ADVERTISEMENT

ಗಂಗಾವತಿ| ಅಕ್ರಮ ರೆಸಾರ್ಟ್‌ ಸ್ವಯಂ ತೆರವು ಮಾಡದಿದ್ದರೆ ಕ್ರಮ: ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2023, 15:48 IST
Last Updated 19 ಜೂನ್ 2023, 15:48 IST
ರೆಸಾರ್ಟ್‌ ತರವು
ರೆಸಾರ್ಟ್‌ ತರವು    

ಗಂಗಾವತಿ (ಕೊಪ್ಪಳ ಜಿಲ್ಲೆ): ವಿಶ್ವ ಪರಂಪರೆಯ ತಾಣವಾದ ಹಂಪಿ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುವ ಗಂಗಾವತಿ ತಾಲ್ಲೂಕಿನ ಗ್ರಾಮಗಳಲ್ಲಿ ಅನಧಿಕೃತವಾಗಿ ತಲೆ ಎತ್ತಿರುವ ರೆಸಾರ್ಟ್‌ಗಳನ್ನು ಸ್ವಯಂ ಪ್ರೇರಿತವಾಗಿ ತೆರವು ಮಾಡಬೇಕು, ಇಲ್ಲವಾದರೆ ಮಂಗಳವಾರ ಜಿಲ್ಲಾಡಳಿತವೇ ತೆಗೆದು ಹಾಕಲಿದೆ ಎಂದು ಉಪ ವಿಭಾಗಾಧಿಕಾರಿ ಬಸವಣ್ಣೆಪ್ಪ ಕಲಶೆಟ್ಟಿ ತಿಳಿಸಿದರು.

ನ್ಯಾಯಾಲಯದ ಆದೇಶದ ಮೇರೆಗೆ ಜಿಲ್ಲಾಡಳಿತ ಸೋಮವಾರವೇ ತೆರವು ಮಾಡುವುದಾಗಿ ಹೇಳಿತ್ತು. ಇದಕ್ಕೂ ಮೊದಲು ರೆಸಾರ್ಟ್‌ಗಳ ಮಾಲೀಕರ ಜೊತೆ ಕಲಶೆಟ್ಟಿ ಸಭೆ ನಡೆಸಿದರು. ಕೆಲ ಮಾಲೀಕರು ಸ್ವಯಂ ಪ್ರೇರಿತರಾಗಿ ತೆರವುಗೊಳಿಸಿದರು.

‘ಆನೆಗೊಂದಿ, ಸಾಣಾಪುರ, ಹನುಮನಹಳ್ಳಿ ಭಾಗದಲ್ಲಿ ಅನುಮತಿಯಿಲ್ಲದೇ ನಿರ್ಮಾಣ ಮಾಡಿಕೊಂಡಿದ್ದ ರೆಸಾರ್ಟ್‌ಗಳನ್ನು ತೆರವು ಮಾಡಿಸುವಂತೆ ನ್ಯಾಯಾಲಯ ಹೇಳಿದೆ. 15 ರೆಸಾರ್ಟ್‌ಗಳ ಮಾಲೀಕರು ನ್ಯಾಯಾಲಯದಲ್ಲಿ ರಿಟ್‌ ಅರ್ಜಿ ಸಲ್ಲಿಸಿದ್ದು, ಅಂಥವರ ರೆಸಾರ್ಟ್‌ಗಳನ್ನು ಹೊರತುಪಡಿಸಿ ಉಳಿದವುಗಳನ್ನು ಮಂಗಳವಾರ ತೆರವುಗೊಳಿಸಲಾಗುವುದು’ ಎಂದು ಕಲಶೆಟ್ಟಿ ತಿಳಿಸಿದರು.

