ADVERTISEMENT

ಕೊಪ್ಪಳ | ದುರಸ್ತಿಗೆ ಕಾದಿರುವ ಸರ್ಕಾರಿ ಶಾಲೆಗಳು

​ಪ್ರಜಾವಾಣಿ ವಾರ್ತೆ
Published 31 ಜುಲೈ 2023, 5:38 IST
Last Updated 31 ಜುಲೈ 2023, 5:38 IST
ಕಾರಟಗಿ ಉಪ್ಪಾರ ಓಣಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕೊಠಡಿಯ ಮೇಲ್ಚಾವಣಿ ಉದುರಿದ್ದು, ಮಳೆಯಾದರೆ ಸೋರುವ ನೀರು ಸಂಗ್ರಹಕ್ಕೆ ಟಬ್‌ ಇಟ್ಟಿರುವುದು
ಕಾರಟಗಿ ಉಪ್ಪಾರ ಓಣಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕೊಠಡಿಯ ಮೇಲ್ಚಾವಣಿ ಉದುರಿದ್ದು, ಮಳೆಯಾದರೆ ಸೋರುವ ನೀರು ಸಂಗ್ರಹಕ್ಕೆ ಟಬ್‌ ಇಟ್ಟಿರುವುದು   

ಪ್ರಮೋದ

ಕೊಪ್ಪಳ: ಮಳೆಗಾಲ ಬಂದಾಗಲೆಲ್ಲ ‘ಸೋರುತಿಹುದು ನಮ್ಮೂರ ಶಾಲೆ’ ಎಂಬ ಮಾತು ಚಾಲ್ತಿಗೆ ಬರುತ್ತದೆ. ಮಳೆಗಾಲ ಬಂದಾಗ ಮಾತ್ರ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ನೆನಪಾಗುವ ದುರಸ್ತಿಗೆ ಕಾದಿರುವ ಶಾಲೆಗಳ ಸಂಗತಿ ಬೇರೆ ದಿನಗಳಲ್ಲಿ ಪ್ರಮುಖ ಎನಿಸುವುದಿಲ್ಲ. ಹೀಗಾಗಿ ಮಳೆಗಾಲ ಬಂದಾಗ ಮಾತ್ರ ಪರ್ಯಾಯ ವ್ಯವಸ್ಥೆಗೆ ಸರ್ಕಾರ ಮುಂದಾಗುತ್ತದೆ.

ನಿರಂತರವಾಗಿ ಮಳೆ ಸುರಿಯುತ್ತಿದ್ದು, ಇದರಿಂದಾಗಿ ಜಿಲ್ಲೆಯ ಹಲವು ಶಾಲೆಗಳು ಸೋರುತ್ತಿದ್ದರೆ, ಇನ್ನೂ ಕೆಲವು ದೊಡ್ಡ ಮಟ್ಟದ ದುರಸ್ತಿಗಾಗಿ ಕಾದಿವೆ.

ADVERTISEMENT

ಸೋರುತ್ತಿದೆ ಶಾಲಾ ಕಟ್ಟಡ: ಕನಕಗಿರಿ ತಾಲ್ಲೂಕಿನ ಅಡವಿಬಾವಿ ದೊಡ್ಡ ತಾಂಡದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡ ಸೋರುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ. ಮೂವರು ಶಿಕ್ಷಕರ ಪೈಕಿ ಒಬ್ಬರು ಈಚೆಗೆ ವರ್ಗಾವಣೆಗೊಂಡಿದ್ದಾರೆ. ಹೀಗಾಗಿ ಪಾಠ ಪ್ರವಚನಗಳಿಗೆ ತೊಂದರೆಯಾಗುತ್ತಿದೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.

ವಿದ್ಯಾರ್ಥಿಗಳ ಮುಖ ನೋಡಿದರೆ ಪಾಪ ಅನಿಸುತ್ತದೆ. ಶೈಕ್ಷಣಿಕ ಉತ್ತೇಜನ ಬರೀ ಭಾಷಣಕ್ಕೆ ಸೀಮಿತವಾಗದೇ ಅಪಾಯದ ಸ್ಥಿತಿಯಲ್ಲಿರುವ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಮುಂದಾಗಬೇಕು. ಅಲ್ಲಿವರೆಗೆ ಪಕ್ಕದಲ್ಲಿರುವ ಸಮುದಾಯ ಭವನ ಕೊಡಬೇಕು.
ನಾರಾಯಣ ಕೊಂಡೇಕಾರ, ಎಸ್‌ಡಿಎಂಸಿ ಅಧ್ಯಕ್ಷ, ಕಾರಟಗಿ

