ADVERTISEMENT

ಅತಿಥಿ ಶಿಕ್ಷಕರ ನೇಮಕ ಜಟಿಲ | ರಾಜಕಾರಣಿಗಳ ಅಡ್ಡಿ: ಆರೋಪ

ನಾರಾಯಣರಾವ ಕುಲಕರ್ಣಿ
Published 9 ಜೂನ್ 2025, 7:08 IST
Last Updated 9 ಜೂನ್ 2025, 7:08 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಕುಷ್ಟಗಿ: ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಸಹ ಶಿಕ್ಷಕರ ಸ್ಥಾನಗಳಿಗೆ ಅತಿಥಿ ಶಿಕ್ಷಕರ ನೇಮಕ ಪ್ರಕ್ರಿಯೆ ಆರಂಭಗೊಂಡಿದೆ. ಆದರೆ ನೇಮಕದ ಜವಾಬ್ದಾರಿ ಹೊತ್ತಿರುವ ಆಯಾ ಶಾಲೆಗಳ ಮುಖ್ಯಶಿಕ್ಷಕರ ಮೇಲೆ ಸ್ಥಳೀಯ ಮುಖಂಡರು, ರಾಜಕಾರಣಿಗಳು ಒತ್ತಡ ಹೇರುತ್ತಿರುವುದರಿಂದ ನೇಮಕ ಪ್ರಕ್ರಿಯೆ ಜಟಿಲವಾಗುತ್ತಿರುವುದಷ್ಟೇ ಅಲ್ಲ ಅರ್ಹರು ಅವಕಾಶ ವಂಚಿತರಾಗುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಸರ್ಕಾರದ ಬಹುತೇಕ ಶಾಲೆಗಳಿಗೆ ಅತಿಥಿ ಶಿಕ್ಷಕರೇ ಆಸರೆಯಾಗಿದ್ದಾರೆ. 2025-26ನೇ ಶೈಕ್ಷಣಿಕ ವರ್ಷಕ್ಕೆ ತಾಲ್ಲೂಕಿನಲ್ಲಿ ಪ್ರಾಥಮಿಕ ಶಾಲೆಗಳಿಗೆ 461 ಹಾಗೂ ಪ್ರೌಢಶಾಲೆಗಳಿಗೆ 97 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವುದಕ್ಕೆ ಶಾಲಾ ಶಿಕ್ಷಣ ಇಲಾಖೆ ಅನುಮತಿ ನೀಡಿದೆ. ಅರ್ಹರಿಂದ ಮೇ 29ರಿಂದ ಅರ್ಜಿ ಪಡೆಯಲಾಗಿದ್ದು ಜೂನ್‌ 4ಕ್ಕೆ ಆಯ್ಕೆಯಾಗಿರುವ ಶಿಕ್ಷಕರ ಪಟ್ಟಿ ನೋಟಿಸ್‌ ಬೋರ್ಡ್‌ಗೆ ಪ್ರಕಟಿಸುವ ಹಾಗೂ ಜೂನ್‌ 5 ರಂದು ಅತಿಥಿ ಶಿಕ್ಷಕರು ಕರ್ತವ್ಯಕ್ಕೆ ಹಾಜರಾಗಬೇಕು ಮತ್ತು ಜೂ.6ಕ್ಕೆ ಆಯ್ಕೆ ಪಟ್ಟಿಯನ್ನು ಮುಖ್ಯಶಿಕ್ಷಕರು ಕ್ಷೇತ್ರ ಶಿಕ್ಷಣಾಧಿಕಾರಿಗೆ ಸಲ್ಲಿಸಬೇಕು. ಆದರೆ ಈವರೆಗೂ ಬಹುತೇಕ ಶಾಲೆಗಳಲ್ಲಿ ನೇಮಕ ಪ್ರಕ್ರಿಯೆ ಆರಂಭಗೊಂಡಿಲ್ಲ.

