಿದೆ. ಇತಿಹಾಸದ‌ ಕುರಿತು ಮಾಹಿತಿ ತಿಳಿಸಲು ಆನೆಗೊಂದಿ ಭಾಗದಲ್ಲಿ ಮಾಹಿತಿ ಕೇಂದ್ರ ನಿರ್ಮಾಣವಾಗಬೇಕಿದೆ.

ಬೇಕಿದೆ ಕಡಿವಾಣ: ಗಂಗಾವತಿ ಭಾಗದಲ್ಲಿ ಆನೆಗೊಂದಿ, ಸಾಣಾಪುರ ಭಾಗದಲ್ಲಿ ನಿಸರ್ಗದ ಸುಂದರ ತಾಣಗಳಿದ್ದು, ಇಲ್ಲಿಗೆ ವಾರಾಂತ್ಯದಲ್ಲಿ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಲೆ ಇದೆ. ಆದರಲ್ಲಿ ಆಕ್ರಮ ರೆಸಾರ್ಟ್, ಹೋಂಸ್ಟೇ, ರೆಂಟಲ್ ಬೈಕ್, ಹರಿಗೋಲು ಸವಾರಿ, ಕ್ಲಿಫ್ ಜಂಪಿಂಗ್ ಹೆಚ್ಚಾಗಿ ನಡೆಯುತ್ತಿವೆ. ಅಕ್ರಮಕ್ಕೆ ಕಡಿವಾಣ ಹಾಕಬೇಕಿದೆ.

ಜಿ. ಜನಾರ್ದನ ರೆಡ್ಡಿ
ಪುನೀತಕುಮಾರ
ಗುಂಡೂರು ಪವನ್ ಕುಮಾರ

ಅಂಜನಾದ್ರಿ ಬೆಟ್ಟ

ಮೂರು ವರ್ಷಗಳಿಂದ ಗಂಗಾವತಿ ಅಭಿವೃದ್ಧಿ ಕುಂಠಿತವಾಗಿದೆ. ಈ ಬಾರಿ ಕ್ಷೇತ್ರಕ್ಕೆ ನಗರ ಮತ್ತು ಗ್ರಾಮೀಣ ಭಾಗಕ್ಕೆ ರಸ್ತೆ ಅಂಜನಾದ್ರಿ ಅಭಿವೃದ್ಧಿ ಪ್ರಾಥಮಿಕ ಕೇಂದ್ರಗಳಿಗೆ ಸಿಬ್ಬಂದಿ ನಿಯೋಜನೆಗೆ ಬಜೆಟ್‌ನಲ್ಲಿ ಆಸಕ್ತಿ ತೋರಬೇಕಿದೆ
ಪುನೀತಕುಮಾರ ವಕೀಲ ಹನುಮನಹಳ್ಳಿ ನಿವಾಸಿ

ಗಂಗಾವತಿಗೆ ಮಹಿಳಾ ಕೇಂದ್ರಿತ ಯೋಜನೆಗಳು ಬರಬೇಕು. ಮಹಿಳಾ ಸ್ವ ಉದ್ಯೋಗಗಳಿಗೆ ಸರ್ಕಾರ ನೆರವಿನ ಹಸ್ತ ನೀಡಬೇಕು. ಇದರಿಂದ ಮಹಿಳೆ ಸ್ವಾವಲಂಬಿಯಾಗಲು ಸಾಧ್ಯವಾಗುತ್ತದೆ. ಕವಿತಾ ಮೆಟ್ರಿ ಉಪನ್ಯಾಸಕಿ ವಿದ್ಯಾನಿಕೇತನ ಪದವಿ ಕಾಲೇಜು ಗಂಗಾವತಿ

ಗಂಗಾವತಿಗೆ ಮಹಿಳಾ ಕೇಂದ್ರಿತ ಯೋಜನೆಗಳು ಬರಬೇಕು. ಮಹಿಳಾ ಸ್ವ ಉದ್ಯೋಗಗಳಿಗೆ ಸರ್ಕಾರ ನೆರವಿನ ಹಸ್ತ ನೀಡಬೇಕು. ಇದರಿಂದ ಮಹಿಳೆ ಸ್ವಾವಲಂಬಿಯಾಗಲು ಸಾಧ್ಯವಾಗುತ್ತದೆ.
ಕವಿತಾ ಮೆಟ್ರಿ ಉಪನ್ಯಾಸಕಿ ವಿದ್ಯಾನಿಕೇತನ ಪದವಿ ಕಾಲೇಜು ಗಂಗಾವತಿ
ಗಂಗಾವತಿ ಅಭಿವೃದ್ಧಿಯ ಭಾಗವಾಗಿ ಅಂಜನಾದ್ರಿ ಹಿರೇಬೆಣಕಲ್ ನಗರದ ರಸ್ತೆ ಮಾರುಕಟ್ಟೆ ಸುಸಜ್ಜಿತ ಮೈದಾನ ಸೇರಿ ಹಲವು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಸರ್ಕಾರ ಸೂಕ್ತ ಅನುದಾನ‌ ನೀಡಿದರೆ. ಗಂಗಾವತಿಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ
ಜಿ. ಜನಾರ್ದನ ರೆಡ್ಡಿ ಶಾಸಕ ಗಂಗಾವತಿ
ಗಂಗಾವತಿ ಅಭಿವೃದ್ಧಿಗೆ ಪ್ರವಾಸೋದ್ಯಮದ ಬೆಳವಣಿಗೆ ಮುಖ್ಯಪಾತ್ರ ವಹಿಸುತ್ತದೆ. ಗ್ರಾಮೀಣ ಭಾಗದಲ್ಲಿ ವಸತಿ ಶಾಲೆಗಳ ಸಂಖ್ಯೆ ಹೆಚ್ಚಳದ ಜೊತೆಗೆ ಜಾನಪದ ಲೋಕ ಸ್ಥಾಪನೆಯಾಗಬೇಕು. ವಿಶ್ವಮಟ್ಟದಲ್ಲಿ ಗಂಗಾವತಿ ಗುರುತಿಸುವ ಯೋಜನೆಗಳು ನೀಡಬೇಕು
ಗುಂಡೂರು ಪವನ್ ಕುಮಾರ ಉಪನ್ಯಾಸಕ ಗಂಗಾವತಿ

ಬಜೆಟ್ ನಿರೀಕ್ಷೆ ಅಂಶಗಳು

* ದರೋಜಿ- ಬಾಗಲಕೋಟಿ ರೈಲ್ವೆ ಆರಂಭ

* ಗಂಗಾವತಿ ನಗರಕ್ಕೆ ರಿಂಗ್ ರೋಡ್ ನಿರ್ಮಾಣ

* ಗಂಗಾವತಿ ಕಿಷ್ಕಿಂಧಾ ಜಿಲ್ಲೆಯಾಗಿ ಘೋಷಣೆ

*ಕಿಷ್ಕಿಂಧಾ ಪ್ರಾಧಿಕಾರ ಸ್ಥಾಪನೆ

*ಅಂಜನಾದ್ರಿ ಹಿರೇಬೆಣಕಲ್ ಅಭಿವೃದ್ಧಿ ಭತ್ತ ಅಭಿವೃದ್ಧಿ ಮಂಡಳಿ ಸ್ಥಾಪನೆ

*ಇತಿಹಾಸ ಮಾಹಿತಿ ಕೇಂದ್ರ ನಿರ್ಮಾಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.