ಮಳೆ ಬಂದರೆ ಶಾಲಾ ಕೊಠಡಿಗಳು ಸೋರುತ್ತವೆ. ಮಕ್ಕಳು ಜೀವ ಭಯದಿಂದಲೆ ಶಿಕ್ಷಣ ಕಲಿಯುವಂತಾಗಿದೆ. ಹಿಂದಿನ ಶಾಸಕರಿಗೆ ದುರಸ್ತಿಗೆ ಮನವಿ ಮಾಡಿದರೂ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ದೂರುಗಳಿವೆ. ಶಾಲಾ ಕೊಠಡಿಗಳು ಸೋರುತ್ತಿರುವ ಹಿನ್ನೆಲೆಯಲ್ಲಿ ಶಿಕ್ಷಕರು ಹಾಗೂ ಪಾಲಕರು, ವಿದ್ಯಾರ್ಥಿಗಳು ಭಯ ಭೀತಿಗೊಂಡಿದ್ದಾರೆ. ಮಳೆಗಾಲದಲ್ಲಿ ಮಕ್ಕಳನ್ನು ಶಾಲೆಗೆ ಕಳಿಸಲು ಪಾಲಕರು ಹಿಂದೇಟು ಹಾಕಿದ್ದಾರೆ ಎಂದು ತಿಳಿಸಿದರು.

ಕುಡಿಯುವ ನೀರಿನ ಸೌಲಭ್ಯಕ್ಕಾಗಿ ವಾಟರ್ ಟ್ಯಾಂಕ್ ನಿರ್ಮಾಣ ಮಾಡಿಕೊಡುವಂತೆ ಗೌರಿಪುರ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಅವರು ಸಹ ಕಾಳಜಿ ವಹಿಸಿಲ್ಲ ಎಂದು ಸೈಯದ್ ಸುಭಾನ್ ಆರೋಪಿಸಿದರು.

ಪೂರ್ವ ಪ್ರಾಥಮಿಕ ಶಿಕ್ಷಣ ಮಹತ್ವದ ಹಂತ. ಶಾಲೆಗೆ ಬರುವ ಮಕ್ಕಳಿಗೆ ಕುಳಿತುಕೊಳ್ಳಲೂ ವ್ಯವಸ್ಥೆ ಇರದಿರುವುದು ದುರ್ದೈವ. ಜನಪ್ರತಿನಿಧಿಗಳು ಅಧಿಕಾರಿಗಳು ಮಕ್ಕಳು ಅಪಾಯಕ್ಕೆ ಸಿಲುಕುವ ಮೊದಲು ಎಚ್ಚತ್ತುಕೊಂಡು ವಿದ್ಯಾರ್ಥಿಗಳ ಸಂಖ್ಯೆಗೆ ತಕ್ಕಂತೆ ಕೊಠಡಿಗಳನ್ನು ನಿರ್ಮಿಸಬೇಕು.
ಮಾರುತಿ ಕೆ. ಕಾರಟಗಿ

ಸೋರುತಿಹವು ಶಾಲಾ ಮಾಳಿಗೆ: ಆರು ಮೂರು ಸೇರಿ ಒಂಬತ್ತು. ಅದರಲ್ಲಿ ಮೂರು ಮಾತ್ರ ಗಟ್ಟಿ ಉಳಿದೆಲ್ಲವೂ ಸೋರುತಿಹುದು ಶಾಲೆ ಮಾಳಿಗೆ. ಇವು ತತ್ವಪದದ ಸಾಲುಗಳಲ್ಲ. ಮಕ್ಕಳು, ಶಿಕ್ಷಕರನ್ನು ಅಭದ್ರತೆಯಲ್ಲಿ ಕಾಲ ಕಳೆಯುವಂತೆ ಮಾಡಿರುವ ಕುಷ್ಟಗಿ ತಾಲ್ಲೂಕಿನ ನವಲಹಳ್ಳಿ ಸರ್ಕಾರಿ ಶಾಲೆಯ ಕಟ್ಟಡಗಳ ಪಾಡು.

