ADVERTISEMENT

ಹನುಮ ಮಾಲಾ ಜಯಂತಿಗೆ ಸಕಲ ಸಿದ್ಧತೆ

ಅಂಜನಾದ್ರಿಗೆ 30 ಸಾವಿರಕ್ಕೂ ಅಧಿಕ ಭಕ್ತರು ಬರುವ ನಿರೀಕ್ಷೆ; ಬಿಗಿ ಪೊಲೀಸ್‌ ಬಂದೋಬಸ್ತ್‌

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2019, 2:22 IST
Last Updated 8 ಡಿಸೆಂಬರ್ 2019, 2:22 IST
ಅಂಜನಾದ್ರಿಯಲ್ಲಿ ವಾಹನಗಳ ನಿಲುಗಡೆಗಾಗಿ ಸಿದ್ಧತೆ ಮಾಡುತ್ತಿರುವುದು
ಅಂಜನಾದ್ರಿಯಲ್ಲಿ ವಾಹನಗಳ ನಿಲುಗಡೆಗಾಗಿ ಸಿದ್ಧತೆ ಮಾಡುತ್ತಿರುವುದು   

ಗಂಗಾವತಿ: ತಾಲ್ಲೂಕಿನ ಐತಿಹಾಸಿಕ ಅಂಜನಾದ್ರಿ ಬೆಟ್ಟದಲ್ಲಿ ಡಿಸೆಂಬರ್‌ 9 ಸೋಮವಾರ ನಡೆಯುವ ಹನುಮ ಮಾಲಾ ಜಯಂತಿ ಆಚರಣೆಗೆ ತಾಲ್ಲೂಕು ಆಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.

ರಾಜ್ಯದ ನಾನಾ ಜಿಲ್ಲೆಗಳಲ್ಲಿ ಇರುವ ಹನುಮ ಭಕ್ತರು, ಹನುಮ ಜಯಂತಿ ನಿಮಿತ್ತವಾಗಿ ತಿಂಗಳುಗಳ ಕಾಲ ಮಾಲೆಯನ್ನು ಹಾಕಿಕೊಂಡು, ಕಠಿಣ ವ್ರತ ಕೈಗೊಂಡಿರುತ್ತಾರೆ. ಜಯಂತಿಯ ದಿನದಂದು ಅಂಜನಾದ್ರಿ ಬೆಟ್ಟಕ್ಕೆ ಬಂದು ಮಾಲೆಯನ್ನು ವಿಸರ್ಜನೆ ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ಸಾವಿರಾರು ಭಕ್ತರು ಏಕಕಾಲಕ್ಕೆ ಬೆಟ್ಟಕ್ಕೆ ಬರುವ ನಿರೀಕ್ಷೆ ಇರುವುದರಿಂದ ಸಕಲ ತಯಾರಿಯನ್ನು ಮಾಡಿಕೊಳ್ಳಲಾಗಿದೆ.

ಪ್ರತ್ಯೇಕ ಪಾರ್ಕಿಂಗ್‌ ವ್ಯವಸ್ಥೆ: ಭಕ್ತರ ವಾಹನಗಳಿಗೆ ಪ್ರತ್ಯೇಕ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿದೆ. ಕನಕಗಿರಿ, ರಾಯಚೂರು, ಮಾನ್ವಿ, ಲಿಂಗಸಗೂರು, ಶಿರಗುಪ್ಪ, ಯಾದಗಿರಿ, ಬೀದರ್, ಕಲಬುರ್ಗಿ ಕಡೆಯಿಂದ ಗಂಗಾವತಿ ಮಾರ್ಗವಾಗಿ ಬರುವ ವಾಹನಗಳಿಗೆ ಆನೆಗೊಂದಿಯ ಉತ್ಸವದ ಬಯಲು ಹಾಗೂ ಪಂಪಾ ಸರೋವರದಲ್ಲಿ ಪಾರ್ಕಿಂಗ್‌ ವ್ಯವಸ್ಥೆಯನ್ನು ಮಾಡಲಾಗಿದೆ.

