ADVERTISEMENT

ಸರ್ಕಾರಿ ನೌಕರರ ಹಿತಕಾಯಲು ಬದ್ಧ: ಸಿ.ಎಸ್. ಷಡಕ್ಷರಿ

ಸಂಘಟನಾತ್ಮಕ ಸಭೆ, ರಾಜ್ಯ ಸರ್ಕಾರಿ ನೌಕರರಿಗೆ ಸಂಘದ ಅಧ್ಯಕ್ಷ ಷಡಕ್ಷರಿ ಭರವಸೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2025, 5:24 IST
Last Updated 1 ಡಿಸೆಂಬರ್ 2025, 5:24 IST
ಕೊಪ್ಪಳದಲ್ಲಿ ಭಾನುವಾರ ನಡೆದ ರಾಜ್ಯ ಸರ್ಕಾರಿ ನೌಕರರ ಸಂಘದ ಸಂಘಟನಾ ಸಭೆಯಲ್ಲಿ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್‌. ಷಡಕ್ಷರಿ ಹಾಗೂ ಇತರರು ಉದ್ಘಾಟಿಸಿದರು
ಕೊಪ್ಪಳದಲ್ಲಿ ಭಾನುವಾರ ನಡೆದ ರಾಜ್ಯ ಸರ್ಕಾರಿ ನೌಕರರ ಸಂಘದ ಸಂಘಟನಾ ಸಭೆಯಲ್ಲಿ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್‌. ಷಡಕ್ಷರಿ ಹಾಗೂ ಇತರರು ಉದ್ಘಾಟಿಸಿದರು   

ಕೊಪ್ಪಳ: ‘ಸರ್ಕಾರಿ ನೌಕರರ ಹಿತ ಕಾಯಲು ನೌಕರರು ಹಾಗೂ ನಿವೃತ್ತ ಸರ್ಕಾರಿ ನೌಕರರಿಗೆ ಕಡಿಮೆ ದರದಲ್ಲಿ ಔಷಧಗಳು, ಕಿರಾಣಿ ಸೇರಿದಂತೆ ಅಗತ್ಯ ಸಾಮಗ್ರಿ ಲಭಿಸುವಂತೆ ಮಾಡಲು ಅಂಗಡಿಗಳನ್ನು ಆರಂಭಿಸಲಾಗುವುದು’ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ ಹೇಳಿದರು.

ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆಯ ಆಶ್ರಯದಲ್ಲಿ ನಗರದ ಸಾಹಿತ್ಯ ಭವನದಲ್ಲಿ ಭಾನುವಾರ ನಡೆದ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ಅವರಿಗೆ ಅಭಿನಂದನೆ, ನೌಕರರ ಸಂಘದ ಪದಾಧಿಕಾರಿಗಳು, ನಿರ್ದೇಶಕರು, ನೌಕರರ ಜತೆ ಸಂಘಟನಾ ಸಭೆ ಹಾಗೂ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ‘ವರ್ಷಕ್ಕೆ ಕನಿಷ್ಠ ಒಂದು ಬಾರಿಯಾದರೂ ಎಲ್ಲ ಜಿಲ್ಲೆಗಳ ನಿರ್ದೇಶಕರನ್ನು ಭೇಟಿ ಮಾಡಬೇಕು ಎನ್ನುವ ಹೆಗ್ಗುರಿ ಹೊಂದಿದ್ದೇನೆ. ಆಯಾ ಜಿಲ್ಲೆಗಳ ನಿರ್ದೇಶಕರನ್ನು ಸೇರಲು ಯೋಜನೆ ರೂಪಿಸಿದ್ದು ಉತ್ತಮ ಸ್ಪಂದನೆ ದೊರೆಯುತ್ತಿದೆ. ನಿರ್ದೇಶಕರೇ ಸಂಘದ ಆಧಾರ’ ಎಂದರು.

'ಮುಂದಿನ ತಿಂಗಳು ಕೇಂದ್ರ ಸರ್ಕಾರಿ ನೌಕರರ ವೇತನ ಪರಿಷ್ಕರಣೆಯಾಗುತ್ತಿದ್ದು, ರಾಜ್ಯ ನೌಕರರಿಗೆ 22 ರಾಜ್ಯಗಳಲ್ಲಿ ಈಗಾಗಲೇ ಕೇಂದ್ರ ಮಾದರಿಯ ವೇತನ ಪಡೆಯುತ್ತಿದ್ದಾರೆ. ಮುಂದೆ ಪರಿಷ್ಕರಣೆ ಆಗುವಾಗ ಹೋರಾಟಕ್ಕೆ ಕೈಜೋಡಿಸಬೇಕು. ಎನ್‌ಪಿಎಸ್‌ ರದ್ದು ಪಡಿಸಿ ಒಪಿಎಸ್‌ ಜಾರಿ ಮಾಡುತ್ತೇವೆ. ಇದಕ್ಕಾಗಿ ಎಲ್ಲರೂ ಸೇರಿ ಹೋರಾಟ ಮಾಡೋಣ. ಇದನ್ನೇ ನೆಪ ಮಾಡಿಕೊಂಡು ಡೊಂಗಿ ರಾಜಕಾರಣ, ಸಂಘಟನೆ ಮಾಡುವವರನ್ನು ನಂಬಿ ಹಣ ಕಳೆದುಕೊಳ್ಳಬೇಡಿ’ ಎಂದು ನೌಕರರರಲ್ಲಿ ಮನವಿ ಮಾಡಿದರು.

