ADVERTISEMENT

ಗಂಗಾವತಿ | ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಶೇ 94ರಷ್ಟು ಪೂರ್ಣ: ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2025, 6:18 IST
Last Updated 18 ಅಕ್ಟೋಬರ್ 2025, 6:18 IST
<div class="paragraphs"><p>ಗಂಗಾವತಿ ನಗರಸಭೆಯ ಪೌರಾಯುಕ್ತರ ಕಚೇರಿಯಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಸುರೇಶ ಬಿ ಇಟ್ನಾಳ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು</p></div>

ಗಂಗಾವತಿ ನಗರಸಭೆಯ ಪೌರಾಯುಕ್ತರ ಕಚೇರಿಯಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಸುರೇಶ ಬಿ ಇಟ್ನಾಳ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು

   

ಗಂಗಾವತಿ: ಇಲ್ಲಿನ ನಗರಸಭೆಯ ಪೌರಾಯುಕ್ತರ ಕಚೇರಿಯಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಸುರೇಶ ಬಿ. ಇಟ್ನಾಳ ಅವರು ಅಧಿಕಾರಿಗಳೊಂದಿಗೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಪ್ರಗತಿ ಮತ್ತು ಉಳಿಕೆ ಸಮೀಕ್ಷೆ ಕುರಿತು ಸಭೆ ನಡೆಸಿದರು.

ನಂತರ ಪತ್ರಕರ್ತರಿಗೆ ಮಾಹಿತಿ ನೀಡಿ, ‘ಕೊಪ್ಪಳ ಮತ್ತು ಗಂಗಾವತಿ ನಗರದಲ್ಲಿ ಸಮೀಕ್ಷೆ ಮಾಡುವುದು ಬಾಕಿಯಿದೆ. ಈಗಾಗಲೇ ಶೇ 90ರಷ್ಟು ಸಮೀಕ್ಷೆ ಪೂರ್ಣಗೊಂಡಿದೆ. 2011, 2015ಕ್ಕಿಂತಲೂ ಹೆಚ್ಚಾಗಿ ಸಮೀಕ್ಷೆ ನಡೆಸಲಾಗಿದೆ. ಈ ವರ್ಷದ ಅಂತ್ಯ 17.15 ಲಕ್ಷ ಜನಸಂಖ್ಯೆ ಇರಬೇಕು ಎಂದು ಯೋಜನಾ ಇಲಾಖೆ ವರದಿ ನೀಡಿದೆ. ಆ ಸಂಖ್ಯೆಯನ್ನ ಮುಟ್ಟಲು ಸಮೀಕ್ಷೆ ನಡೆಸಲಾಗುತ್ತಿದೆ. ಜಿಲ್ಲೆಯಾದ್ಯಂತ ‌ಶೇ 94 ರಷ್ಟು ಸಮೀಕ್ಷೆ ಪೂರ್ಣಗೊಂಡಿದೆ’ ಎಂದರು.

ADVERTISEMENT

‘ಗಂಗಾವತಿ ರಸ್ತೆಗಳ ದುರಸ್ತಿ ಬಗ್ಗೆ ಪ್ರಶ್ನಿಸಿದಾಗ, ಈಗಾಗಲೇ ಗಂಗಾವತಿ ರಸ್ತೆಗಳ ಬಗ್ಗೆ ಮಾಹಿತಿ ಪಡೆದಿದ್ದೇನೆ. ಗುಂಡಿಗಳು ಎಲ್ಲೆಲ್ಲಿವೆ ಎಂಬುದು ಪರಿಶೀಲಿಸಿ, ತಾತ್ಕಾಲಿಕವಾಗಿ ರಸ್ತೆಗಳು ಸರಿಪಡಿಸುವಂತೆ ಸೂಚನೆ ನೀಡಲಾಗಿದೆ. ನವೆಂಬರ್‌ 5ರ ನಂತರ ಗಂಗಾವತಿ ನಗರದ ಬಗ್ಗೆ ವಿಶೇಷ ಕಾಳಜಿವಹಿಸಿ, ಇಲ್ಲಿ ಆಗಬೇಕಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಭೆ ನಡೆಸಿ, ಕ್ರಮಗಳು ಕೈಗೊಳ್ಳಲಾಗುತ್ತದೆ’ ಜಿಲ್ಲಾಧಿಕಾರಿ ತಿಳಿಸಿದರು.

ಈ ವೇಳೆ ನಗರಸಭೆ ಪೌರಾಯುಕ್ತ ಆರ್.ವಿರೂಪಾಕ್ಷಮೂರ್ತಿ, ತಹಶೀಲ್ದಾರ್‌ ಯು.ನಾಗರಾಜ, ಡಿಡಿಪಿಐ ಸೋಮಶೇಖರಗೌಡ, ತಾಲ್ಲೂಕು ಪಂಚಾಯಿತಿ ಇಒ ರಾಮರೆಡ್ಡಿ ಪಾಟೀಲ, ಸಿಡಿಪಿಒ ಜಯಶ್ರೀ, ಬಿಇಒ ನಟೇಶ ಸೇರಿ ನಗರಸಭೆ ಎಂಜಿನಿಯರ್‌ಗಳು, ಅಧಿಕಾರಿಗಳು ಉಪಸ್ಥಿತರಿದ್ದರು.

ಕಾಮಗಾರಿಗಳ ಪರಿಶೀಲನೆ: ಜಿಲ್ಲಾಧಿಕಾರಿ ಸುರೇಶ ಬಿ. ಇಟ್ನಾಳ ಶುಕ್ರವಾರ ಬೆಳಿಗ್ಗೆ ಏಕಾಏಕಿ ಭೇಟಿ ನೀಡಿ, ನಗರಸಭೆ ಕಾರ್ಯಾಲಯ ಆವರಣದಲ್ಲಿ ಅಳವಡಿಕೆ ಮಾಡುತ್ತಿರುವ ಪೇವರ್ಸ್, ಕಚೇರಿ ಒಳಗೆ ಮಾಡುತ್ತಿರುವ ಪಿಒಪಿ ಕಾಮಗಾರಿ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದು, ಕಾಮಗಾರಿ ವೆಚ್ಚದ ದಾಖಲೆಗಳು ಪರಿಶೀಲಿಸಿದರು.

ಆವರಣದಲ್ಲಿ ನಡೆಸಿದ ಚರಂಡಿ ಮತ್ತು ಕಾಮಗಾರಿ ಗುಣಮಟ್ಟತೆ ಪರಿಶೀಲಿಸಿದರು. ಕಿಲ್ಲಾ ಏರಿಯಾದಲ್ಲಿನ ಕೊಳಚೆ ಪ್ರದೇಶಕ್ಕೆ ಮೂಲಸೌಕರ್ಯ ಒದಗಿಸುವ ಮತ್ತು ಅಲ್ಲಿನ ಸಾರ್ವಜನಿಕ ಶೌಚಾಲಯ ಒತ್ತುವರಿಯಾದ ಬಗ್ಗೆ ಮಾಹಿತಿ ಪಡೆದು ಸಂಬಂಧಪಟ್ಟ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡರು.