
ಗಂಗಾವತಿ: ‘ಹನುಮಮಾಲೆ ಧರಿಸುವ ಯುವಕರಿಗೆ ದೇಶ, ಧರ್ಮ, ರಾಮಭಕ್ತಿ ಮೂಡಿಸುವುದೇ ಹೊರೆತು, ಧರ್ಮ, ದೇಶ ವಿರೋಧಿ ಕೆಲಸ ಮಾಡಲು ಅಲ್ಲ. ಹಿಂದಿನ ಕೆಲ ವರ್ಷಗಳಲ್ಲಿ ಹಿಂದೂ ದೇವಾಲಯಗಳು ಸಾಕಷ್ಟು ಆಕ್ರಮಿತವಾಗಿವೆ. ಅವುಗಳನ್ನು ನಾವು ಪುನಃ ಪಡೆಯಬೇಕು’ ಎಂದು ವಿಶ್ವ ಹಿಂದೂ ಪರಿಷತ್ ರಾಷ್ಟ್ರೀಯ ಸಂಯೋಜಕ ಕೇಶವರಾವ್ ಅಭಿಪ್ರಾಯಪಟ್ಟರು.
ನಗರದ ಡಾ.ಬಾಬು ಜಗಜೀವನರಾಮ್ ವೃತ್ತದಲ್ಲಿ ಹನುಮಮಾಲಾ ವಿಸರ್ಜನೆ ಪ್ರಯುಕ್ತ ವಿಶ್ವ ಹಿಂದೂ ಪರಿಷತ್, ಬಜ ರಂಗದಳ ಸಂಘಟನೆಗಳಿಂದ ಬುಧವಾರ ನಡೆದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
‘ಹಲವು ವರ್ಷಗಳಿಂದ ಹಿಂದೂ ಧರ್ಮದ ವಿರುದ್ದ ದಾಳಿ ನಡೆಯುತ್ತಲೇ ಇದೆ. ಇಂಥ ದಾಳಿಯಿಂದ ಸಾಕಷ್ಟು ದೇವಾಲಯಗಳು ಧ್ವಂಸವಾಗಿವೆ. ಹಿಂದೂಗಳನ್ನು ಮತಾಂತರಿಸಲಾಗಿದೆ. ಹಿಂದೂ ಧರ್ಮದ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಪರಿಣಾಮ ದೇಶದಲ್ಲಿ ಈಗಾಗಲೇ 15 ಲಕ್ಷ ಜನ ಹಿಂದೂ ಧರ್ಮಕ್ಕೆ ವಾಪಸ್ಸಾಗಿದ್ದಾರೆ. ಎಲ್ಲರಲ್ಲೂ ಧರ್ಮದ ಬಗ್ಗೆ ಜಾಗೃತಿ ಮೂಡಬೇಕಿದೆ’ ಎಂದರು.
‘ವಿಶ್ವ ಹಿಂದೂ ಪರಿಷತ್ ಕ್ಷೇತ್ರ ಪ್ರಚಾರಕ ಸೂರ್ಯ ನಾರಾಯಣ ಮಾತನಾಡಿ, ‘ಇತಿಹಾಸ ಅವಲೋಕಿಸಿದಾಗ ಹಿಂದೂಗಳು ಯಾರ ಮೇಲೂ ದಾಳಿ ನಡೆಸಿಲ್ಲ. ಆದರೆ ಹಿಂದೂಗಳ ಮತ್ತು ಹಿಂದೂಗಳ ದೇವಸ್ಥಾನ ಮೇಲೆ ಸಾಕಷ್ಟು ದಾಳಿಗಳು ನಡೆದಿವೆ. ಈವರೆಗೆ ಹಿಂದೂ ಧರ್ಮಕ್ಕೆ ಸ್ವಾತಂತ್ರ್ಯವೇ ದೊರೆತಿಲ್ಲ’ ಎಂದರು.
‘ಹಿಂದೂಗಳು ಜಾಗೃತಗೊಳ್ಳದಿದ್ದರೇ, ಮುಂಬರುವ 50 ವರ್ಷಗಳಲ್ಲಿ ನಾವು ಸಾರ್ವಜನಿಕವಾಗಿ ಸಭೆ, ಸಮಾರಂಭ ನಡೆಸಲು ಆಗುವುದಿಲ್ಲ. ಅಷ್ಟರ ಮಟ್ಟಿಗೆ ಕಷ್ಟಕರ ದಿನಗಳು ಬರಲಿದೆ. ಸದ್ಯ ದೇಶದಲ್ಲಿ ಮುಸ್ಲಿಂ, ಕ್ರೈಸ್ತ ಧರ್ಮಗಳಿಂದ ಮತಾಂತರ ಕಾರ್ಯ ಜೋರಾಗಿ ನಡೆಯುತ್ತಿದೆ. ಅದಕ್ಕೆ ಕೆಲ ರಾಜಕೀಯ ಪಕ್ಷಗಳು ಸಹ ಬೆಂಬಲ ನೀಡುತ್ತಿವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಹಿಂದೂ ಧರ್ಮ ಎಲ್ಲಿವರೆಗೆ ಒಗ್ಗಟ್ಟಾಗಿ ಇರಲು ಸಾಧ್ಯವಿಲ್ಲವೋ, ಅಲ್ಲಿವರೆಗೆ ಹಿಂದೂಗಳ ಮತಾಂತರ ನಿಲ್ಲುವುದಿಲ್ಲ. ಎಸ್‌ಸಿ, ಎಸ್‌ಟಿ ಸಮುದಾಯದವರೂ ಸಹ ಹಿಂದೂಗಳೇ. ಕೆಲವರು ನಮ್ಮಲ್ಲಿಯೇ ಭಿನ್ನಾಭಿಪ್ರಾಯ ಸೃಷ್ಟಿಸಿ, ಸಮುದಾಯಗಳನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಈ ಸಮಸ್ಯೆಗೆ ಒಂದೇ ಪರಿಹಾರ ಹಿಂದೂ ಧರ್ಮ ಸಂಘಟಿತವಾಗಬೇಕು’ ಎಂದರು.