ADVERTISEMENT

ಸಂಘದ ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮಣ್ಣನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಕಾರ್ಯದರ್ಶಿ ಶಿವಪ್ಪ ಜೋಗಿ, ಖಜಾಂಚಿ ಜಯತೀರ್ಥ ದೇಸಾಯಿ, ರಾಜ್ಯ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಬಳ್ಳಾರಿ, ಹಿರಿಯ ಉಪಾಧ್ಯಕ್ಷರಾದ ಮೋಹನಕುಮಾರ, ಸುರೇಶ ಶಡಿಶಾಳ್, ಸದಾನಂದ ನೆಲಕುದರಿ, ಸಂಜೀವ್ ಸತರಡ್ಡಿ, ಮಹೇಶ ಸಬರದ್, ಗದಗ ಜಿಲ್ಲಾಧ್ಯಕ್ಷ ಬಸವರಾಜ ಬಳ್ಳಾರಿ, ವಿಜಯನಗರ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನಗೌಡ್ರು, ರಾಜ್ಯ ಪರಿಷತ್ ಸದಸ್ಯ ಮಹ್ಮದ್ ಆಸೀಫ್ ಅಲಿ, ಕಾರ್ಯಾಧ್ಯಕ್ಷ ಬೀರಪ್ಪ ಅಂಗಡಿ, ಗೌರವಾಧ್ಯಕ್ಷ ಸಿದ್ದಪ್ಪ ಮೇಳಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. 

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸರ್ಕಾರಿ ನೌಕರರು
ನಿಮ್ಮ ವ್ಯಾಪ್ತಿಯ ಜಿಲ್ಲೆಯ ಜನಪ್ರತಿನಿಧಿಗಳಿಂದ ಅನುದಾನ ಪಡೆದು ಅಭಿವೃದ್ಧಿ ಮಾಡಬೇಕು. ಸಂಘದಲ್ಲಿ ಆರ್ಥಿಕ ಶಿಸ್ತು ಕೂಡ ಕಾಪಾಡಿಕೊಳ್ಳಬೇಕು
ಸಿ.ಎಸ್‌. ಷಡಕ್ಷರಿ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ

ಸನ್ಮಾನ ಮನವಿಗಳ ಮಹಾಪೂರ

ಷಡಕ್ಷರಿ ಅವರಿಗೆ ಸರ್ಕಾರಿ ನೌಕರರ ವಿವಿಧ ವೃಂದ ಸಂಘಗಳ ಪದಾಧಿಕಾರಿಗಳು ಸನ್ಮಾನಿಸಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು. ನೌಕರರೊಂದಿಗೆ ಅವರು ಸಂವಾದ ನಡೆಸಿ  ಸಮಸ್ಯೆಗಳನ್ನು ಪರಿಹರಿಸುವ ಭರವಸೆ ನೀಡಿದರು ಪದವೀಧರ (ಜಿಪಿಟಿ) ಶಿಕ್ಷಕರ ಬೇಡಿಕೆ ಕುರಿ ಸಂಘದ ಜಿಲ್ಲಾಧ್ಯಕ್ಷ ಮ್ಯಾಗಳಮನಿ ಮನವಿ ಸಲ್ಲಿಸಿ ‘2016ರಿಂದ ಪದವೀಧರ ಪ್ರಾಥಮಿಕ ಶಿಕ್ಷಕರನ್ನು ನಾಲ್ಕು ಬಾರಿ ನೇಮಕ ಮಾಡಿಕೊಳ್ಳಲಾಗಿದ್ದು ರಾಜ್ಯದಲ್ಲಿ ಸುಮಾರು 24 ಸಾವಿರ ಶಿಕ್ಷಕರು ಇಲ್ಲಿಯತನ ನೇಮಕವಾಗಿದ್ದಾರೆ. ರಾಜ್ಯ ಸರ್ಕಾರಿ ನೌಕರರ ಸಂಘದ ಬೈಲಾದಲ್ಲಿ ಜಿ.ಪಿ.ಟಿ ಶಿಕ್ಷಕರಿಗೆ ಪ್ರತ್ಯೇಕವಾದ ನಿರ್ದೇಶಕ ಸ್ಥಾನ ನೀಡಬೇಕು’ ಎಂದು ಆಗ್ರಹಿಸಿದರು.  ‘2023ರಲ್ಲಿ ನೇಮಕವಾದ ಶಿಕ್ಷಕರ ಹಿಂದಿನ ಸೇವೆಯನ್ನು ಪರಿಗಣಿಸಿ ವೇತನ ಸಂರಕ್ಷಣೆ ಮಾಡುವುದು ಸಿಆರ್‌ಪಿ ಆಗಲು 10 ವರ್ಷ ಕಡ್ಡಾಯವಾಗಿ ಸೇವೆ ಸಲ್ಲಿಸಬೇಕೆಂಬ ನಿಯಮ ಬದಲಿಸಿ ಐದು ವರ್ಷ ಸೇವೆ ಪರಿಗಣಿಸಬೇಕು’ ಎಂದು ಒತ್ತಾಯಿಸಿದರು.  ಸಂಘದ ಕೋಶಾಧ್ಯಕ್ಷ ರಾಘವೇಂದ್ರ ಗೋನಾಳ ವಿವಿಧ ತಾಲ್ಲೂಕುಗಳ ಅಧ್ಯಕ್ಷರಾದ ಮಂಜುನಾಥ ಕೇಸಲಾಪುರ ಕನಕಪ್ಪ ಪ್ರಭು ನೌಕರರ ಸಂಘದ ನಿರ್ದೇಶಕ ಮಲ್ಲೇಶ ನಾಯಕ ಶರಣಪ್ಪ ಪತ್ತಾರ ಸೇರಿ ಅನೇಕರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.