ಕುಷ್ಟಗಿ ತಾಲ್ಲೂಕಿನಲ್ಲಿ ಕಟ್ಟಡಗಳಷ್ಟೇ ಅಲ್ಲ, ಇರುವ ಜಾಗವೂ ಭದ್ರವಿಲ್ಲ. ಕಾರಣವಿಷ್ಟೇ; ಶಾಲೆ ಇರುವ ಜಾಗ ನಮ್ಮದು ಎಂದು ಹಿಂದೆ ಜಮೀನು ದೇಣಿಗೆ ನೀಡಿದವರ ಈಗಿನ ವಾರಸುದಾರರ ತಕರಾರು. ಈ ವಿಷಯ ಸದ್ಯ ಕೋರ್ಟ್ ಮೆಟ್ಟಿಲೇರಿದೆ. ಹಾಗಾಗಿ ಹೊಸದಾಗಿ ಶಾಲೆ ಕೊಠಡಿ ಕಟ್ಟುವುದಕ್ಕೆ ಬೇರೆ ಜಾಗವಿಲ್ಲ, ಇದ್ದ ಕೊಠಡಿಗಳೂ ಸುರಕ್ಷಿತವಾಗಿಲ್ಲ. ಶಿಕ್ಷಕರಿಗೆ ಶಾಲೆ ಅವಧಿಯಲ್ಲಿ ಪಾಠಕ್ಕಿಂತ ಮಕ್ಕಳ ಯೋಗಕ್ಷೇಮ, ಸುರಕ್ಷತೆಯೇ ಸವಾಲಾಗಿ ಪರಿಣಮಿಸಿದೆ.

ಮೂರು ಸಿಮೆಂಟ್‌ ಚಾವಣಿ, ಮೂರು ಕಾಂಕ್ರೀಟ್‌ ಕಟ್ಟಡಗಳು ಹಳೆಯದಾಗಿದ್ದು, ಮಳೆ ಬಂದರೆ ಒದ್ದೆಯಾಗುತ್ತವೆ. 215 ಮಕ್ಕಳನ್ನು ಒಣ ಪ್ರದೇಶಲ್ಲಿ ಕೂಡಿಹಾಕಬೇಕು. ಅಡುಗೆ ಮನೆ, ಕಚೇರಿ ಎಲ್ಲವೂ ಸೋರುತ್ತಿವೆ. ಉಳಿದ ಮೂರು ಕಟ್ಟಡಗಳಲ್ಲಿ ಇಡೀ ಶಾಲೆ ವ್ಯವಸ್ಥೆ ನಡೆಸುವ ಅನಿವಾರ್ಯ ಇದೆ. ಕಟ್ಟಡ ಕುಸಿಯುವ ಭೀತಿಯೂ ಶಿಕ್ಷಕರು, ಪಾಲಕರನ್ನು ಕಾಡುತ್ತಿದ್ದು ಪರ್ಯಾಯ ವ್ಯವಸ್ಥೆ ಬಗ್ಗೆ ಶಾಲಾ ಶಿಕ್ಷಣ ಇಲಾಖೆ ಕ್ರಮದ ನಿರೀಕ್ಷೆಯಲ್ಲಿದ್ದಾರೆ.

ಹಿರೇಮನ್ನಾಪುರ ಶಾಲೆಯದು ಇನ್ನೊಂದು ಸಮಸ್ಯೆ, ಕೊಠಡಿಗಳ ಕೊರತೆಯಿಲ್ಲ. ಆದರೆ ಆವರಣದಲ್ಲಿರುವ ಹಳೆಯ ಕೊಠಡಿಗಳು ಯಾವಾಗ ಕುಸಿಯುತ್ತವೆ ಎಂಬ ಆತಂಕ. ಅಲ್ಲೇ ಮಕ್ಕಳು ಆಟವಾಡಿರುತ್ತವೆ, ಅಪಾಯವಿದೆ ಎನ್ನುತ್ತಾರೆ ಎಸ್‌ಡಿಎಂಸಿ ಅಧ್ಯಕ್ಷ ಶರಣಗೌಡ ತಾವರಗೇರಿ. 

