
ಕುಷ್ಟಗಿ: ‘ಭಾರತ ಮಾತೆಯನ್ನು ಪೂಜಿಸುವವರೆಲ್ಲರೂ ಹಿಂದೂಗಳೇ, ಸಮಾಜದಲ್ಲಿ ಮೇಲು ಕೀಳು, ಅಸ್ಪೃಶ್ಯತೆ, ತಾರತಮ್ಯ ನೀತಿ ತೊಲಗಿ ಎಲ್ಲರೂ ಒಂದೇ ಎನ್ನುವ ಸಾಮರಸ್ಯದ ಸ್ವಭಾವ ನಮ್ಮ ಮನದಲ್ಲಿ ಬಂದಾಗ ಮಾತ್ರ ಭಾರತದ ನಿಜವಾದ ಸೌಂದರ್ಯ ಇನ್ನಷ್ಟು ಹೆಚ್ಚಲು ಸಾಧ್ಯ’ ಎಂದು ಆರ್‌ಎಸ್‌ಎಸ್ ಉತ್ತರ ಪ್ರಾಂತ್ಯದ ಪ್ರಚಾರಕ ನರೇಂದ್ರ ಹೇಳಿದರು.
ಪಟ್ಟಣದಲ್ಲಿ ಬುಧವಾರ ವಾಸವಿ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಹಿಂದೂ ಜನಜಾಗೃತಿ ಸಮ್ಮೇಳನದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ‘ಬಸವಣ್ಣ ಹೇಳಿದಂತೆ ಇವನಾರವ ಇವನಾರವ ಎನ್ನದೇ ಎಲ್ಲರೂ ನಮ್ಮವರೇ ಎನ್ನುವ ಭಾವನೆ ನಮ್ಮ ದೈನಂದಿನ ನಡುವಳಿಕೆಯಲ್ಲಿ ಇರಬೇಕು. ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ದುರ್ಬಲರು, ತುಳಿತಕ್ಕೆ ಒಳಗಾದವರನ್ನೆಲ್ಲ ನಮ್ಮೊಂದಿಗೆ ಒಟ್ಟಿಗೆ ಕರೆದೊಯ್ಯುವುದು ಹಿಂದೂ ಸಮಾಜದ ಜವಾಬ್ದಾರಿಯಾಗಿದ್ದು ಇಂತ ಸಾಮರಸ್ಯದ ಬಗ್ಗೆ ಹಿಂದೂಗಳು ಚಿಂತನೆ ನಡೆಸುವ ಅಗತ್ಯವಿದೆ’ ಎಂದರು.
ಹಿಂದೂ ಎಂಬುದು ಕೇವಲ ಧಾರ್ಮಿಕ ವಿಧಿವಿಧಾನಗಳಿಗೆ ಸೀಮಿತವಾಗಿರದೆ ಅದೊಂದು ಜೀವನ ಶೈಲಿಯಾಗಿದೆ. ನಮ್ಮ ದೇಶದ ಶ್ರೇಷ್ಟ ವ್ಯಕ್ತಿಗಳ ಆದರ್ಶ ಬದುಕುವುದು ಹಿಂದುತ್ವ. ನಮ್ಮ ಪೂರ್ವಜರು, ಸಾಧು ಸಂತರು, ಸತ್ಪುರುಷರು ಬೆಳೆಸಿ ಉಳಿಸಿಹೋಗಿರುವ ಭಾರತೀಯ ಪರಂಪರೆ, ಸಂಸ್ಕೃತಿಯನ್ನು ಭವಿಷ್ಯದ ಪೀಳಿಗೆವರೆಗೂ ಕೊಂಡೊಯ್ಯಬೇಕಿದೆ. ನಮ್ಮಲ್ಲಿರುವ ಇಂಥ ದೋಷಗಳಿಂದಲೇ ಹಿಂದೆ ಆಂಗ್ಲರು ನಮ್ಮನ್ನು ಗುಲಾಮರಂತೆ ನಡೆಸಿಕೊಂಡರು. ಮುಂದೆಯೂ ಸಹ ಹಿಂದೂಗಳು ಒಂದಾಗದಿದ್ದರೆ ಮತ್ತು ನಮ್ಮತನ ಮರೆತರೆ ನಮ್ಮ ಸಂಸ್ಕೃತಿ, ಪರಂಪರೆಯ ಮೇಲೆ ಮತ್ತೆ ಆಕ್ರಮಣಕ್ಕೆ ಅವಕಾಶವಾಗುತ್ತದೆ ಎಂಬುದನ್ನು ಯೋಚಿಸಬೇಕು ಎಂದು ಹೇಳಿದರು.
