
ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ
ಕೊಪ್ಪಳ: ತಾಲ್ಲೂಕಿನ ಕೋಳೂರು ಹಾಗೂ ಕಾಟ್ರಳ್ಳಿ ಗ್ರಾಮಗಳ ಸಮೀಪ ಗವಿಮಠದಿಂದ ನಿರ್ಮಿಸಲಾಗಿರುವ ಪದವಿಪೂರ್ವ ಕಾಲೇಜು ಇದೇ ಶೈಕ್ಷಣಿಕ ವರ್ಷದಿಂದ ಆರಂಭವಾಗಲಿದೆ ಎಂದು ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ತಿಳಿಸಿದರು.
‘60 ಕೋಟಿ ವೆಚ್ಚದಲ್ಲಿ ವಿದ್ಯಾರ್ಥಿನಿಯರಿಗಾಗಿ ಕಾಲೇಜು ಹಾಗೂ ಉಚಿತ ವಸತಿ ನಿಲಯ ನಿರ್ಮಿಸಲಾಗಿದ್ದು, ಗ್ರಾಮೀಣ ಭಾಗದ ಹೆಣ್ಣುಮಕ್ಕಳು, ಏಕಪೋಷಕ, ಬೀದಿಬದಿ ವ್ಯಾಪಾರ, ಹೊಲವಿಲ್ಲದವರು, ಕಟ್ಟಡ ಕಾರ್ಮಿಕರ ಮಕ್ಕಳು ಹೀಗೆ ಯಾರಿಗೆ ಓದಿಸಲು ಸಾಧ್ಯವಿಲ್ಲವೊ ಆ ಮಕ್ಕಳಿಗೆ ಗವಿಮಠ ನೆರವಾಗಲಿದೆ’ ಎಂದು ಹೇಳಿದರು.
‘1500 ಜನ ಒಟ್ಟಿಗೆ ಕುಳಿತು ಊಟ ಮಾಡಬಹುದಾದ, 4500 ಜನ ಒಟ್ಟಿಗೆ ಕಾರ್ಯಕ್ರಮ ನಡೆಸಲು ವ್ಯವಸ್ಥೆಯಿದೆ. 700 ವಿದ್ಯಾರ್ಥಿನಿಯರಿಗೆ ಹಾಸ್ಟೆಲ್ ಸೌಲಭ್ಯ ಸಿದ್ದವಾಗಿದ್ದು, ಗವಿಸಿದ್ಧೇಶ್ವರ ಮತ್ತಷ್ಟು ಶಕ್ತಿ ನೀಡಿದರೆ ಉಳಿದ ಕೆಲಸವನ್ನೂ ಪೂರ್ಣಗೊಳಿಸಲಾಗುವುದು’ ಎಂದರು.
‘ಎಸ್‌ಎಸ್‌ಎಲ್‌ಸಿ ಫಲಿತಾಂಶ ಬಂದ ಬಳಿಕ ಗೂಗಲ್ ಅಪ್ಲಿಕೇಷನ್ ಹಾಕಬೇಕು. ಅವರಿಗ ಪ್ರವೇಶ ಪರೀಕ್ಷೆ ನಡೆಯುತ್ತದೆ. ವಿಜ್ಞಾನ ವಿಭಾಗದಿಂದ 400 ವಿದ್ಯಾರ್ಥಿಗಳಿಗೆ ನೀಟ್, ಸೀಟ್ ಕೋಚಿಂಗ್ ತರಬೇತಿಯನ್ನೂ ನೀಡಲಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗೂ ತರಬೇತಿ ಕೊಡಲು 200 ಕಲಾ ವಿಭಾಗಕ್ಕೆ ಪ್ರವೇಶ ತೆಗೆದುಕೊಲ್ಳಲಾಗುತ್ತದೆ. ರಾಜ್ಯದ ಯಾವ ಊರಿನಿಂದಾದರೂ ಅರ್ಜಿ ಸಲ್ಲಿಸಬಹುದು’ ಎಂದು ಮಾಹಿತಿ ನೀಡಿದರು.
