ADVERTISEMENT

ಗಂಗಾವತಿ | ಹನುಮಮಾಲಾ ವಿಸರ್ಜನೆ: ಜಿಲ್ಲಾಡಳಿತದಿಂದ ಪ್ರಮುಖ ಸಿದ್ದತೆ

ಅಗತ್ಯ ಸೌಕರ್ಯಗಳನ್ನು ನಾಲ್ಕೈದು ದಿನಗಳ ಮುಂಚಿತವಾಗಿಯೇ ಕಲ್ಪಿಸಲಾಗಿದೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2025, 5:28 IST
Last Updated 1 ಡಿಸೆಂಬರ್ 2025, 5:28 IST
ಹನುಮಮಾಲಾ ವಿಸರ್ಜನೆ ಸಿದ್ಧತಾ ಕಾರ್ಯ ಅಂಗವಾಗಿ ಮುಖ್ಯ ರಸ್ತೆಗೆ ಬಂಟಿಂಗ್ ಕಟ್ಟುತ್ತಿರುವುದು
ಹನುಮಮಾಲಾ ವಿಸರ್ಜನೆ ಸಿದ್ಧತಾ ಕಾರ್ಯ ಅಂಗವಾಗಿ ಮುಖ್ಯ ರಸ್ತೆಗೆ ಬಂಟಿಂಗ್ ಕಟ್ಟುತ್ತಿರುವುದು   

ಗಂಗಾವತಿ: ಅಂಜನಾದ್ರಿ ಬೆಟ್ಟದಲ್ಲಿ ಡಿ.02 ಮತ್ತು 03ರಂದು ನಡೆಯುವ ಹನುಮಮಾಲಾ ವಿಸರ್ಜನೆ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತ ಸಕಲ ಸಿದ್ದತೆ ಕೈಗೊಳ್ಳುತ್ತಿದೆ.

ಪ್ರತಿವರ್ಷ ಹನುಮಮಾಲಾ ವಿಸರ್ಜನೆ ಅಂಜನಾದ್ರಿ ಬೆಟ್ಟದಲ್ಲಿ ಅದ್ದೂರಿಯಾಗಿ ನಡೆಯಲಿದ್ದು, ಈ ವರ್ಷವು ಸಹ ಮಾಲಾಧಾರಿಗಳಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಅಗತ್ಯ ಸೌಕರ್ಯಗಳನ್ನು ನಾಲ್ಕೈದು ದಿನಗಳ ಮುಂಚಿತವಾಗಿಯೇ ಕಲ್ಪಿಸಲಾಗಿದೆ.

ಸಿದ್ದತೆಗಳ ಭಾಗವಾಗಿ ಅಂಜನಾದ್ರಿ ವೇದಪಾಠ ಶಾಲೆ ಬಳಿ ಪೆಂಡಲ್, ಊಟ, ಪ್ರಸಾದದ ಕೌಂಟರ್ ಕಲ್ಪಿಸಲಾಗಿದೆ. ಅಂಜನಾದ್ರಿ ಮುಂಭಾಗದ ರಸ್ತೆಯ ಎರಡು ಬದಿಯಲ್ಲಿದ್ದ ಎಲ್ಲ ವ್ಯಾಪಾರದ ಬಂಡಿಗಳನ್ನು ತೆರವುಗೊಳಿಸಿ, ಸಂಚಾರ ದಟ್ಟಣೆ ನಿಯಂತ್ರಣಕ್ಕೆ ವ್ಯವಸ್ಥೆ ಮಾಡಿದ್ದಾರೆ.

