ADVERTISEMENT

ಗಂಗಾವತಿ: ಕಣ್ಣೆದುರೇ ಅಪಾಯವಿದ್ದರೂ ಹುಚ್ಚು ಸಾಹಸ

ಪ್ರವಾಸಿ ತಾಣಗಳಲ್ಲಿ ಮೋಜಿನ ಭರಾಟೆ, ವಾಟರ್‌ ಫಾಲ್ಸ್‌ ಬಳಿ ಇಲ್ಲ ಎಚ್ಚರಿಕೆ ಫಲಕ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2025, 6:54 IST
Last Updated 21 ಫೆಬ್ರುವರಿ 2025, 6:54 IST
ಗಂಗಾವತಿ ತಾಲ್ಲೂಕಿನ ಸಾಣಾಪುರದ ಫಾಲ್ಸ್‌ ಬಳಿ ನೆರೆದಿರುವ ಯುವಕರು
ಗಂಗಾವತಿ ತಾಲ್ಲೂಕಿನ ಸಾಣಾಪುರದ ಫಾಲ್ಸ್‌ ಬಳಿ ನೆರೆದಿರುವ ಯುವಕರು   

ಗಂಗಾವತಿ: ತುಂಗಭದ್ರಾ ನದಿಯ ಅಂಚಿಗಿರುವ ತಾಲ್ಲೂಕಿನ ಆನೆಗೊಂದಿ, ಸಾಣಾಪುರ ಹಾಗೂ ಸುತ್ತಮುತ್ತಲಿನ ಮನಮೋಹಕ ಪ್ರವಾಸಿ ತಾಣಗಳು ಈಗ ಸಾವಿನ ಕೂಪಗಳಾಗುತ್ತಿವೆ. ಇಲ್ಲಿನ ಅಪಾಯದ ಆಳ ಅಗಲ ಅರಿಯದೇ ಪ್ರವಾಸಿಗರು ಮಾಡುತ್ತಿರುವ ಹುಚ್ಚು ಸಾಹಸಕ್ಕೆ ತಮ್ಮ ಪ್ರಾಣವನ್ನೇ ಕಳೆದುಕೊಳ್ಳುವಂತಾಗುತ್ತಿದೆ.

ಮುಖ್ಯವಾಗಿ ಸಾಣಾಪುರ ಗ್ರಾಮದ ವಾಟರ್ ಫಾಲ್ಸ್‌ ಮತ್ತು ಕೆರೆಗೆ ವಾರಾಂತ್ಯದ ದಿನಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಭೇಟಿ ನೀಡುವ ಪ್ರವಾಸಿಗರು ಮೋಜು, ಮಸ್ತಿ, ಸಾಮಾಜಿಕ ಜಾಲತಾಣಗಳ ಬಳಕೆಯ ಗೀಳು ಅಂಟಿಸಿಕೊಂಡು ರೀಲ್ಸ್‌ ಮಾಡುವುದು, ಸೆಲ್ಫಿಗಾಗಿ ಅಪಾಯಕಾರಿ ಸ್ಥಳಗಳಲ್ಲಿ ಮುನ್ನುಗ್ಗುವುದು, ಫೋಟೊ ತೆಗೆಯಿಸಿಕೊಳ್ಳಲು ಅಪಾಯಕಾರಿ ಸ್ಥಳದಿಂದ ಎತ್ತರದಿಂದ ಜಿಗಿಯುವ ಸಾಹಸ ಮಾಡುತ್ತಿದ್ದಾರೆ. ಇವುಗಳ ನಿಯಂತ್ರಣಕ್ಕೆ ಸ್ಥಳೀಯ ರೆಸಾರ್ಟ್‌ಗಳಾಗಲಿ ಹಾಗೂ ತಾಲ್ಲೂಕು ಆಡಳಿತವಾಗಲಿ ಕಡಿವಾಣ ಹಾಕುತ್ತಿಲ್ಲ ಎನ್ನುವುದು ಜನರ ದೂರು.