ADVERTISEMENT

ನೇಮಕಾತಿ ಕಡ್ಡಾಯವಾಗಿ ಕೇವಲ ಮೆರಿಟ್‌ ಆಧಾರದ ಮೇಲೆ ನಡೆಯಬೇಕಿದೆ. ಆದರೆ ಇಲಾಖೆಯ ನಿಯಮವನ್ನು ಪಕ್ಕಕ್ಕಿಟ್ಟು ತಾವು ಹೇಳಿದವರನ್ನಷ್ಟೇ ನೇಮಕ ಮಾಡಿಕೊಳ್ಳಬೇಕು ಎಂದು ರಾಜಕಾರಣಿಗಳು ಒತ್ತಡ ಹೇರುತ್ತಿರುವ ಕಾರಣ ನೇಮಕಾತಿ ವಿಷಯ ಜಟಿಲವಾಗಿದ್ದು ಮುಖ್ಯಶಿಕ್ಷಕರು ಅಡಕತ್ತರಿಯಲ್ಲಿ ಸಿಲುಕಿದ್ದಾರೆ ಎನ್ನುವ ದೂರು ಕೇಳಿಬಂದಿದೆ.

ಅರ್ಹತೆ ಹೀಗಿದೆ: ಶಾಲಾ ಶಿಕ್ಷಣ ಇಲಾಖೆ ಹೊರಡಿಸಿರುವ ಆದೇಶದ ಪ್ರಕಾರ 1-5ನೇ ತರಗತಿಗೆ ಬಿ.ಇಡಿ 6-7,8ನೇ ತರಗತಿಗಳ ಶಿಕ್ಷಕರಿಗೆ ಡಿ.ಇಡಿ ಮತ್ತು ಪದವಿ ಅಥವಾ ಬಿ.ಇಡಿ ಅರ್ಹತೆ ಕಡ್ಡಾಯವಾಗಿದ್ದು ನೇಮಕಾತಿಯಲ್ಲಿ ಅಭ್ಯರ್ಥಿಗಳ ಉತ್ತಮ ನಡವಳಿಕೆ ಹಾಗೂ ಮೆರಿಟ್‌ ಮಾತ್ರ ಪರಿಗಣಿಸಬೇಕು. ಎಸ್‌ಡಿಎಂಸಿಯವರ ಸಮ್ಮುಖದಲ್ಲಿ ಅಭ್ಯರ್ಥಿಗಳ ಅರ್ಜಿಗಳನ್ನು ಪರಿಶೀಲಿಸಿ ಅಂತಿಮ ಪಟ್ಟಿ ಪ್ರಕಟಿಸುವುದು ಮುಖ್ಯಶಿಕ್ಷಕರ ಜವಾಬ್ದಾರಿ. ಆದರೆ ಸುಸೂತ್ರ ನೇಮಕ ಪ್ರಕ್ರಿಯೆಗೆ ನೆರವಾಗಬೇಕಿದ್ದ ಎಸ್‌ಡಿಎಂಸಿಯವರು ಮತ್ತು ರಾಜಕೀಯ ವ್ಯಕ್ತಿಗಳೇ ಅಡ್ಡಗಾಲಾಗಿದ್ದಾರೆ. ಇನ್ನೊಂದೆಡೆ ರಾಜಕೀಯ ಪ್ರಭಾವ ಹೊಂದಿರುವ ಕೆಲ ಮುಖ್ಯಶಿಕ್ಷಕರು ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಆಗಿದ್ದೇನು?:

ಹಿಂದಿನ ವರ್ಷ ಕರ್ತವ್ಯ ನಿರ್ವಹಿಸಿರುವವರು, ಕಡಿಮೆ ಮೆರಿಟ್‌ ಹೊಂದಿರುವ ಮತ್ತು ಅರ್ಹತೆ ಇಲ್ಲದಿದ್ದರೂ ಸ್ಥಳೀಯರನ್ನೇ ಅತಿಥಿ ಶಿಕ್ಷಕರ ಸ್ಥಾನಗಳಿಗೆ ನೇಮಕ ಮಾಡಿಕೊಳ್ಳಲು ತೀವ್ರ ಒತ್ತಡ ಹೇರಲಾಗುತ್ತಿದೆ ಎಂದು ಹೆಸರು ಪ್ರಕಟಿಸಲು ಇಚ್ಛಿಸದ ಅಭ್ಯರ್ಥಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.