ADVERTISEMENT

ಇನ್ನೂ ಅಂಜನಾದ್ರಿಯಿಂದ-ಆನೆಗೊಂದಿವರೆಗೆ ರಸ್ತೆಯುದ್ದಕ್ಕೂ ಬಂಟಿಂಗ್, ಆಂಜನೇಯ ದೇವರ ಚಿತ್ರದ ಕೇಸರಿ ಧ್ವಜ ಕಟ್ಟಲಾಗಿದೆ. ಜೊತೆಗೆ ಲೈಟಿಂಗ್, ಮಾಹಿತಿ ರವಾನೆಗೆ 40ಕ್ಕೂ ಹೆಚ್ಚು ಮೈಕ್‌ಸೆಟ್‌ಗಳನ್ನು ಅವಳಡಿಸಲಾಗಿದೆ ಎಂದರು.

ಸ್ನಾನಘಟ್ಟ: ಮಾಲೆ ವಿಸರ್ಜನೆಗೆ ಆಗಮಿಸುವ ಭಕ್ತರು ಸ್ನಾನ ಮಾಡಲು ದೇವಸ್ಥಾನ ಮತ್ತು ಆನೆಗೊಂದಿ ಪಾರ್ಕಿಂಗ್, ದುರ್ಗಾದೇವಿ ಬೆಟ್ಟ, ಪಂಪಾಸರೋವರ, ಹನುಮನಹಳ್ಳಿ ಬಳಿ ಸೇರಿ ಇತರೆ ಸ್ಥಳಗಳಲ್ಲಿ 17 ಕಡೆ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.

ಶೌಚಾಲಯ ವ್ಯವಸ್ಥೆ: ಸದ್ಯ ಇರುವ ಶೌಚಾಲಯಗಳನ್ನು ದೇವಸ್ಥಾನ ಹತ್ತಿರ, ಆನೆಗೊಂದಿ, ದುರ್ಗಾದೇವಿ ಬೆಟ್ಟದ ಹತ್ತಿರ, ಪಂಪಾ ಸರೋವರ, ವೇದಪಾಠ, ಹನುಮನಹಳ್ಳಿ, ಶಾಲೆ ಹತ್ತಿರ ಸೇರಿದಂತೆ 60ಕ್ಕೂ ಹೆಚ್ಚು ತಾತ್ಕಾಲಿಕ ಶೌಚಾಲಯಗಳ ವ್ಯವಸ್ಥೆ ಕಲ್ಪಿಸಲಾಗಿದೆ.

ಕುಡಿಯುವ ನೀರಿನ ವ್ಯವಸ್ಥೆ: ವಿಸರ್ಜನೆಗೆ ಆಗಮಿಸುವ ಭಕ್ತರಿಗೆ ಶುದ್ಧ ಕುಡಿಯುವ ನೀರು ಪೂರೈಸಲು ಅಗತ್ಯ ಸಿದ್ದತೆ ಮಾಡಿಕೊಳ್ಳಲಾಗಿದೆ. ಇದರ ಭಾಗವಾಗಿ ವೇದಪಾಠ ಶಾಲೆಯ ಬಳಿ 430 ನಳ, ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತದೆ.

ಭಕ್ತರಿಗೆ ಪ್ರಸಾದ: ಹನುಮಮಾಲಾ ವಿಸರ್ಜನೆಯ ಹಿಂದಿನ ದಿನ ರಾತ್ರಿ ಭಕ್ತರಿಗೆ ಪಲಾವ್, ಟಮಾಟೆ ಚಟ್ನಿ, ಮಾಲೆ ವಿಸರ್ಜನೆ ದಿನ ಬೆಳಿಗ್ಗೆ ಅನ್ನ, ಸಾಂಬರ್, ಪಾಯಸದ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿದೆ.

