ADVERTISEMENT

ಬಿಜೆಪಿ ಕಟ್ಟಿದ್ದು ನಾನೇ ಎಂದು ಹೇಳುವ ರೆಡ್ಡಿ ಹೇಳಿಕೆ ಸರಿ ಅಲ್ಲ: ಗಂಗಾವತಿ ಶಾಸಕ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2022, 11:19 IST
Last Updated 25 ಡಿಸೆಂಬರ್ 2022, 11:19 IST
ಜನಾರ್ದನ ರೆಡ್ಡಿ
ಜನಾರ್ದನ ರೆಡ್ಡಿ    

ಕೊಪ್ಪಳ: ಬಿಜೆಪಿ ಕಟ್ಟಿ ಬೆಳಸಿದ್ದು ನಾನೇ ಎನ್ನುವುದು ಜನಾರ್ದನ ರೆಡ್ಡಿ ಅವರ ವೈಯಕ್ತಿಕ ಹೇಳಿಕೆಯಾಗಿದ್ದು, ಅವರೊಬ್ಬರೇ ಮಾತ್ರವಲ್ಲ ಅನೇಕರು ಸೇರಿ ಪಕ್ಷ ಕಟ್ಟಿದ್ದಾರೆ ಎಂದು ಜಿಲ್ಲೆಯ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಹೇಳಿದರು.

ಗಂಗಾವತಿಯಲ್ಲಿ ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಪಕ್ಷವನ್ನು ಯಾವುದೇ ಒಬ್ಬ ವ್ಯಕ್ತಿಯಿಂದ ಮಾತ್ರ ಕಟ್ಟಲು ಸಾಧ್ಯವಿಲ್ಲ. ಎಲ್ಲರೂ ಸೇರಿ ಕಟ್ಟಿದ್ದಾರೆ. ರಾಜ್ಯ ಹಾಗೂ ರಾಷ್ಟ್ರೀಯ ಅಧ್ಯಕ್ಷರು, ಅನಂತಕುಮಾರ್‌, ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ಹಿರಿಯರು ಪಕ್ಷಕ್ಕಾಗಿ ದುಡಿದಿದ್ದಾರೆ’ ಎಂದರು.

‘ಗಂಗಾವತಿ ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಬಿಜೆಪಿಯಿಂದ ಶಾಸಕನಾಗಿದ್ದಾನೆ. 2023ರ ಚುನಾವಣೆಯಲ್ಲಿ ನಾನೇ ಅಭ್ಯರ್ಥಿಯಾಗಲು ಬಯಸಿದ್ದೇನೆ. ಈ ಕ್ಷೇತ್ರಕ್ಕೆ ಯಾರೇ ಬಂದು ಸ್ಪರ್ಧಿಸಿದರೂ ಗೆಲುವು ಮಾತ್ರ ಬಿಜೆಪಿಯೇ ಸಾಧಿಸುತ್ತದೆ. ನನ್ನ ಟಿಕೆಟ್ ಬಗ್ಗೆ ಹೈಕಮಾಂಡ್‌ ತೀರ್ಮಾನ ಮಾಡುತ್ತದೆ’ ಎಂದರು.

ADVERTISEMENT

'ಜನಾರ್ದನ ರೆಡ್ಡಿ ಹೊಸ ಪಕ್ಷದಿಂದ ನಮಗೆ ಆಗುವ ನಕಾರಾತ್ಮಕ ಮತ್ತು ಸಕಾರಾತ್ಮಕ ಪರಿಣಾಮಗಳ ಬಗ್ಗೆ ಮತದಾರರೇ ನಿರ್ಣಯ ಮಾಡುತ್ತಾರೆ. ನಾವೇ ಎಲ್ಲವನ್ನೂ ನಿರ್ಣಯ ಮಾಡುವುದಾದರೆ ಮತದಾರರು ಯಾಕೆ ಇರಬೇಕು’ ಎಂದು ಪ್ರಶ್ನಿಸಿದ ಅವರು ‘2008ರ ಚುನಾವಣೆಯಲ್ಲಿ ಗಂಗಾವತಿ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಡುವೆ ತ್ರಿಕೋನ ಸ್ಪರ್ಧೆ ನಡೆದಿತ್ತು. ಆಗಲೂ ನಾನೇ ಗೆಲುವು ಪಡೆದಿದ್ದೆ’ ಎಂದರು.

‘ನನಗೆ ಪಕ್ಷವೇ ಮೊದಲು. ಮತದಾರರು ಕೈಗೊಳ್ಳುವ ನಿರ್ಧಾರವೇ ಅಂತಿಮ. ಜನಾರ್ದನ ರೆಡ್ಡಿ ಬಹಳಷ್ಟು ವರ್ಷಗಳಿಂದ ನನ್ನ ಸಂಪರ್ಕದಲ್ಲಿ ಇಲ್ಲ. ಜನರ ಸಂಪರ್ಕದಲ್ಲಿಯೂ ಇಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.