ಬಹುತೇಕ ಶಾಲೆಗಳಲ್ಲಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮುಖ್ಯಶಿಕ್ಷಕರು ಸ್ವೀಕೃತಿ ನೀಡದೆ ಸತಾಯಿಸಿದ್ದು, ಒತ್ತಾಯಿಸಿದರೆ ‘ನಿಮ್ಮ ಅರ್ಜಿಯೇ ಬಂದಿಲ್ಲ’ ಎಂದು ಹೇಳುತ್ತಿದ್ದಾರೆ ಎಂದು ಹಿರೇಬಾಲನಗೌಡ ಯಾದವ, ನಾಗರಾಜ ಗುಡದೂರು ಇತರರು ಹೇಳಿದರು.

ಈ ಕುರಿತು ‘ಪ್ರಜಾವಾಣಿ’ಗೆ ವಿವರಿಸಿದ ಕೆಲ ಮುಖ್ಯಶಿಕ್ಷಕರು, ತಪ್ಪು ಎಸಗಿದರೆ ಶಿಸ್ತುಕ್ರಮ ಎದುರಿಸಬೇಕು. ಇನ್ನೊಂದೆಡೆ ರಾಜಕಾರಣಿಗಳ ಒತ್ತಡ ಹೇರುತ್ತಿದ್ದಾರೆ. ಎಲ್ಲ ಶಾಲೆಗಳಲ್ಲಿಯೂ ಇದೇ ಸಮಸ್ಯೆ ಇದೆ. ಈ ವಿಷಯದಲ್ಲಿ ಮಾನಸಿಕ ಒತ್ತಡಕ್ಕೆ ಸಿಲುಕಿದ್ದೇವೆ. ಮೇಲಧಿಕಾರಿಗಳು ನಮ್ಮ ನೆರವಿಗೆ ಬರುವುದಿಲ್ಲ ಎಂದು ಅಳಲು ತೋಡಿಕೊಂಡರು.

ಮೆರಿಟ್‌ ಇದ್ದರೂ ನನಗೆ ಅತಿಥಿ ಶಿಕ್ಷಕ ಸ್ಥಾನವನ್ನು ನಿರಾಕರಿಸಲಾಗಿದ್ದು ಉದ್ಯೋಗ ವಂಚಿತಳಾಗಿದ್ದೇನೆ
ಜ್ಯೋತಿ ತಳವಾರ, ಆಕಾಂಕ್ಷಿ
ನಿಯಮಬಾಹಿರ ನೇಮಕ ಪ್ರಕ್ರಿಯೆ ನಡೆದಿದ್ದು, ಈ ಬಗ್ಗೆ ಕಾನೂನು ಹೋರಾಟ ನಡೆಸುವುದು ಅನಿವಾರ್ಯವಾಗಿದೆ
ನಾಗರಾಜ ಗುಡದೂರು, ಅಭ್ಯರ್ಥಿ
ಮೆರಿಟ್‌ ಪರಿಗಣಿಸದೆ ನೇಮಕ ಮಾಡಿಕೊಂಡಿದ್ದರೆ ಅಂಥ ಮುಖ್ಯಶಿಕ್ಷಕರನ್ನೇ ಹೊಣೆಗಾರರನ್ನಾಗಿಸಿ ಶಿಸ್ತು ಕ್ರಮ ಜರುಗಿಸಬೇಕಾಗುತ್ತದೆ
ಸುರೇಂದ್ರ ಕಾಂಬಳೆ, ಕ್ಷೇತ್ರ ಶಿಕ್ಷಣಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.