ADVERTISEMENT

ಮುನಿರಾಬಾದ್‌ ಮಾರ್ಗವಾಗಿ ಬರುವ ಹೊಸಪೇಟೆ, ಬಳ್ಳಾರಿ, ಕೊಪ್ಪಳ, ಗದಗ, ಕುಷ್ಟಗಿ, ಯಲಬುರ್ಗಾ, ಬೆಂಗಳೂರು, ಹುಬ್ಬಳ್ಳಿ-ಧಾರವಾಡದಿಂದ ಎಲ್ಲಾ ವಾಹನಗಳಿಗೆ ಹನುಮನಹಳ್ಳಿ ಗ್ರಾಮದ ಜಮೀನುಗಳಲ್ಲಿ ಪಾರ್ಕಿಂಗ್‌ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಸಾವಿರಾರು ಜನರು ಏಕಕಾಲಕ್ಕೆ ಬರುವ ಹಿನ್ನೆಲೆಯಲ್ಲಿ ತೊಂದರೆ ಆಗದಂತೆ ಅಲ್ಲಲ್ಲಿ ಬ್ಯಾರಿಕೇಡ್‌ಗಳ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ.

30 ಸಾವಿರ ಭಕ್ತರು ಬರುವ ನಿರೀಕ್ಷೆ: ಈ ಬಾರಿ ಹನುಮ ಮಾಲಾ ಜಯಂತಿಗೆ 30 ಸಾವಿರಕ್ಕೂ ಅಧಿಕ ಭಕ್ತರು ಅಂಜನಾದ್ರಿಗೆ ಬರುವ ನಿರೀಕ್ಷೆ ಇದ್ದು, ಎಲ್ಲ ಭಕ್ತರಿಗೂ ತಾಲ್ಲೂಕು ಆಡಳಿತ ಕುಡಿಯುವ ನೀರಿನ ವ್ಯವಸ್ಥೆ, ಪ್ರಸಾದದ ವ್ಯವಸ್ಥೆ, ಶೌಚಾಲಯಗಳ ವ್ಯವಸ್ಥೆ ಮಾಡಿದೆ. ಬೆಟ್ಟದಲ್ಲಿ ವಿಶೇಷ ಪೂಜೆ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ. ಭಕ್ತರ ಪ್ರಸಾದಕ್ಕಾಗಿ 15 ರಿಂದ 20 ಸಾವಿರ ಲಡ್ಡು ತಯಾರಿಸಲಾಗಿದೆ.

ಬಿಗಿ ಭದ್ರತೆ:ಅಂಜನಾದ್ರಿಯಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ನಿಯೋಜಿಸಲಾಗಿದೆ. ಇಬ್ಬರು ಎಸ್‌ಪಿ, ಒಬ್ಬರು ಡಿವೈಎಸ್ಪಿ, 7-ಸಿಪಿಐ, 15-ಪಿಎಸ್‌ಐ, 50-ಎಎಸ್‌ಐ, 250 ಎಚ್‌ಪಿಸಿ, 150-ಗೃಹರಕ್ಷಕ ದಳ ಸಿಬ್ಬಂದಿ, 25-ಮಹಿಳಾ ಪೊಲೀಸ್, ಡಿಆರ್‌, ಕೆಎಸ್‌ಆರ್‌ಪಿ ತುಕಡಿಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ.

ಸಿಸಿಟಿವಿ ಕ್ಯಾಮೆರಾ ಅಳವಡಿಕೆ: ಜಯಂತಿಯಂದು ಯಾವುದೇ ರೀತಿಯ ಅಹಿತಕರ ಘಟನೆ ಜರುಗದಂತೆ ಎಚ್ಚರ ವಹಿಸಲು ಕಂದಾಯ ಹಾಗೂ ಪೊಲೀಸ್‌ ಇಲಾಖೆ ಸಂಕೀರ್ಣ ಯಾತ್ರೆ ನಡೆಯುವ ಮಾರ್ಗ, ಬೆಟ್ಟದ ಮೇಲೆ, ಮೆಟ್ಟಿಲುಗಳು ಹತ್ತುವಾಗ ಅಲ್ಲಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ವಾಹನಗಳ ಪಾರ್ಕಿಂಗ್‌, ಊಟದ ಸ್ಥಳದಲ್ಲೂ ಸಿಸಿಟಿವಿ ಕ್ಯಾಮೆರಾಗಳನ್ನು ಹಾಕಲಾಗಿದ್ದು, ಪ್ರತಿಯೊಂದು ಕ್ಷಣವನ್ನು ರೆಕಾರ್ಡ್‌ ಮಾಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.