ADVERTISEMENT

ನಿಡಶೇಸಿ ಕೆರೆ ಸುತ್ತ 'ಹಸಿರು ತೋರಣ'

​ಪ್ರಜಾವಾಣಿ ವಾರ್ತೆ
Published 5 ಜೂನ್ 2020, 4:31 IST
Last Updated 5 ಜೂನ್ 2020, 4:31 IST
ಕುಷ್ಟಗಿ ತಾಲ್ಲೂಕು ನಿಡಶೇಸಿ ಕೆರೆ ದಂಡೆಯ ಸುತ್ತ ಬೆಳೆದಿರುವ ಗಿಡಗಳು
ಕುಷ್ಟಗಿ ತಾಲ್ಲೂಕು ನಿಡಶೇಸಿ ಕೆರೆ ದಂಡೆಯ ಸುತ್ತ ಬೆಳೆದಿರುವ ಗಿಡಗಳು   

ಕುಷ್ಟಗಿ: ಕಳೆದ ವರ್ಷ ಸಾರ್ವಜನಿಕರ ಸ್ವಯಂ ಪ್ರೇರಣೆಯಿಂದ ಅಭಿವೃದ್ಧಿಗೊಂಡಿರುವ ತಾಲ್ಲೂಕನ ನಿಡಶೇಸಿ ಕೆರೆ ದಂಡೆಯ ಸುತ್ತಲೂ ನಾಟಿ ಮಾಡಲಾಗಿರುವ ನೂರಾರು ಗಿಡಗಳು ಉತ್ತಮ ರೀತಿಯಲ್ಲಿ ಬೆಳೆದು ಪಕ್ಷಿಗಳಿಗೆ ಆಸರೆಯಾಗಿವೆ.

ಪಟ್ಟಣದ ಕುಡಿಯುವ ನೀರಿನ ಪ್ರಮುಖ ಜಲಮೂಲವಾಗಿದ್ದ ಈ ಕೆರೆ ಸಣ್ಣ ನೀರಾವರಿ ಇಲಾಖೆಗೆ ಸೇರಿದ್ದರೂ ಅಭಿವೃದ್ಧಿ ಕಾಣದೆ ದುರವಸ್ಥೆಗೀಡಾಗಿತ್ತು. ಸರ್ಕಾರದ ನೆರೆವಿಲ್ಲದೆ ಸಾರ್ವಜನಿಕರು, ಸಂಘ ಸಂಸ್ಥೆಗಳು, ಕೆಲ ಕಂಪೆನಿಗಳು ನೀಡಿದ ₹ 1 ಕೋಟಿ ದೇಣಿಗೆಯಲ್ಲಿ ಅಭಿವೃದ್ಧಿಗೊಂಡಿತ್ತು. ಅಪಾರ ಪ್ರಮಾಣದಲ್ಲಿ ಹೂಳು ತೆಗೆದಿದ್ದರಿಂದ ಕಳೆದ ವರ್ಷದ ಹಿಂಗಾರಿನಲ್ಲಿ ಕೆರೆ ಭರ್ತಿಯಾಗಿ ಶ್ರಮವಹಿಸಿದ್ದ ಜನರಲ್ಲಿ ಸಂತಸ ತಂದಿತ್ತು.

ಪ್ರಾದೇಶಿಕ ಅರಣ್ಯ ಇಲಾಖೆ ಕಳೆದ ವರ್ಷ ಕೆರೆಯ ಸುತ್ತ ಹೊಸದಾಗಿ ನಿರ್ಮಾಣಗೊಂಡ ಏರಿಯ ಸುತ್ತಲೂ ಅರಳೆ, ಬೇವು ಮತ್ತಿತರೆ ಅರಣ್ಯ ಜಾತಿಯ ಸುಮಾರು ಸಾವಿರಕ್ಕೂ ಅಧಿಕ ಸಂಖ್ಯೆಯ ಸಸಿಗಳನ್ನು ನಾಟಿ ಮಾಡಿತ್ತು. ಈಗ ಸಸಿಗಳು ಗಿಡಗಳಾಗಿ ಬೆಳೆದು ಜನರ ಗಮನಸೆಳೆಯುತ್ತಿವೆ.

ADVERTISEMENT

‘ಒಂದೇ ವರ್ಷದಲ್ಲಿ ಗಿಡಗಳು ಉತ್ತಮ ರೀತಿಯಲ್ಲಿ ಬೆಳವಣಿಗೆ ಹೊಂದಿದ್ದು ಇನ್ನೂ ಕೆಲ ವರ್ಷಗಳವರೆಗೆ ಹೀಗೇ ಆರೈಕೆ ಮಾಡಿದರೆ ಕೆರೆಯ ಸುತ್ತ ಹಸಿರಿನ ತೋರಣದಂತೆ ಕಂಗೊಳಿಸುತ್ತವೆ. ಈ ವರ್ಷ ಕೆರೆಯ ನಡುಗಡ್ಡೆಯಲ್ಲಿಯೂ ಇನ್ನಷ್ಟು ಸಸಿಗಳನ್ನು ನಾಟಿ ಮಾಡುವ ಉದ್ದೇಶ ಹೊಂದಲಾಗಿದೆ‘ ಎಂದು ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರಪ್ಪ ಬಳೂಟಗಿ ಹೇಳಿದರು.

ಜನರ ಇಚ್ಛೆಗೆ ಪೂರಕವಾಗಿ ಅರಣ್ಯ ಇಲಾಖೆಯೂ ಸ್ಪಂದಿಸುತ್ತಿದ್ದು ವಿವಿಧ ಬಗೆಯ ಹೆಚ್ಚಿನ ಸಂಖ್ಯೆ ಸಸಿಗಳನ್ನು ನಾಟಿ ಮಾಡುವ ಉದ್ದೇಶ ಹೊಂದಿದೆ. ವರ್ಷದ ಹಿಂದೆ ಸಸಿಗಳನ್ನು ನಾಟಿ ಮಾಡಿದ್ದು ಜನರೂ ಅವುಗಳ ರಕ್ಷಣೆಗೆ ಮುತುವರ್ಜಿ ವಹಿಸುತ್ತ ಬಂದಿದ್ದಾರೆ. ಇದೇ ಮನೋಭಾವ ಮುಂದುವರೆದರೆ ಕೆರೆ ಪ್ರದೇಶದಲ್ಲಿ ಉತ್ತಮ ಪರಿಸರ ನಿರ್ಮಾಣಗೊಳ್ಳುತ್ತದೆ‘ ಎನ್ನುತ್ತಾರೆ ಅರಣ್ಯ ಇಲಾಖೆ ಸಿಬ್ಬಂದಿ ಶಿವಶಂಕರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.