ಬೀಳುವ ಅಪಾಯ: ಕಾರಟಗಿ ತಾಲ್ಲೂಕು ವ್ಯಾಪ್ತಿಯಲ್ಲಿ ಮಳೆ ಬಂದರೆ ರಜೆ, ಮಳೆ ಬಾರದಿದ್ದರೆ ಬಯಲೇ ಕೊಠಡಿ. ತರಗತಿಗಳು ಮೂರು ಇದ್ದರೂ ಇಬ್ಬರೇ ಶಿಕ್ಷಕರು. ಕೊಠಡಿಯ ಮೇಲ್ಚಾವಣಿ ಉದುರುತ್ತಲೇ ಇದೆ. ಮಳೆಯಾದರೆ ನೀರಿನ ಹನಿಗಳು, ಒಳಗೇ ಇಳಿಯುತ್ತಿದೆ. ಒಳಗೆ ಕುಳಿತರೆ ಜೀವ ಅಂಗೈಯಲ್ಲಿ ಹಿಡಿದಿಟ್ಟುಕೊಳ್ಳಬೇಕಾದ ದಯನೀಯ ಸ್ಥಿತಿಯಲ್ಲಿ ಶಾಲೆಯೊಂದು ಇದೆ.

ಇದು ಕಾರಟಗಿಯ 1ನೇ ವಾರ್ಡ್‌ನ ಉಪ್ಪಾರ ಓಣಿಯಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ದುಸ್ಥಿತಿ. ಶಾಲೆಯಲ್ಲಿ 1ರಿಂದ 3ನೇ ತರಗತಿವರೆಗೆ ಇದೆ. ಕೊಠಡಿಯ ಪರಸ್ಥಿತಿ ನೋಡಿ ಆತಂಕಗೊಂಡ ಪಾಲಕರು ಬೇರೆ ಶಾಲೆಯತ್ತ ಮುಖ ಮಾಡಿದ್ದರಿಂದ 9 ವಿದ್ಯಾರ್ಥಿಗಳು ಮಾತ್ರ ಈ ವರ್ಷ ದಾಖಲಾಗಿದ್ದಾರೆ. 2ನೇ ತರಗತಿಯಲ್ಲಿ 14, 3ನೇ ತರಗತಿಯಲ್ಲಿ 11 ಒಟ್ಟು 34 ವಿದ್ಯಾರ್ಥಿಗಳಿದ್ದಾರೆ.

ಯಲಬುರ್ಗಾ ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಹೊಸ ಮತ್ತು ಹಳೆ ಕಟ್ಟಡಗಳಿದ್ದು ವಿದ್ಯಾರ್ಥಿಗಳ ದಾಖಲಾತಿಗೆ ಅನುಗುಣವಾಗಿ ಕೊಠಡಿಗಳ ಬೇಡಿಕೆ ಹೆಚ್ಚುತ್ತಿವೆ. ಉಪಯೋಗಕ್ಕೆ ಬರದೇ ಇರುವ ಕೊಠಡಿಗಳನ್ನು ತೆರವುಗೊಳಿಸಿ ಹೊಸ ಕೊಠಡಿ ನಿರ್ಮಾಣಕ್ಕೆ ಆದ್ಯತೆ ನೀಡಬೇಕಾಗಿದೆ. ಅಲ್ಪಸ್ವಲ್ಪ ದುರಸ್ತಿ ಕೈಗೊಳ್ಳಬಹುದಾದ ಕೊಠಡಿಗಳನ್ನು ತ್ವರಿತಗಾಗಿ ದುರಸ್ಥಿ ಕೈಗೊಂಡರೆ ನೆಮ್ಮದಿಯಿಂದ ತರಗತಿಗಳನ್ನು ನಡೆಸಲು ಶಿಕ್ಷಕರಿಗೆ ಸಾಧ್ಯವಾಗುತ್ತದೆ.
ಸಿದ್ಧಲಿಂಗಪ್ಪ ಶ್ಯಾಗೋಟಿ, ಕಾರ್ಯದರ್ಶಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಯಲಬುರ್ಗಾ

ಈ ಶಾಲೆ 1994ರಲ್ಲಿ ಆರಂಭವಾಗಿದ್ದರೂ 2 ಕೊಠಡಿಗಳಿವೆ. ಬಿಸಿಯೂಟ ತಯಾರಿಸಲು ಪಕ್ಕದಲ್ಲೇ ಶಿಕ್ಷಕರು ಸ್ವ ಆಸಕ್ತಿಯಿಂದ ಚಿಕ್ಕ ಕೊಠಡಿ ನಿರ್ಮಿಸಿಕೊಂಡಿದ್ದಾರೆ. ತರಗತಿಯ ಕೊಠಡಿಗಳು ಶಿಥಿಲಾವಸ್ಥೆಯಲ್ಲಿರುವುದಕ್ಕೆ ಅನೇಕ ವರ್ಷಗಳಾಗಿದ್ದರೂ, ಹೊಸ ಕೊಠಡಿಗಳ ಭಾಗ್ಯ ಸಿಕ್ಕಿಲ್ಲ.

