ADVERTISEMENT

ಗಂಗಾವತಿ ನಗರಸಭೆ | ಭೂಸ್ವಾಧೀನ ಕುರಿತು ಚರ್ಚೆ: ಅವಧಿ ಮುಗಿದರೂ ಸಾಮಾನ್ಯ ಸಭೆ?

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2025, 5:41 IST
Last Updated 8 ನವೆಂಬರ್ 2025, 5:41 IST
ಗಂಗಾವತಿ ನಗರದ ನಗರಸಭೆ ಸಭಾಂಗಣದಲ್ಲಿ ಶುಕ್ರವಾರ ಪೌರಾಯುಕ್ತರು ನಗರಸಭೆ ಚುನಾಯಿತ ಪ್ರತಿನಿಧಿಗಳ ಅಧಿ ಕಾರಾವಧಿ ಮುಕ್ತಾಯವಾದರೂ, ನಗರಸಭೆ ಅಧ್ಯಕ್ಷ, ಸದ ಸ್ಯರ ಜೊತೆ ಕಾನೂನುಬಾಹಿರವಾಗಿ ವಿಶೇಷ ಸಾಮಾನ್ಯ ಸಭೆ ನಡೆಸಿದರು..
ಗಂಗಾವತಿ ನಗರದ ನಗರಸಭೆ ಸಭಾಂಗಣದಲ್ಲಿ ಶುಕ್ರವಾರ ಪೌರಾಯುಕ್ತರು ನಗರಸಭೆ ಚುನಾಯಿತ ಪ್ರತಿನಿಧಿಗಳ ಅಧಿ ಕಾರಾವಧಿ ಮುಕ್ತಾಯವಾದರೂ, ನಗರಸಭೆ ಅಧ್ಯಕ್ಷ, ಸದ ಸ್ಯರ ಜೊತೆ ಕಾನೂನುಬಾಹಿರವಾಗಿ ವಿಶೇಷ ಸಾಮಾನ್ಯ ಸಭೆ ನಡೆಸಿದರು..   

ಗಂಗಾವತಿ: ನಗರಸಭೆ ಚುನಾಯಿತ ಪ್ರತಿನಿಧಿಗಳ ಅಧಿಕಾರಾವಧಿ ನ.1ಕ್ಕೆ ಮುಕ್ತಾಯವಾಗಿದ್ದರೂ ಪೌರಾಯುಕ್ತ ಆರ್.ವಿರೂಪಾಕ್ಷಮೂರ್ತಿ ನಗರಸಭೆ ಸಭಾಂಗಣದಲ್ಲಿ ಶುಕ್ರವಾರ ಅಧ್ಯಕ್ಷೆ ಹೀರಬಾಯಿ ನೇತೃತ್ವದಲ್ಲಿ ವಿಶೇಷ ಸಾಮಾನ್ಯ ಸಭೆ ನಡೆಸಿದ್ದು, ಇದು ಕಾನೂನು ಬಾಹಿರ ಎನ್ನುವ ಆರೋಪ ಕೇಳಿಬಂದಿದೆ.

ಪ್ರತಿನಿಧಿಗಳ ಅಧಿಕಾರಾವಧಿ ಮುಕ್ತಾಯವಾದ ಬಗ್ಗೆ ರಾಜ್ಯ ಸರ್ಕಾರ ನಗರ ಸ್ಥಳೀಯ ಸಂಸ್ಥೆಗಳ ಆಡಳಿತದ ಹಿತದೃಷ್ಟಿಯಿಂದ ನ.3ಕ್ಕೆ ಜಿಲ್ಲಾಧಿಕಾರಿಯನ್ನು ಆಡಳಿತಾಧಿಕಾರಿಯಾಗಿ ನೇಮಿಸಿದೆ. ಈ ಕುರಿತು ರಾಜ್ಯಪತ್ರವೂ ಪ್ರಕಟವಾಗಿದೆ. 