‘ಈಚೆಗೆ ಅಲ್ಪಸಂಖ್ಯಾತರು, ಹಿಂದೂಗಳ ಮೇಲೆ ದಬ್ಬಾಳಿಕೆ ಮಾಡಲು ಹೊರಟಿದ್ದಾರೆ. ಇನ್ನೂ ವಿಶ್ವವಿದ್ಯಾಲಯ, ಕಾಲೇಜುಗಳಲ್ಲಿನ ವಿದ್ಯಾರ್ಥಿಗಳಿಗೂ ಸಹ ಧರ್ಮದ ನಶೆ ಎರಿಸಲಾಗುತ್ತಿದೆ. ಹನುಮಮಾಲೆ ಧಾರಣೆ ಮಾಡಿದ ಎಲ್ಲ ಮಾಲಾಧಾರಿಗಳು ಧರ್ಮರಕ್ಷಣೆಗಾಗಿ ಶ್ರಮಿಸಬೇಕಾಗಿದೆ’ ಎಂದರು.
ಬೃಹತ್ ಸಂಕೀರ್ತನಾ ಯಾತ್ರೆ
ಹನುಮಮಾಲಾ ವಿಸರ್ಜನೆ ಅಂಗವಾಗಿ ನಗರದ ಎಪಿಎಂಸಿ ಸಮುದಾಯ ಭವನದಿಂದ ಆರಂಭವಾದ ಬೃಹತ್ ಸಂಕೀರ್ತನಾ ಯಾತ್ರೆ ಸಿಬಿಎಸ್ ಮಹಾವೀರ ಗಣೇಶ ಗಾಂಧಿ ಪಂಪಾನಗರ ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಬಂದು ಜಗಜೀವನರಾಮ್ ವೃತ್ತದಲ್ಲಿ ಸಮಾರೋಪಗೊಂಡಿತು. ಮೆರವಣಿಗೆಯಲ್ಲಿ ಮುಸ್ಲಿಂ ಸಮಾಜದ ಕೆಲ ಮುಖಂಡರು ಮಾಲಾಧಾರಿಗಳಿಗೆ ಮಾಲೆಧಾರಣೆ ಮಾಡಿದ ಶಾಸಕ ಜಿ. ಜನಾರ್ದನರೆಡ್ಡಿ ಅವರಿಗೆ ಸನ್ಮಾನಿಸಿ ಗೌರವಿಸಿದರು.
ಸಂಕೀರ್ತಾನಾ ಯಾತ್ರೆಯಲ್ಲಿ 2 ಸಾವಿರಕ್ಕೂ ಹೆಚ್ಚು ಮಾಲಾಧಾರಿಗಳು ಭಾಗವಹಿಸಿದ್ದರು. ಭಜನೆ ಜೊತೆಗೆ ಘೋಷಣೆಗಳ ಕೂಗುವ ಮೂಲಕ ಯಾತ್ರೆ ಜರುಗಿತು. ಆನೆಗೊಂದಿ ಸರಸ್ವತಿ ಸಂಸ್ಥಾನ ಪೀಠದ ಶ್ರೀಕಂಠಸ್ವಾಮಿ ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಮಾಜಿ ಸಂಸದ ಶಿವರಾಮಗೌಡ ಹಿಂದೂ ಪರ ಸಂಘಟನೆಗಳ ಮುಖಂಡ ಬಸವರಾಜ ಸೂಗುರ ವಿನಯ ಪಾಟೀಲ ಶಿವಕುಮಾರ ಸಂಗಮೇಶ ಹಿರೇಮಠ ಪುಂಡಲಿಕ ದಳವಾಯಿ ಸೇರಿದಂತೆ ಅನೇಕ ಹನುಮ ಮಾಲಾಧಾರಿಗಳು ಉಪಸ್ಥಿತರಿದ್ದರು.
2008ರಿಂದ ಆರಂಭವಾದ ಹನುಮಮಾಲಾ ವಿಸರ್ಜನೆ ಈಗ ಬೃಹತ್ ಮಟ್ಟದಲ್ಲಿ ಬೆಳೆದಿದೆ. ವರ್ಷದಿಂದ ವರ್ಷಕ್ಕೆ ಅಂಜನಾದ್ರಿ ಬೆಟ್ಟಕ್ಕೆ ಬರುವ ಮಾಲಾಧಾರಿಗಳ ಸಂಖ್ಯೆ ಹೆಚ್ಚುತ್ತಿದೆ. ಇದಕ್ಕೆ ಪೂರಕವಾಗಿ ಮಾಲಾಧಾರಿಗಳಿಗೆ ಎಲ್ಲ ಸೌಕರ್ಯಗಳನ್ನು ಕಲ್ಪಿಸಲಾಗುತ್ತಿದೆ.–ವಿದ್ಯದಾಸ ಬಾಬ ಅಂಜನಾದ್ರಿಬೆಟ್ಟ ಅರ್ಚಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.