ADVERTISEMENT

ಗಂಗಾವತಿ | 'ಅಗತ್ಯ ರಸಗೊಬ್ಬರ ವಿತರಿಸಲು ಸೂಚನೆ'

ಗಂಗಾವತಿ: ಸಗಟು, ಚಿಲ್ಲರೆ ರಸಗೊಬ್ಬರ ವಿತರಕರ ಸಭೆ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2025, 6:48 IST
Last Updated 2 ಆಗಸ್ಟ್ 2025, 6:48 IST
ಗಂಗಾವತಿ ನಗರದ ಹರಿ ಅಗ್ರೊ ಏಜೆನ್ಸಿ ಗೊಡೌನ್‌ಗೆ ತಾಲ್ಲೂಕು ಮಟ್ಟದ ರಸಗೊಬ್ಬರ ನಿರ್ವಹಣಾ ಟಾಸ್ಕ್ ಫೋರ್ಸ್‌ ಸಮಿತಿ ಅಧಿಕಾರಿಗಳು ಶುಕ್ರವಾರ ಭೇಟಿ ನೀಡಿ, ರಸಗೊಬ್ಬರ ಪರಿಶೀಲನೆ ನಡೆಸಿದರು
ಗಂಗಾವತಿ ನಗರದ ಹರಿ ಅಗ್ರೊ ಏಜೆನ್ಸಿ ಗೊಡೌನ್‌ಗೆ ತಾಲ್ಲೂಕು ಮಟ್ಟದ ರಸಗೊಬ್ಬರ ನಿರ್ವಹಣಾ ಟಾಸ್ಕ್ ಫೋರ್ಸ್‌ ಸಮಿತಿ ಅಧಿಕಾರಿಗಳು ಶುಕ್ರವಾರ ಭೇಟಿ ನೀಡಿ, ರಸಗೊಬ್ಬರ ಪರಿಶೀಲನೆ ನಡೆಸಿದರು   

ಗಂಗಾವತಿ: ಇಲ್ಲಿನ ತಾ.ಪಂ ಮಂಥನ ಸಭಾಂಗಣದಲ್ಲಿ ಶುಕ್ರವಾರ ತಾಲ್ಲೂಕು ಮಟ್ಟದ ರಸಗೊಬ್ಬರ ನಿರ್ವಹಣಾ ಟಾಸ್ಕ್ ಫೋರ್ಸ್ ಸಮಿತಿಯಿಂದ ಸಗಟು ಮತ್ತು ಚಿಲ್ಲರೆ ರಸ ಗೊಬ್ಬರ ವಿತರಕರ ಸಭೆ ನಡೆಸಲಾಯಿತು.

ಸಹಾಯಕ ಕೃಷಿ ನಿರ್ದೇಶಕ ಸಂತೋಷ ಪಟ್ಟದಕಲ್ ಮಾತನಾಡಿ, ಈ ಬಾರಿ ಮುಂಗಾರು ಮೇ ತಿಂಗಳಲ್ಲಿ ಆರಂಭವಾಗಿದ್ದು, ತಾಲ್ಲೂಕಿನಲ್ಲಿ ರೈತರು ಮೆಕ್ಕೆಜೋಳ, ಭತ್ತ, ಸಜ್ಜೆ, ಹತ್ತಿ, ಹೆಸರು, ತೊಗರಿ ಬೆಳೆ ಬಿತ್ತಿದರೆ, ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತ ಬೆಳೆದಿದ್ದು, ಮಾರುಕಟ್ಟೆಯಲ್ಲಿ ಸಾಕಷ್ಟು ಕಾಂಪ್ಲೆಕ್ಸ್, ಯೂರಿಯಾ ಲಭ್ಯವಿದೆ.

‘ಏಪ್ರಿಲ್‌ನಿಂದ ಈವರೆಗೆ ಎಲ್ಲ ರೈತರಿಗೆ ರಸಗೊಬ್ಬರ ಅವಶ್ಯಕತೆಗೆ ತಕ್ಕಂತೆ ವಿತರಿಸಲಾಗಿದೆ. ಆಗಸ್ಟ್ ತಿಂಗಳಿಗೆ ಬೇಕಾಗುವ ರಸಗೊಬ್ಬರದ ಬಗ್ಗೆ ಮೇಲಧಿಕಾರಿಗಳಿಗೆ ಬೇಡಿಕೆ ಸಲ್ಲಿಸಲಾಗಿದೆ.2 ದಿನಗಳಲ್ಲಿ ಎಂಎಫ್ಎಲ್ ಹಾಗೂ ಕೋರಮಂಡಲ್ ಸಂಸ್ಥೆಯ ರಸಗೊಬ್ಬರ ಜಿಲ್ಲೆಗೆ ಸರಬರಾಜು ಆಗುತ್ತಿದೆ. ರೈತರು ಹರಳು ರೂಪದ ರಸಗೊಬ್ಬರ ಬದಲಿಗೆ ನ್ಯಾನೋ ಯೂರಿಯಾ, ಕಾಂಪ್ಲೆಕ್ಸ್ ಬಳಸಬೇಕು’ ಎಂದರು.