ಇಲ್ಲಿನ ಜಯನಗರದಲ್ಲಿನ ನಗರಸಭೆಗೆ ಸಂಬಂಧಿಸಿದ ವಿವಾದಿತ ಜಮೀನು ಭೂಸ್ವಾಧೀನಪಡಿಸಿಕೊಳ್ಳುವ ಬಗ್ಗೆ ಮಾಹಿತಿ ನೀಡಿ ಸದಸ್ಯರಿಂದ ಒಪ್ಪಿಗೆ ಪಡೆದುಕೊಂಡಿದ್ದಾರೆ.

ADVERTISEMENT

ಸಭೆಯಲ್ಲಿ ಮಾತನಾಡಿದ ಪೌರಾಯುಕ್ತರು, ‘ಜಯನಗರದಲ್ಲಿ 3ನೇ ವಾರ್ಡ್‌ ಬಳಿ ನಗರಸಭೆ ಸಂಬಂಧಿಸಿದ 11 ಗುಂಟೆ ಜಮೀನು ಇದೆ. ಈ ಸ್ಥಳದಲ್ಲಿ ಲೋಕೋಪಯೋಗಿ ಇಲಾಖೆ 2005ರಲ್ಲಿ ಟೆಂಡರ್ ಮೂಲಕ ರಸ್ತೆ ನಿರ್ಮಿಸಿ, 2013ರಲ್ಲಿ ಕಾನೂನು ಪ್ರಕಾರ ನಗರಸಭೆಗೆ ಹಸ್ತಾಂತರ ಮಾಡಿದೆ. ರಸ್ತೆ ನಿರ್ಮಾಣದ ವೇಳೆ ಯಾವ ತಕಾರರು ಬಂದಿಲ್ಲ. ಬಳಿಕ ತಕರಾರುಗಳು ಬಂದು ನ್ಯಾಯಾಲಯದ ಮೆಟ್ಟಿಲು ಏರಿತ್ತು. ವಿವಾದಿತ ಜಮೀನು ಭೂಸ್ವಾಧೀನವನ್ನು ನಗರಸಭೆಯ ಉಳಿತಾಯ ಅನುದಾನದಲ್ಲಿ ಪರಿಹಾರ ನೀಡಿ ವಶಕ್ಕೆ ಪಡೆಯಲಾಗುತ್ತದೆ’ ಎಂದು ಸದಸ್ಯರಿಗೆ ತಿಳಿಸಿದ್ದಾರೆ.

ಅಧಿಕಾರವಧಿ ಮುಕ್ತಾಯಗೊಂಡ ನಗರಸಭೆ ಸದಸ್ಯರಾದ ವಾಸುದೇವ ನವಲಿ, ಪರಶುರಾಮ ಮಡ್ಡೇರಾ, ರಮೇಶ ಚೌಡ್ಕಿ, ನೀಲಕಂಠ, ಮೌಲಸಾಬ್, ಸೋಮನಾಥ ಬಂಡಾರಿ, ಅರ್ಚನಾ ರಾಘವೇಂದ್ರ ಶ್ರೇಷ್ಠಿ, ಉಮೇಶ ಸಿಂಗನಾಳ, ಪಾರ್ವತಮ್ಮ ಸೇರಿ ನಗರಸಭೆ ಸಿಬ್ಬಂದಿ ಉಪಸ್ಥಿತರಿದ್ದರು. ಇದು ಸಾರ್ವಜನಿಕ ವಲಯದಲ್ಲಿಯೂ ಚರ್ಚೆಗೆ ಕಾರಣವಾಗಿದೆ.

ನಗರಸಭೆಗೆ ಆಡಳಿತಾಧಿಕಾರಿಯನ್ನು ನೇಮಿಸಿದ ಕುರಿತು ಶುಕ್ರವಾರ ಮಧ್ಯಾಹ್ನ ಮಾಹಿತಿ ಬಂದಿದ್ದು ಸಭೆ ಕುರಿತು ಜಿಲ್ಲಾಧಿಕಾರಿ ಗಮನಕ್ಕೆ ತರಲಾಗುವುದು.
–ಆರ್‌.ವಿರೂಪಾಕ್ಷಮೂರ್ತಿ, ಪೌರಾಯುಕ್ತ ಗಂಗಾವತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.