ವಿದ್ಯಾರ್ಥಿಗಳಲ್ಲಿ ಆತಂಕ: ಕುಕನೂರು ತಾಲ್ಲೂಕು ವ್ಯಾಪ್ತಿಯ ಕೆಲ ಶಾಲೆಗಳ ಹಳೆಯ ಕಟ್ಟಡಗಳ ಗೋಡೆ ಬಿರುಕು ಬಿಟ್ಟಿರುವುದು, ಚಾವಣಿ ಶಿಥಿಲಗೊಂಡಿರುವುದು, ಸ್ಲ್ಯಾಬ್‌ ಉದುರುತ್ತಿರುವುದು, ಯಾವುದೇ ಕ್ಷಣದಲ್ಲಿ ತಳಪಾಯ ಕುಸಿಯುವ ಹಂತದಲ್ಲಿರುವ ಶಾಲೆಗಳು ಪಾಲಕರು, ಶಿಕ್ಷಕರ ಆತಂಕಕ್ಕೆ ಕಾರಣವಾಗಿವೆ. ಶಿಕ್ಷಣ ಇಲಾಖೆಯೇ ಪಟ್ಟಿ ಮಾಡಿದಂತೆ ತಕ್ಷಣಕ್ಕೆ ಪುನರ್‌ ನಿರ್ಮಾಣಗೊಳ್ಳಬೇಕಾದ ಸರ್ಕಾರಿ ಪ್ರಾಥಮಿಕ ಕೊಠಡಿಗಳ ಸಂಖ್ಯೆಯೇ 32ರಷ್ಟಿದೆ. ಚಾವಣಿ ದುರಸ್ತಿಗೆ ಒಳಪಟ್ಟ ಸರ್ಕಾರಿ ಪ್ರಾಥಮಿಕ ಶಾಲೆಗಳು 38 ಹಾಗೂ ಚತ್ತು ತೆಗೆದುಹಾಕಬೇಕಾದ ಶಾಲೆಗಳ ಸಂಖ್ಯೆ 22.

ಸೋರುತಿಹುದು ಶಾಲೆಯ ಮಾಳಿಗೆ

ಯಲಬುರ್ಗಾ: ಮಳೆಯಿಂದಾಗಿ ಯಲಬುರ್ಗಾ ತಾಲ್ಲೂಕಿನ ವಿವಿಧ ಗ್ರಾಮಗಳ ಬಹುತೇಕ ಶಾಲಾ ಕಟ್ಟಡಗಳು ಸೋರುತ್ತಿವೆ. ಯಲಬುರ್ಗಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಪ್ರಸ್ತುತ ಅಂಕಿಅಂಶಗಳ ಪ್ರಕಾರ ಒಟ್ಟು 18 ಸಿಆರ್‌ಸಿ ವ್ಯಾಪ್ತಿಯಲ್ಲಿ 2031 ಕೊಠಡಿಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಸೋರುತ್ತಿರುವ ಕೊಠಡಿಗಳ ಸಂಖ್ಯೆ 326 ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ಸೋರುತ್ತಿರುವ ಕೊಠಡಿಗಳ ಸಂಖ್ಯೆ 263 ಹಾಗೆಯೇ ಶಿಥಿಲಾವಸ್ಥೆ ತಲುಪಿದ ಕೊಠಡಿಗಳ ಸಂಖ್ಯೆ 164 ಇದೆ ಎಂದು ಶಿಕ್ಷಣ ಇಲಾಖೆಯ ಅಂಕಿಅಂಶಗಳೇ ಹೇಳುತ್ತವೆ.  ಪ್ರತಿ ವರ್ಷ ಕೊಠಡಿಗಳ ಸ್ಥಿತಿಗತಿಗಳ ಬಗ್ಗೆ ಮೇಲಧಿಕಾರಿಗಳು ವರದಿ ತರಿಸಿಕೊಳ್ಳುತ್ತಾರೆ ಹೊರತು ಯಾವುದೇ ಸುಧಾರಣೆಯಾಗುತ್ತಿಲ್ಲ ಎಂಬುದು ಶಿಕ್ಷಕರ ಕೊರಗು. ಕೆಲವೊಂದು ಕಡೆ ಬಿಸಿಯೂಟದ ಕೋಣಿಯಿಲ್ಲದ ಕಾರಣ ಶಾಲಾ ಕೊಠಡಿಯಲ್ಲಿಯೇ ಅಡುಗೆ ಮಾಡುವುದು ಸಾಮಾನ್ಯವಾಗಿದೆ.

