ADVERTISEMENT

ಗಂಗಾವತಿ | ಮೋರೆರ ಶಿಲಾ ಸಮಾಧಿಗಳ ರಕ್ಷಣೆ, ಅಭಿವೃದ್ಧಿಗೆ ಕ್ರಮ: ಕೆ.ಪಿ.ಮೋಹನ್

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2026, 5:44 IST
Last Updated 17 ಫೆಬ್ರುವರಿ 2026, 5:44 IST
ಗಂಗಾವತಿ ತಾಲ್ಲೂಕಿನ ಹಿರೇಬೆಣಕಲ್ ಗ್ರಾಮದ ಮೋರೆರ್ ಬೆಟ್ಟಕ್ಕೆ ಭಾನುವಾರ ಜಿ.ಪಂ.ಆಡಳಿತಾಧಿಕಾರಿ ಕೆ.ಪಿ. ಮೋಹನ್ ರಾಜ್ ಅವರು ಭೇಟಿ ನೀಡಿ, ಶಿಲಾ ಸಮಾಧಿಗಳ ರಕ್ಷಣೆ ಕುರಿತು ಭರವಸೆ ನೀಡಿದರು‌.
ಗಂಗಾವತಿ ತಾಲ್ಲೂಕಿನ ಹಿರೇಬೆಣಕಲ್ ಗ್ರಾಮದ ಮೋರೆರ್ ಬೆಟ್ಟಕ್ಕೆ ಭಾನುವಾರ ಜಿ.ಪಂ.ಆಡಳಿತಾಧಿಕಾರಿ ಕೆ.ಪಿ. ಮೋಹನ್ ರಾಜ್ ಅವರು ಭೇಟಿ ನೀಡಿ, ಶಿಲಾ ಸಮಾಧಿಗಳ ರಕ್ಷಣೆ ಕುರಿತು ಭರವಸೆ ನೀಡಿದರು‌.   

ಗಂಗಾವತಿ: ‘ಹಿರೇಬೆಣಕಲ್ ಗ್ರಾಮದ ಮೋರೆರ್ ಶಿಲಾ ಸಮಾಧಿಗಳ ಮನೆಗಳ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಿ ಅಗತ್ಯ ಸೌಲಭ್ಯ ಕಲ್ಪಿಸಲಾಗುತ್ತದೆ’ ಎಂದು ವಸತಿ ಇಲಾಖೆ ಕಾರ್ಯದರ್ಶಿ ಹಾಗೂ ಜಿಪಂ ಆಡಳಿತಾಧಿಕಾರಿ ಕೆ.ಪಿ.ಮೋಹನ್ ರಾಜ್ ಹೇಳಿದರು.

ತಾಲ್ಲೂಕಿನ ಹಿರೇಬೆಣಕಲ್ ಗ್ರಾಮದ ಮೋರೆರ್ ಬೆಟ್ಟಕ್ಕೆ ಭಾನುವಾರ ಭೇಟಿ ನೀಡಿ ಶಿಲಾ ಸಮಾಧಿಗಳನ್ನು ವೀಕ್ಷಿಸಿ ನಂತರ ಮಾತನಾಡಿದರು.

3 ಸಾವಿರ ವರ್ಷಗಳ ಇತಿಹಾಸವಿರುವ ಮೋರೆರ್ ಬೆಟ್ಟದಲ್ಲಿ 3 ಸಾವಿರ ಶಿಲಾ ಸಮಾಧಿಗಳಿದ್ದು, ಕ್ರಮೇಣ ಅಳಿವಾಗಿ 300 ರಿಂದ 400ಕ್ಕೆ ತಲುಪಿರಬಹುದು. ಹಾಗಾಗಿ ಸರ್ವೇಕ್ಷಣಾ ಇಲಾಖೆ ಬೆಟ್ಟದಲ್ಲಿನ 8 ವಿಧದ ಶಿಲಾ ಸಮಾಧಿಗಳ ಸರ್ವೇ ನಡೆಸಿ, ಸಂಖ್ಯೆ, ಅವುಗಳ ಗುಣಮಟ್ಟದ ಜೊತೆಗೆ ದುರಸ್ತಿ ಕೈ ಗೊಳ್ಳಬೇಕಾದ ಶಿಲಾಸಮಾಧಿಗಳ ಬಗ್ಗೆ ವರದಿ ನೀಡುವಂತೆ ತಿಳಿಸಲಾಗಿದೆ’ ಎಂದರು.

