ADVERTISEMENT

ಹರ್ ಘರ್ ತಿರಂಗಾ: ಕೇಂದ್ರದ ಮನಗೆದ್ದ ತಾವರಗೇರಾದ ಈ ಮನೆ

ಹರ್ ಘರ್ ತಿರಂಗಾ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2023, 15:56 IST
Last Updated 14 ಆಗಸ್ಟ್ 2023, 15:56 IST
ತಾವರಗೇರಾದ ಶಕುಂತಲಾ ನಾಲ್ತವಾಡ ಕುಟುಂಬದ ಸದಸ್ಯರು ತ್ರಿವರ್ಣ ಧ್ವಜದ ಜೊತೆ ತೆಗೆಸಿಕೊಂಡ ಫೋಟೊ
ತಾವರಗೇರಾದ ಶಕುಂತಲಾ ನಾಲ್ತವಾಡ ಕುಟುಂಬದ ಸದಸ್ಯರು ತ್ರಿವರ್ಣ ಧ್ವಜದ ಜೊತೆ ತೆಗೆಸಿಕೊಂಡ ಫೋಟೊ   

ತಾವರಗೇರಾ (ಕೊಪ್ಪಳ ಜಿಲ್ಲೆ): ಹರ್ ಘರ್ ತಿರಂಗಾ ಅಭಿಯಾನದ ಸಂದೇಶ ಸಾರುವ ಭಾವಚಿತ್ರಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ತಾವರಗೇರಾದ ಮನೆಯೊಂದು ಆಯ್ಕೆಯಾಗಿದೆ.

ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಶಕುಂತಲಾ ಮಲ್ಲಪ್ಪ ನಾಲತ್ತವಾಡ ಎಂಬುವರು 2016–17ರಲ್ಲಿ ಮನೆ ನಿರ್ಮಿಸಿಕೊಂಡಿದ್ದರು. ಅವರು ತಮ್ಮ ಮನೆಯ ಮೇಲೆ ಆಜಾದಿಕಾ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ತ್ರಿವರ್ಣ ಧ್ವಜ ಹಾರಿಸಿದ್ದು, ರಾಜ್ಯಮಟ್ಟದಲ್ಲಿ ಹೋದ ವರ್ಷ ಪ್ರಥಮ ಸ್ಥಾನ ಪಡೆದಿತ್ತು. ಈಗ ರಾಷ್ಟ್ರೀಯ ಮಟ್ಟದಲ್ಲಿ ಕೇಂದ್ರದ ಗಮನ ಸೆಳೆದಿದೆ.

ಹರ್‌ ಘರ್‌ ತಿರಂಗಾ ಪ್ರಚಾರದ ಬಗ್ಗೆ ವಿವಿಧ ಮಾಧ್ಯಮಗಳಲ್ಲಿ ಪ್ರಕಟವಾದ ಕೇಂದ್ರ ಸರ್ಕಾರದ ಜಾಹೀರಾತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರದ ಜೊತೆಗೆ ಶಕುಂತಲಾ ಅವರ ಕುಟುಂಬದ ಸದಸ್ಯರ ಹಾಗೂ ಮನೆಯ ಫೋಟೊವನ್ನು ಪ್ರಕಟಿಸಲಾಗಿದೆ. ಅವರಿಗೆ ಪಟ್ಟಣ ಪಂಚಾಯಿತಿ ವತಿಯಿಂದ ಸನ್ಮಾನಿಸಲಾಯಿತು.

ADVERTISEMENT

‘ಸರ್ಕಾರದ ಯೋಜನೆ ಸದುಪಯೋಗ ಪಡೆದು ಉತ್ತಮ ಮನೆ ನಿರ್ಮಿಸಲಾಗಿದೆ. 2021–2022ರಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಲಭಿಸಿತ್ತು. ಈಗ ಪ್ರಧಾನಿ ಜೊತೆಗೆ ನಮ್ಮ ಕುಟುಂಬದ ಮತ್ತು ಮನೆಯ ಚಿತ್ರ ಭಾರತ ಸರ್ಕಾರದ ಹರ್ ಘರ್ ತಿರಂಗಾ ಸಂದೇಶ ಸಾರುವಲ್ಲಿ ಪ್ರದರ್ಶಿತವಾಗಿರುವುದು ಅಪಾರ ಹೆಮ್ಮೆ ಮೂಡಿಸಿದೆ. ಈ ಮನೆ ನಿರ್ಮಾಣಕ್ಕೆ ಪತಿ, ಅತ್ತೆ ಹಾಗೂ ಮಾವ ಸಹಕಾರ ನೀಡಿದ್ದಾರೆ’ ಎಂದರು.

‘ಹರ್ ಘರ್ ತಿರಂಗಾ ಸಂದೇಶ ಸಾರುವ ಭಾವಚಿತ್ರಕ್ಕೆ ತಾವರಗೇರಾದ ಮನೆ ಆಯ್ಕೆಯಾಗಿದ್ದು ಕೊಪ್ಪಳ ಜಿಲ್ಲೆಯ ಕೀರ್ತಿಯನ್ನು ಇಮ್ಮಡಿಸಿದೆ’ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಕಾವ್ಯಾರಾಣಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.