ಮಕ್ಕಳ ಸುರಕ್ಷತೆಗೆ ಮೊದಲ ಆದ್ಯತೆ

ಜಿಲ್ಲೆಯಲ್ಲಿ ದುರಸ್ತಿ ಮಾಡಬೇಕಾಗಿರುವ ಸರ್ಕಾರಿ ಶಾಲೆಗಳ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವರು ಸಭೆ ನಡೆಸಿ ಶಾಲಾ ಮಕ್ಕಳ ಸುರಕ್ಷತೆಗೆ ಮೊದಲ ಆದ್ಯತೆ ನೀಡಿ. ದುರಸ್ತಿಯಾಗಬೇಕಾದ ಶಾಲೆಗಳ ಪಟ್ಟಿಯನ್ನೂ ಜು. 31ರ ಒಳಗೆ ನೀಡಿ ಎಂದು ಹೇಳಿದ್ದಾರೆ. ಈ ಕೆಲಸ ಪ್ರಗತಿಯಲ್ಲಿದೆ ಎಂದು ಡಿಡಿಪಿಐ ಮುತ್ತುರೆಡ್ಡಿ ರೆಡ್ಡೇರ್‌ ‘ಪ್ರಜಾವಾಣಿ’ಗೆ ತಿಳಿಸಿದರು. ‘ಅಪಾಯಕಾರಿ ಕಟ್ಟಡಗಳಲ್ಲಿ ಪಾಠಗಳನ್ನು ನಡೆಸಬೇಡಿ. ಸುರಕ್ಷಿತವಾಗಿರುವ ಕೊಠಡಿಗಳನ್ನು ಬಳಕೆ ಮಾಡಿಕೊಳ್ಳಿ. ಅವುಗಳ ಲಭ್ಯತೆ ಇಲ್ಲವಾದರೆ ಸಮೀಪದ ದೇವಸ್ಥಾನ ಅಥವಾ ಸಮುದಾಯ ಭವನಗಳಲ್ಲಿ ತರಗತಿ ನಡೆಸುವಂತೆ ಈಗಾಗಲೇ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮಳೆ ಜಾಸ್ತಿಯಾದರೆ ರಜೆ ಕೊಡುವ ತೀರ್ಮಾನವನ್ನು ಸ್ಥಳೀಯವಾಗಿ ತೆಗೆದುಕೊಳ್ಳುವಂತೆ ಹೇಳಲಾಗಿದೆ’ ಎಂದರು.

ಪೂರಕ ಮಾಹಿತಿ: ಮೆಹಬೂಬ ಹುಸೇನ, ನಾರಾಯಣರಾವ ಕುಲಕರ್ಣಿ, ಕೆ. ಮಲ್ಲಿಕಾರ್ಜುನ, ಮಂಜುನಾಥ ಅಂಗಡಿ, ಉಮಾಶಂಕರ ಹಿರೇಮಠ.

ಕನಕಗಿರಿ ಸಮೀಪದ ಅಡವಿಬಾವಿ ದೊಡ್ಡತಾಂಡದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡದ ಚಾವಣಿ ದುರಸ್ತಿಗೆ ಕಾದಿರುವುದು
ಯಲಬುರ್ಗಾ ತಾಲ್ಲೂಕು ಹಿರೇವಂಕಲಕುಂಟಾ ಗ್ರಾಮದ ಪ್ರಾಥಮಿಕ ಶಾಲೆಯ ಕೊಠಡಿಯೊಂದರಲ್ಲಿ ಹನಿ ಹನಿ ನೀರು ಬೀಳುತ್ತಿರುವುದು
ಕಾರಟಗಿ ಉಪ್ಪಾರ ಓಣಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕೊಠಡಿಯಲ್ಲಿ ದುರಸ್ತಿಗೆ ಕಾದಿರುವುದು  
ಕುಷ್ಟಗಿ ತಾಲ್ಲೂಕು ಹಿರೇಮನ್ನಾಪುರ ಶಾಲೆ ಕಟ್ಟಿದ ಹತ್ತು ವರ್ಷಗಳಲ್ಲಿ ಶಿಥಿಲ ಹಂತಕ್ಕೆ ತಲುಪಿರುವುದು 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.