ತುಂಗಭದ್ರಾ ನದಿ ನೀರು ನಿರಂತರವಾಗಿ ಹರಿದು ಕಲ್ಲುಗಳು ಕಲಾಕೃತಿಗಳಂತಾಗಿವೆ. ಈ ಸೌಂದರ್ಯವನ್ನು ಕಣ್ತುಂಬಿಕೊಳ್ಳುವ ಸಲುವಾಗಿ ರಾಜ್ಯ, ಹೊರರಾಜ್ಯ ಹಾಗೂ ವಿದೇಶಗಳಿಂದ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಅದರಲ್ಲಿಯೂ ಯುವಜನತೆಯೇ ಹೆಚ್ಚು. ಅಪಾಯಕಾರಿ ಸ್ಥಳಗಳಲ್ಲಿ ಈಜಲು ನಿಷೇಧವಿದೆ ಎನ್ನುವ ಎಚ್ಚರಿಕೆ ಫಲಕಗಳನ್ನೂ ಆಡಳಿತ ಹಾಕಿಲ್ಲ. ಇದರಿಂದ ಹಿಂದೆ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಈಗ ಹೈದರಾಬಾದ್‌ನ ವೈದ್ಯೆ ಅನನ್ಯರಾವ್‌ ಪ್ರಾಣ ತೆತ್ತಿದ್ದಾರೆ. ಹಿಂದೆಯೂ ಇಂಥ ಹಲವು ಘಟನೆಗಳು ನಡೆದಿವೆ.

ADVERTISEMENT

ಸಾಣಾಪುರ ವಾಟರ್‌ ಫಾಲ್ಸ್‌ ಕೊರಕಲು ಕಲ್ಲುಗಳಿಂದ ಕೂಡಿದ ಸ್ಥಳ. ಇಲ್ಲಿ ಸಾಕಷ್ಟು ಸುರಂಗ, ನೀರಿನಲ್ಲಿ ಚೂಪಾದ ಕಲ್ಲುಗಳಿವೆ. ಇವುಗಳ ಮೇಲೆಯೆ ತುಂಗಭದ್ರಾ ನೀರು ಹರಿಯುತ್ತದೆ. ನೀರಿನ ಪ್ರಮಾಣ ಹೆಚ್ಚಿದ್ದಾಗ ಕಲ್ಲುಗಳು ಕಾಣುವುದಿಲ್ಲ. ಇದನ್ನು ಅರಿಯದೇ ಪ್ರವಾಸಿಗರು ಸುರಕ್ಷಾ ಕವಚ ಧರಿಸದೇ ನೀರಿಗೆ ಧುಮುಕುತ್ತಾರೆ.

ಸಾಣಾಪುರ ಭಾಗದಲ್ಲಿ ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ಫೋಟೊಗಳನ್ನು ಸೆರೆ ಹಿಡಿಯಲು ಕಲ್ಲಿನ ಅಂಚಿನಲ್ಲಿ ನಿಲ್ಲುತ್ತಾರೆ. ಪ್ರವಾಸಿಗರನ್ನು ಸೆಳೆಯಲು ಸ್ಥಳೀಯರು ‘ಕ್ಲಿಪ್ ಜಂಪಿಂಗ್’ ಹೆಸರಲ್ಲಿ ಅವರನ್ನು ನೀರಿಗೆ ಹಾರಿಸಿ ಹಣ ಪಡೆಯುವುದನ್ನೂ ಉದ್ಯೋಗ ಮಾಡಿಕೊಂಡಿದ್ದಾರೆ. ಇವುಗಳನ್ನು ಸಾಮಾಜಿಕ ತಾಣಗಳಲ್ಲಿ ಹಂಚಿಕೊಳ್ಳುತ್ತಿರುವುದರಿಂದ ಇವು ಯುವ ಜನತೆಯನ್ನು ಆಕರ್ಷಿಸುತ್ತಿವೆ. ಇವುಗಳಿಗೆ ಕಡಿವಾಣ ಹಾಕಬೇಕು ಎನ್ನುವುದು ಸ್ಥಳೀಯರ ಆಗ್ರಹವಾಗಿದೆ. ಒಂದು ದಿನದ ಹಿಂದೆಯಷ್ಟೇ ಫಾಲ್ಸ್‌ ಬಳಿ ದುರ್ಘಟನೆ ನಡೆದರೂ ಕೆಲವು ಯುವಕರು ಹುಚ್ಚು ಸಾಹಸಕ್ಕೆ ಬಂದಿದ್ದರು.  