ಮಾಲೆ ವಿಸರ್ಜನೆಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಭಕ್ತರಿಗೆ ತೊಂದರೆಯಾಗದಂತೆ ಸಮನ್ವಯದಿಂದ ಕೆಲಸ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಡಾ. ಸುರೇಶ ಇಟ್ನಾಳ, ಜಿಲ್ಲಾಧಿಕಾರಿ
ಪ್ರತಿಸಲಕ್ಕಿಂತಲೂ ಈ ಬಾರಿ ಹೆಚ್ಚು ಚಳಿಯಿರುವ ಕಾರಣ ಹನುಮಮಾಲೆ ಧರಿಸುವ ವ್ರತ ಮಾಡುವವರಿಗೆ ವಾತಾವರಣ ದೊಡ್ಡ ಸವಾಲಾಗಿದೆ
ಹನುಮಂತಪ್ಪ, ಮಾಲಾಧಾರಿ, ಗದಗ

ಮಾರ್ಗದುದ್ದಕ್ಕೂ ಸಂಭ್ರಮ, ಮೆರವಣಿಗೆ

ಕೊಪ್ಪಳ: ಹನುಮಮಾಲೆ ವಿಸರ್ಜನೆಗೆ ತೆರಳುವ ಮಾರ್ಗದುದ್ದಕ್ಕೂ ಮಾಲೆ ಧರಿಸುವವರ ಸಂಭ್ರಮ ಎಲ್ಲೆಡೆಯೂ ಕಂಡುಬರುತ್ತಿದೆ. ಜಿಲ್ಲೆ ಹಾಗೂ ನೆರೆಜಿಲ್ಲೆಗಳಿಂದ ಪಾದಯಾತ್ರೆಯ ಮೂಲಕ ತೆರಳುವವರು ಈಗಾಗಲೇ ಹಲವು ಕಡೆ ತಮ್ಮ ಯಾತ್ರೆ ಆರಂಭಿಸಿದ್ದಾರೆ.

ತಮ್ಮೂರಿನಿಂದ ನಿತ್ಯ ಒಂದಷ್ಟು ಕಿ.ಮೀ. ನಡೆದು ಅಲ್ಲಲ್ಲಿ ಉಳಿದುಕೊಂಡು ಮರುದಿನ ಮತ್ತೆ ನಡೆದು ಅಂಜನಾದ್ರಿ ತಲುಪುವ ಗುರಿ ಹೊಂದಿದ್ದಾರೆ. ಭಾನುವಾರ ಜಿಲ್ಲಾಕೇಂದ್ರದಲ್ಲಿ ರಥಯಾತ್ರೆಯ ಮೂಲಕ ಹನುಮಮಾಲಾಧಾರಿಗಳು ಮೆರವಣಿಗೆ ಮೂಲಕ ಸಾಗಿದರು. ವಾಹನಕ್ಕೆ ಕೇಸರಿ ಧ್ವಜ ಕಟ್ಟಿಕೊಂಡು  ಭಕ್ತಿಗೀತೆಗಳನ್ನು ಕೇಳಿಸಿಕೊಳ್ಳುತ್ತ ಭಜನೆ ಮಾಡುತ್ತ ಮಾಲಾಧಾರಿಗಳು ಸಾಗಿದರು. ನಗರದಲ್ಲಿ ರಸ್ತೆಯಲ್ಲಿ ಕರ್ಪೂರ ಹಚ್ಚಿದರು.

ಮಾಲೆ ವಿಸರ್ಜನೆ ದಿನ ಸಮೀಪಿಸುತ್ತಿದ್ದಂತೆ ಅಂಜನಾದ್ರಿಗೆ ತೆರಳುವ ಮಾರ್ಗದುದ್ದಕ್ಕೂ ಇರುವ ಗ್ರಾಮೀಣ ಪ್ರದೇಶಗಳಲ್ಲಿ ಜನ ಭಕ್ತರಿಗಾಗಿ ಊಟೋಪಚಾರದ ವ್ಯವಸ್ಥೆ ಮಾಡುತ್ತಾರೆ. ಅನೇಕ ಭಕ್ತರು ಮಾರ್ಗಮಧ್ಯದ ದೇವಸ್ಥಾನಗಳಲ್ಲಿ ಉಳಿದುಕೊಳ್ಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.