‘ಶಿಕ್ಷಣ ದುಬಾರಿಯಾಗುತ್ತಿರುವ ಈ ಕಾಲದಲ್ಲಿ ನೀಟ್ ಹಾಗೂ ಇನ್ನಿತರ ಪರೀಕ್ಷೆಗೆ ವಿದ್ಯಾರ್ಥಿಗಳಿಗೆ ಖರ್ಚಾಗುವ ಹಣವನ್ನು ಗವಿಮಠ ಟ್ರಸ್ಟ್ ಭರಿಸಲಿದೆ. ಊಟದ ಖರ್ಚು ವಿದ್ಯಾರ್ಥಿಗಳು ಹಂಚಿಕೊಂಡು ಭರಿಸಬೇಕು. ಜೋಳಿಗೆ ಹಿಡಿದುಕೊಂಡೇ ಹುಟ್ಟಿದ್ದೇನೆ. ಈಗ ಅರಿವೆ ಜೋಳಿಗೆ ಹೋಗಿ ಅರಿವಿನ ಜೋಳಿಗೆ ಬಂದಿದೆ. ತುಂಬುವ ಜೋಳಿಗೆ ಹೋಗಿ ತುಂಬದ ಜೋಳಗೆ ಬಂದಿದೆ’ ಎಂದು ಮಾರ್ಮಿಕವಾಗಿ ನುಡಿದರು.
ಜಾತ್ರೆಯ ನೆಪದಲ್ಲಿ ಸಂಗೀತ ಸಾಧನೆಗೈದವರಿಗೆ ಗೌರವ ಹಾಸ್ಯೋತ್ಸವ ಹೀಗೆ ಎಲ್ಲ ಕಾರ್ಯಕ್ರಮಗಳು ನಡೆಯುತ್ತವೆ. ಇದು ಎಲ್ಲರ ಸಂಭ್ರಮಕ್ಕೆ ಕಾರಣವಾಗುತ್ತದೆ.ಶಿವಶಾಂತವೀರ ಶರಣರು ಬಳಗಾನೂರು
ಯಾರಿಗೊ ಸ್ಪರ್ಧೆ ಮಾಡಲು ಕಾಲೇಜು ಆರಂಭಿಸಿಲ್ಲ. ಸಮಾಜದಲ್ಲಿ ಯಾರೂ ಇಲ್ಲದ ಮಕ್ಕಳಿಗೆ ಆಶ್ರಯ ಒದಗಿಸಲು ಕಾಲೇಜು ಮಾಡಲಾಗಿದೆ. ಸಮಾಜಕ್ಕೆ ಇದು ನಮ್ಮ ಉಡುಗೊರೆ.ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಗವಿಮಠ
‘ಜೀವನ ಕೊಟ್ಟ ದೇವರಿಗೆ ಧನ್ಯವಾದ ಹೇಳಬೇಕು’
ಸಮಸ್ಯೆಗಳಿವೆ ಎಂದು ದೇವರ ಮುಂದೆ ಭಿಕ್ಷೆ ಬೇಡಬಾರದು; ಬದುಕಲು ಕೊಟ್ಟ ಈ ಅವಕಾಶಕ್ಕಾಗಿ ಧನ್ಯವಾದ ಹೇಳಬೇಕು ಎಂದು ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಹೇಳಿದರು. ಭಕ್ತಿ ಹಿತಚಿಂತನಾ ಸಭೆಯಲ್ಲಿ ಮಾತನಾಡಿದ ಅವರು ‘ದೇವರಿಗೇ ಎಲ್ಲರನ್ನೂ ಒಪ್ಪಿಸಿ ಬದುಕಲು ಆಗಿಲ್ಲ; ಇನ್ನು ನಮಗೆಲ್ಲಿ ಸಾಧ್ಯವಾಗುತ್ತದೆ’ ಎಂದು ಪ್ರಶ್ನಿಸಿದ ಅವರು ‘ಜೀವನವೆಂದರೆ ಅದು ಅನುಭವಗಳ ಪ್ರವಾಹ. ಜೀವನದ ಜೋಕಾಲಿ ಒಮ್ಮೆ ಸುಖ ಹಾಗೂ ದುಃಖದ ಕಡೆ ತೂಗುತ್ತಲೇ ಇರುತ್ತದೆ’ ಎಂದರು. ‘ಜೀವನ ಪರಿಪೂರ್ಣ ಆಗಲು ಅಮ್ಮನ ಜೋಗುಳ ಹಾಗೂ ಅಪ್ಪನ ಬೈಗುಳ ಎರಡೂ ಬೇಕು. ಜೀವನದಲ್ಲಿ ಕಂಪ್ಲೇಟ್‌ಗಳು ಇರಬಾರದು ಕಂಪ್ಲೀಟ್ ಆಗಿರಬೇಕು. ಇದ್ದಂಗ ಇರಬೇಕು ಇಲ್ಲದಂತೆಯೂ ಇರಬೇಕು ದೇವರು ಕರೆದಾಗ ಎದ್ದು ಹೋಗಲೂ ಸಿದ್ಧರಾಗಿರಬೇಕು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.