‘ಕೆಲ ರೆಸಾರ್ಟ್‌ಗಳ ಮಾಲೀಕರು ಹಾಗೂ ಸ್ಥಳೀಯರು ಪ್ರವಾಸಿಗರಿಗೆ ವಾಟರ್ ಫಾಲ್ಸ್‌ನಲ್ಲಿ ಈಜಾಡಲು ಒಳ್ಳೆಯ ಸ್ಥಳಗಳಿವೆ ಎಂಬ ಸುಳ್ಳು ಮಾಹಿತಿ ನೀಡುತ್ತಿದ್ದು, ಹೊರಗಡೆಯಿಂದ ಬಂದವರು ಅಪಾಯ ಅರಿಯದೆ ಜೀವ ಕಳೆದುಕೊಳ್ಳುತ್ತಿದ್ದಾರೆ. ಜಂಪಿಂಗ್‌ ವ್ಯವಸ್ಥೆಗೆ ಕಡಿವಾಣ ಹಾಕಿ, ಎಲ್ಲ ಕಡೆಯೂ ಅಪಾಯದ ನಾಮಫಲಕಗಳನ್ನು ಅಳವಡಿಸಬೇಕು’ ಎಂದು ಸಾಣಾಪುರ ಗ್ರಾಮದ ನಿವಾಸಿ ಶರೀಫ್ ಪಟ್ವಾರಿ ಒತ್ತಾಯಿಸಿದರು.

ಸಾಣಾಪುರದ ಫಾಲ್ಸ್‌ ಸುತ್ತಲು ಗುರುವಾರ ನಡೆದ ಕಾರ್ಯಾಚರಣೆ ನೋಟ

Highlights - ವಾಟರ್ ಫಾಲ್ಸ್‌ನಲ್ಲಿ ಮೋಜು-ಮಸ್ತಿ ಹುಚ್ಚು ಸ್ಥಳೀಯರಿಂದ ಪ್ರವಾಸಿಗರಿಗೆ ತಪ್ಪು ಮಾಹಿತಿ ಯುವಜನತೆಯನ್ನು ಆಕರ್ಷಿಸುವ ಸಾಹಸದ ವಿಡಿಯೊಗಳು

Quote - ಸಾಣಾಪುರ ಗ್ರಾಮದ ರೆಸಾರ್ಟ್‌ಗಳಲ್ಲಿ ತಂಗುವ ಪ್ರವಾಸಿಗರಿಗೆ ನದಿಪಾತ್ರ ಮತ್ತು ನಿಷೇಧಿತ ಸ್ಥಳಗಳಿಗೆ ತೆರಳದಂತೆ ಸೂಚಿಸಲಾಗಿದೆ. ಮುನ್ನಚ್ಚರಿಕೆ ನಾಮಫಲಕ ಅಳವಡಿಕೆ ಬಗ್ಗೆ ಕ್ರಮ ವಹಿಸಲಾಗುವುದು. ವತ್ಸಲಾ ಪಿಡಿಒ ಸಾಣಾಪುರ ಗ್ರಾಮ ಪಂಚಾಯಿತಿ

Cut-off box - null

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.