ADVERTISEMENT

‘ಶಿಲಾ ಸಮಾಧಿಗಳ ಸಂರಕ್ಷಣೆಗೆ ಅರಣ್ಯ ಇಲಾಖೆ ಆ್ಯಂಟಿ ಪೌಚಿಂಗ್ ಕ್ಯಾಂಪ್ ಹಾಕಿ ಸೋಲಾರ್ ಲೈಟ್, ಸಿಸಿಟಿವಿ ಕ್ಯಾಮರಾ ಅಳವಡಿಸಬೇಕು. ಶಿಲಾಸಮಾಧಿಗಳ 1 ಕಿ.ಮೀ. ಸುತ್ತು ತಂತಿ ಬೇಲಿ ಹಾಕಿ ರಕ್ಷಿಸಿ, ಹಿರೇಬೆಣಕಲ್ ಗ್ರಾಮದಿಂದ ಬೆಟ್ಟಕ್ಕೆ ಬರುವ ರಸ್ತೆ ಬಗ್ಗೆ ಮಾಹಿತಿ ಪಡೆಯಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮೋರೆರ ಬೆಟ್ಟದ ಅಭಿವೃದ್ಧಿ, ಪ್ರವಾಸಿಗರಿಗೆ ಸೌಲಭ್ಯ ಕಲ್ಪಿಸುವ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ’ ಎಂದರು.

ಇತಿಹಾಸ ತಜ್ಞ ಮಂಜುನಾಥ ದೊಡ್ಡಮನಿ ಅವರು ಬೆಟ್ಟಕ್ಕೆ ದಾರಿ ವ್ಯವಸ್ಥೆ, ಹಿರೇಬೆಣಕಲ್‌ನಲ್ಲಿರುವ ನಿರ್ಮಿತಿ ಕೇಂದ್ರವನ್ನು ಮ್ಯೂಸಿಯಂ ಮಾಡುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಮನವಿ ಸಲ್ಲಿಸಿದರು.

ಮೌನ ಧ್ಯಾನ ವ್ರತ ಸ್ಥಳಕ್ಕೆ ಭೇಟಿ: ಹಿರೇಬೆಣಕಲ್ ಮೋರೆರ ಶಿಲಾಸಮಾಧಿಗಳ ಸಂರಕ್ಷಣೆಗೆ ಒತ್ತಾಯಿಸಿ ಪರಿಸರ ಸೇವಾ ಟ್ರಸ್ಟ್ ಅಧ್ಯಕ್ಷ ಮಂಜುನಾಥ ಗುಡ್ಲಾನೂರು ಫೆ.13 ರಿಂದ ಫೆ.15ರವರೆಗೆ ಮೌನ ಧ್ಯಾನ ವ್ರತ ಕೈಗೊಂಡಿದ್ದರು. ಈ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ, ಜಿಪಂ ಸಿಇಒ ವರ್ಣಿತ್ ನೇಗಿ ಭೇಟಿ ನೀಡಿ, ಮೋರೆರ ಬೆಟ್ಟದ ಅಭಿವೃದ್ಧಿ ಮಾಡುವುದಾಗಿ ಭರವಸೆ ನೀಡಿದರು.

ತಾಪಂ ಇಒ ರಾಮರೆಡ್ಡಿ ಪಾಟೀಲ, ಪುರಾತತ್ವ ಸರ್ವೇಕ್ಷಣಾ ಇಲಾಖೆ ಸಂರಕ್ಷಣಾ ಸಹಾಯಕ ರವೀಂದ್ರ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ, ಅರಣ್ಯ ಇಲಾಖೆ ಆರ್‌ಎಫ್‌ಒ ಬಸವರಾಜ ಪೂಜಾರ, ಕೊಪ್ಪಳ ತಾಪಂ ಸಹಾಯಕ ನಿರ್ದೇಶಕ ಮಹೇಶ, ಪಿಡಿಒ ಇಂದಿರಾ, ನರೇಗಾ ವಿಭಾಗದ ಜಿಲ್ಲಾ ಲೆಕ್ಕ ವ್ಯವಸ್ಥಾಪಕ ಪಂಪನಗೌಡ, ಸ್ಥಳೀಯರಾದ ವೀರೇಶ ಅಂಗಡಿ, ಬಸನಗೌಡ ಹೊಸಳ್ಳಿ, ಈಶಪ್ಪ ಕುಂಬಾರ, ಚಂದ್ರಶೇಖರ ಕುಂಬಾರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.