ADVERTISEMENT

ರಸಗೊಬ್ಬರ ನಿರ್ವಹಣಾ ಟಾಸ್ಕ್ ಫೋರ್ಸ್ ಸಮಿತಿ ನೋಡಲ್ ಅಧಿಕಾರಿ ಕೃಷ್ಣ ಉಕ್ಕುಂದ ಮಾತನಾಡಿ, ಎಲ್ಲ ರಸಗೊಬ್ಬರ ವಿತರಕರು ಸದ್ಯದ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ತಮ್ಮ ಬಳಿಗೆ ಬರುವ ರೈತರಿಗೆ ಅಗತ್ಯ ರಸಗೊಬ್ಬರ ವಿತರಿಸಬೇಕು. ಯಾವುದೇ ಸಮಸ್ಯೆ ಇದ್ದಲ್ಲಿ ವಿತರಕರು ತಾಲ್ಲೂಕು ಟಾಸ್ಕ್ ಫೋರ್ಸ್ ಸಮಿತಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.

ಸಹಾಯಕ ತೋಟಗಾರಿಕೆ ನಿರ್ದೇಶಕ ಶಿವಕುಮಾರ ಬಿರಾದಾರ ಪಾಟೀಲ, ವೆಂಕಟಗಿರಿ ಉಪತಹಶೀಲ್ದಾರ್ ರೆಹಮಾನ್, ಮರಳಿ ಉಪತಹಶೀಲ್ದಾರ್ ಮಹಿಬೂಬ್ ಅಲಿ, ಶಿರಸ್ತೆದಾರ ರವಿ ಎನ್, ವೆಂಕಟಗಿರಿ ಕಂದಾಯ ನಿರೀಕ್ಷಕ ಮಹೇಶ ದಲಾಲ್, ಗಂಗಾವತಿ ಕಂದಾಯ ನಿರೀಕ್ಷಕ ಸೈಯದ್ ಬಷೀರುದ್ದೀನ್ ಹುಸೇನಿ, ಮರಳಿ ಕಂದಾಯ ನಿರೀಕ್ಷಕ ಹಾಲೇಶ, ಕೃಷಿ ಅಧಿಕಾರಿ ಹರೀಶ, ಅಶೋಕ, ಕೊಪ್ಪಳ ಜಿಲ್ಲೆ ಕೃಷಿ ಪರಿಕರ ಮಾರಾಟಗಾರರ ಸಂಘದ ಜಿಲ್ಲಾ ಉಪಾಧ್ಯಕ್ಷ ಸುರೇಶ ಸೇರಿ ಗಂಗಾವತಿ ತಾಲ್ಲೂಕಿನ ಎಲ್ಲ ಕೃಷಿ ಪರಿಕರ ಮಾರಾಟಗಾರರು ಉಪಸ್ಥಿತರಿದ್ದರು.

ದಾಖಲೆಗಳ ಪರಿಶೀಲನೆ ಸಭೆಯ ನಂತರ ಗಂಗಾವತಿ ಪ್ರಭಾರ ತಹಶೀಲ್ದಾರ್ ರವಿ ಎಸ್ ಅಂಗಡಿ ತಾ.ಪಂ ಇಒ ರಾಮಲಿಂಗಾರೆಡ್ಡಿ ಕೃಷ್ಣ ಉಕ್ಕುಂದ ಸಂತೋಷ ಪಟ್ಟದಕಲ್ ಕೃಷಿ ಅಧಿಕಾರಿ ಪ್ರಕಾಶ ಅವರನ್ನು ಒಳಗೊಂಡ ತಂಡ ಗಂಗಾವತಿ ರಸಗೊಬ್ಬರಗಳ ಮಳಿಗೆಗಳಿಗೆ ಭೇಟಿ ನೀಡಿ ರಸಗೊಬ್ಬರ ಮಾರಾಟದ ದಾಖಲೆಗಳನ್ನು ಪರಿಶೀಲಿಸಿತು. ಇದರ ಭಾಗವಾಗಿ ಗಂಗಾವತಿ ಹರಿ ಅಗ್ರೊ ಏಜನ್ಸೀಜ್ ಶ್ರೀ ವಿಘ್ನೇಶ್ವರ ಟ್ರೇಡಿಂಗ್ ಕಂಪನಿ ಶ್ರೀ ಮಹೇಶ್ವರ ಟ್ರೇಡರ್ಸ್ ಸೇರಿ ಇತರೆ ರಸಗೊಬ್ಬರ ಮಳಿಗೆಗಳಿಗೆ ಭೇಟಿ ನೀಡಿ ದಾಖಲಾತಿ ಪಿ.ಒ. ಎಸ್ ಪರಿಶೀಲಿಸಿದರು. ಹಾಗೆಯೇ ಭೌತಿಕ ದಾಸ್ತಾನು ಸ್ಥಳಕ್ಕೆ ಭೇಟಿ ನೀಡಿ ಪರಿಸೀಲಿಸಿ ರಸಗೊಬ್ಬರ ವಿತರಣೆಯಲ್ಲಿ ಸಮಸ್ಯೆಗಳಿಗೆ ಆಸ್ಪದ ನೀಡದಂತೆ ಎಚ್ಚರಿಕೆ ವಹಿಸಬೇಕೆಂದು ವಿತರಕರಿಗೆ ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.