ADVERTISEMENT

ನೀರು ಸಂಗ್ರಹ: ಅಂತರ್ಜಲ ಮಟ್ಟ ಹೆಚ್ಚಳ

ಕುಡಿಯುವ ನೀರಿನ ಕೆರೆ ಹೂಳೆತ್ತುವ ಕಾರ್ಯಕ್ಕೆ ಚಾಲನೆ: ಗವಿಶ್ರೀ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2021, 4:51 IST
Last Updated 12 ಡಿಸೆಂಬರ್ 2021, 4:51 IST
ಅಳವಂಡಿ ಸಮೀಪದ ಕವಲೂರು ಗ್ರಾಮದ ಕುಡಿಯುವ ನೀರಿನ ಕೆರೆ ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡಿ ಗವಿಶ್ರೀ ಸ್ವಾಮೀಜಿ ಮಾತನಾಡಿದರು
ಅಳವಂಡಿ ಸಮೀಪದ ಕವಲೂರು ಗ್ರಾಮದ ಕುಡಿಯುವ ನೀರಿನ ಕೆರೆ ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡಿ ಗವಿಶ್ರೀ ಸ್ವಾಮೀಜಿ ಮಾತನಾಡಿದರು   

ಅಳವಂಡಿ: ‘ನೀರು ನಿಲ್ಲಿಸದೇ ಇರುವುದರಿಂದ ಅಂತರ್ಜಲ ಮಟ್ಟ ಕುಸಿಯುತ್ತದೆ. ಎಲ್ಲರೂ ನೀರು ಸಂಗ್ರಹಿಸುವ ಕೆಲಸ ಮಾಡಬೇಕು. ನೀರು ದೊಡ್ಡ ಆಸ್ತಿ ಹಾಗೂ ಸಂಪತ್ತು’ ಎಂದು ಕೊಪ್ಪಳ ಗವಿಮಠದ ಅಭಿನವ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಹೇಳಿದರು.

ಸಮೀಪದ ಕವಲೂರು ಗ್ರಾಮದ ಕುಡಿಯುವ ನೀರಿನ ಕೆರೆ ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.

ಶುದ್ಧ ಗಾಳಿ ಹಾಗೂ ನೀರು ಅಮೂಲ್ಯ ಸಂಪತ್ತು. ಕೆರೆ ಎಂದರೇ ಸಂಪತ್ತಿದ್ದ ಹಾಗೆ. ಮನುಷ್ಯ ಹಣ ಇಲ್ಲದೇ ಬದುಕಬಹುದು ನೀರಿಲ್ಲದೇ ಬದುಕಲು ಸಾಧ್ಯವಿಲ್ಲ. ಎಲ್ಲರೂ ಒಗ್ಗಟ್ಟಿನಿಂದ ಹಾಗೂ ಸಮಾನ ಮನಸ್ಸಿನಿಂದ ಕೂಡಿ ಕೆರೆ ಹೂಳೆತ್ತುವ ಕಾರ್ಯ ಕೈಗೊಂಡಿದ್ದು ಸಂತಸದ ವಿಷಯ ಎಂದು ಹೇಳಿದರು.

ADVERTISEMENT

ನೀರು ಸಂಗ್ರಹ ಮಾಡುವ ಕೆಲಸಕ್ಕೆ ಯಾರೂ ಅಡ್ಡಿಪಡಿಸಬಾರದು. ಎಲ್ಲರೂ ಸಮಾನ ಮನಸ್ಸಿನಿಂದ ಜೋಪಾನ ಮಾಡಬೇಕು. ಇದು ನಿಮ್ಮ ಊರಿನ ದೊಡ್ಡ ಆಸ್ತಿ. ಪ್ರತಿಯೊಬ್ಬರೂ ಕೆರೆ ಹಾಗೂ ಕಟ್ಟೆಗಳಲ್ಲಿ ನೀರು ಸಂಗ್ರಹಿಸುವ ಕೆಲಸ ಮಾಡುವುದರಿಂದ ಅಂತರ್ಜಲ ಮಟ್ಟ ಹೆಚ್ಚುತ್ತದೆ. ಕಾರಣ ಗ್ರಾಮಸ್ಥರು ಈ ಕಾರ್ಯಕ್ಕೆ ಪ್ರೋತ್ಸಾಹ ನೀಡಬೇಕು ಎಂದರು.

ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ಕೆರೆ ಹೂಳೆತ್ತುವ ಕಾರ್ಯ ಪ್ರಾರಂಭಿಸಲಾಗಿದೆ.

ಕುಡಿಯುವ ನೀರಿನ ಕೆರೆ 12 ಎಕರೆ ಇದೆ. ಹಿಂದೆ ಗ್ರಾಮದ‌ ಬಡಿಗೇರ ಕುಟುಂಬ ದಾನವಾಗಿ ನೀಡಿತ್ತು. ನಂತರ ಗ್ರಾಮದ‌ ಬಸವಂತಗೌಡರು ನಿರ್ಮಿಸಿದರು. ನಂತರ ಪ್ರದೀಪ ಗೌಡ ಅವರು ದುರಸ್ತಿ ಮಾಡಿದರು. ಇಪ್ಪತ್ತು ವರ್ಷಗಳ ನಂತರ ಈ ವರ್ಷ ಮಳೆಯಾಗದ‌ ಕಾರಣ ಕೆರೆ ನೀರು ಸಂಗ್ರಹವಾಗದೇ ಇರುವುದರಿಂದ ಗ್ರಾ.ಪಂ. ಸದಸ್ಯರು ಹಾಗೂ ಗ್ರಾಮಸ್ಥರು ಹೂಳೆತ್ತುವ ಕಾರ್ಯ ಕೈಗೊಂಡಿದ್ದು, ಗವಿಸಿದ್ದೇಶ್ವರ ಮಹಾಸ್ವಾಮಿಗಳು ಆರ್ಶೀವಾದ ಮಾಡಿದ್ದಾರೆ.

ಗ್ರಾ.ಪಂ ಅಧ್ಯಕ್ಷೆ ಜ್ಯೋತಿ ಮಹಾಂತೇಶ ಸಿಂದೋಗಿಮಠ, ಪ್ರದೀಪ ಗೌಡ ಮಾಲಿ ಪಾಟೀಲ, ಭರಮಪ್ಪ ನಗರ, ತೋಟಪ್ಪ ಶಿಂಟ್ರ, ಹೊನ್ನಪ್ಪ ಗೌಡ ಹಾಗೂ ಗ್ರಾ.ಪಂ ಉಪಾಧ್ಯಕ್ಷೆ, ಸದಸ್ಯರು ಹಾಗೂ ಗ್ರಾಮದ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.