ಕೊಪ್ಪಳದಲ್ಲಿ ಬೃಹತ್ ಪ್ರತಿಭಟನೆ
ಕೊಪ್ಪಳ: ಇಲ್ಲಿನ ಬಹದ್ದೂರ್ ಬಂಡಿ ರಸ್ತೆಯಲ್ಲಿರುವ ನದಿಮುಲ್ಲಾ ಖಾದ್ರಿ ಮಸೀದಿ ಮುಂಭಾಗದಲ್ಲಿ ಆ.3ರಂದು ನಡೆದಿದ್ದ ಗವಿಸಿದ್ಧಪ್ಪ ನಾಯಕ ಎನ್ನುವ ಯುವಕನ ಕೊಲೆ ಘಟನೆ ಖಂಡಿಸಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ನೇತೃತ್ವದಲ್ಲಿ ಸೋಮವಾರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆದಿದ್ದು, ಸಾವಿರಾರು ಸಂಖ್ಯೆಯಲ್ಲಿ ಜನ ಭಾಗವಹಿಸಿದ್ದಾರೆ.
ಗಡಿಯಾರ ಕಂಬದಿಂದ ಆರಂಭವಾದ ಮೆರವಣಿಗೆ ಜವಾಹರ ಮಾರ್ಗದ ಮೂಲಕ ಸಾಗಿತು. ಗವಿಸಿದ್ದಪ್ಪನ ಕೊಲೆ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು, ನ್ಯಾಯಕ್ಕಾಗಿ ಹೋರಾಟ, ಆರೋಪಿಗಳನ್ನು ಎನ್ ಕೌಂಟರ್ ಮಾಡಬೇಕು ಎಂದು ಹೋರಾಟ ನಿರತರು ಆಗ್ರಹಿಸಿದರು.
ಮುಂಜಾಗ್ರತಾ ಕ್ರಮವಾಗಿ ಬಳ್ಳಾರಿ ವಲಯದ ಐಜಿಪಿ ವರ್ತಿಕಾ ಕಟಿಯಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ ಕೂಡ ಮೆರವಣಿಗೆ ಮಾರ್ಗದುದ್ದಕ್ಕೂ ಪ್ರತಿಭಟನಾ ನಿರತರ ಜೊತೆ ಸಾಗಿದರು.
ಮಾರ್ಗ ಮಾಧ್ಯದಲ್ಲಿ ಯೂಸಿಫಿಯಾ ಮಸೀದಿ ಇದ್ದು ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದ್ದು, ಖುದ್ದು ವರ್ತಿಕಾ ಕಟಿಯಾರ್ ಜನರನ್ನು ಮುಂದೆ ಕಳಿಸಿದರು.
ಆಡಳಿತಾರೂಢ ಪಕ್ಷದ ಶಾಸಕ ರಾಘವೇಂದ್ರ ಹಿಟ್ನಾಳ, ಮಾಜಿ ಸಚಿವ ರಾಜೂ ಗೌಡ ನಾಯಕ, ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ, ಶಿವನಗೌಡ ನಾಯಕ, ಬಿಜೆಪಿಯ ಡಾ. ಬಸವರಾಜ ಕ್ಯಾವಟರ್, ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಾಶೇಖರ್ ಹಾಗೂ ವಿವಿಧ ಮಠಗಳ ಸ್ವಾಮೀಜಿಗಳು ಪಾಲ್ಗೊಂಡಿದ್ದರು.
ಕೊಪ್ಪಳದಲ್ಲಿ ಪ್ರತಿಭಟನೆ
ಕೊಪ್ಪಳದಲ್ಲಿ ಪ್ರತಿಭಟನೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.