ADVERTISEMENT

ನಗರದ ಆನೆಗೊಂದಿ ಉತ್ಸವ ಮೈದಾನದಲ್ಲಿ ನಡೆದ ಅಧಿಕಾರಿಗಳ ಜೊತೆಗಿನ ಸಭೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿ ‘ಅಕ್ರಮವಾಗಿ ನಿರ್ಮಿಸಿಕೊಂಡ ರೆಸಾರ್ಟ್‌ಗಳ ತೆರವಿಗೆ ಹಿಂದೆ ನೋಟಿಸ್‌ ಕೊಡಲಾಗಿತ್ತು. ನ್ಯಾಯಾಲಯದ ಆದೇಶದಂತೆ ರೆಸಾರ್ಟ್‌ಗಳನ್ನು ಜಪ್ತಿ ಮಾಡಿ ಬೀಗ ಮುದ್ರೆ ಸಹ ಹಾಕಲಾಗಿತ್ತು. ಆದರೂ ಕೆಲ ರೆಸಾರ್ಟ್‌ಗಳು ಮತ್ತೆ ಆರಂಭವಾದವು. ಅವುಗಳನ್ನು ತೆರವು ಮಾಡಲಾಗುವುದು’ ಎಂದರು.

ಸೋಮವಾರ ಮಧ್ಯಾಹ್ನಪೋಲಿಸ್, ಕಂದಾಯ, ಜೆಸ್ಕಾಂ, ಅರಣ್ಯ, ಅಬಕಾರಿ, ನೀರಾವರಿ, ಗ್ರಾ.ಪಂ ಸಿಬ್ಬಂದಿಗೆ ಆನೆಗೊಂದಿ ಉತ್ಸವ ಮೈದಾನದಲ್ಲಿ ತಂಡಗಳನ್ನಾಗಿ ಮಾಡಿ ಕಳುಹಿಸಲಾಗಿದೆ. ಈ ತಂಡಗಳು ವಿವಿಧ ಗ್ರಾಮಗಳಲ್ಲಿನ ಅನಧಿಕೃತ ರೆಸಾರ್ಟ್‌ಗಳಿಗೆ ತೆರಳಿ ಕೆಲವುಗಳಿಗೆ ಬೀಗ ಮುದ್ರೆ ಹಾಕಿದರೆ, ಇನ್ನೂ ಕೆಲವರು ಸ್ವಯಂ ಆಗಿ ತೆರವು ಮಾಡಲು ಸೂಚಿಸಿದರು.

ಸಾಣಾಪುರ, ಹನುಮನಹಳ್ಳಿ, ಚಿಕ್ಕರಾಂಪುರ, ಆನೆಗೊಂದಿ, ರಂಗಾಪುರ ಭಾಗದಲ್ಲಿನ ಹಲವು ರೆಸಾರ್ಟ್‌ಗಳ ಮಾಲೀಕರು ಸ್ವಯಂ ಪ್ರೇರಿತವಾಗಿ ಕೂಲಿ ಕಾರ್ಮಿಕ ನೆರವಿನಿಂದ ವಸ್ತುಗಳನ್ನು ಹೊರಹಾಕಿ, ತೆರವು ಮಾಡಿಕೊಂಡರು.

‘ಹಲವು ವರ್ಷಗಳಿಂದ ಹೊಟ್ಟೆ ಪಾಡಿಗಾಗಿ ರೆಸಾರ್ಟ್‌ಗಳನ್ನು ನಡೆಸುತ್ತ ಬಂದಿದ್ದೇವೆ. ಹಂಪಿ ಸುತ್ತಮುತ್ತ ಇರುವ ಐತಿಹಾಸಿಕ ಸ್ಥಳಗಳ ವೀಕ್ಷಣೆ ಗೆ ಆಗಮಿಸುವ ಪ್ರವಾಸಿಗರಿಗೆ ಊಟ, ವಸತಿ ನೀಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೇವೆ. ದಯವಿಟ್ಟು ಹೊಟ್ಟೆಯ ಮೇಲೆ ಹೊಡೆಯಬೇಡಿ’ ಎಂದು ರೆಸಾರ್ಟ್‌ಗಳ ಮಾಲೀಕರು ಮನವಿ ಮಾಡಿದರು.

ಗಂಗಾವತಿ ತಹಶೀಲ್ದಾರ್‌ ಮಂಜುನಾಥ, ಡಿವೈಎಸ್ಪಿ ರುದ್ರೇಶ ಉಜ್ಜನಕೊಪ್ಪ, ಗ್ರಾಮೀಣ ಠಾಣೆ ಪೊಲೀಸ್ ಇನ್‌ಸ್ಟೆಕ್ಟರ್‌ ಮಂಜುನಾಥ ಸೇರಿ ಬೇರೆ ಬೇರೆ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.