ಭಾರತೀಯ ಕುಟುಂಬ ವ್ಯವಸ್ಥೆ ದುರ್ಬಲಗೊಳ್ಳುತ್ತಿದೆ, ಟೆಲಿವಿಷನ್, ಜಾಲತಾಣಗಳ ದಾರಾವಾಹಿಗಳು ಜನರ ದಾರಿ ತಪ್ಪಿಸುತ್ತಿವೆ, ಪರಿಸರದಲ್ಲಿ ಮಾಲಿನ್ಯ ಹೆಚ್ಚುತ್ತಿರುವುದು, ಭವಿಷ್ಯದ ಪೀಳಿಗೆಗೆ ಉಳಿಸಬೇಕಾದ ಜಲ ಪೋಲಾಗುತ್ತಿದ್ದರೂ ಕಾಳಜಿ ಇಲ್ಲ ಎಂಬುದಕ್ಕೆ ಬೇಸರ ವ್ಯಕ್ತಪಡಿಸಿದ ನರೇಂದ್ರ, ಜಗತ್ತು ಯೋಗ, ಓಂಕಾರ, ಸಸ್ಯಾಹಾರದ ಕಡೆಗೆ ವಾಲುತ್ತಿದ್ದರೆ ನಾವು ಮಾತ್ರ ಬೇಡವಾದ ವಿದೇಶಿ ಜೀವನ ಶೈಲಿಯತ್ತ ವಾಲುವುದು ಸರಿಯಲ್ಲ. ಇಂಥ ವಿಚಾರಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದೇ ಹಿಂದೂ ಸಮ್ಮೇಳನದ ಉದ್ದೇಶವಾಗಿದೆ ಎಂದರು.
ಮದ್ದಾನಿ ಹಿರೇಮಠದ ಕರಿಬಸವ ಸ್ವಾಮೀಜಿ, ವಿಜಯಪುರದ ಗುರುಶಾಂತವೀರ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿದರು. ಶಾಸಕ ದೊಡ್ಡನಗೌಡ ಪಾಟೀಲ, ಬಿಜೆಪಿ ಮುಖಂಡ ಡಾ.ಕೆ.ಬಸವರಾಜ ಸೇರಿದಂತೆ ಅನೇಕ ಪ್ರಮುಖರು, ಪಟ್ಟಣದ ವಿವಿಧ ಸಮುದಾಯಗಳ ಮುಖಂಡರು, ಯುವಕರು, ಮಹಿಳೆಯರು ಇದ್ದರು. ಈರಣ್ಣ ಸೊಬರದ ನಿರೂಪಿಸಿದರು.
ಗಮನಸೆಳೆದ ಶೋಭಾಯಾತ್ರೆ
ಶೋಭಾಯಾತ್ರೆಗೆ ಕರಿಬಸವ ಸ್ವಾಮೀಜಿ ಚಾಲನೆ ನೀಡಿದರು. ನಂತರ ಪ್ರಮುಖ ಬೀದಿಗಳಲ್ಲಿ ನಡೆದ ಶೋಭಾಯಾತ್ರೆಯಲ್ಲಿ ಚಂಡೆಮದ್ದಳೆ ಡೊಳ್ಳು ವಾದ್ಯಮೇಳ ಭಜನೆ ಲಂಬಾಣಿ ಸಮುದಾಯದ ಮಹಿಳೆಯರ ನೃತ್ಯ ಕೇಸರಿ ಧ್ವಜ ಹಿಡಿದ ಯುವಕರ ತಂಡ ವಿವಿಧ ಛದ್ಮವೇಷಧಾರಿ ಮಕ್ಕಳು ಎತ್ತಿನಗಾಡಿಗಳು ಸಹಿತ ಭಾರತ ಮಾತೆಯಭಾವಚಿತ್ರದ ಮೆರವಣಿಗೆ ಗಮನಸೆಳೆಯಿತು. ಶಾಸಕ ದೊಡ್ಡನಗೌಡ ಪಾಟೀಲ ಮತ್ತು ಬಿಜೆಪಿ ಮುಖಂಡ ಡಾ.ಕೆ.ಬಸವರಾಜ ಸ್ವತಃ ಡೊಳ್ಳು ಬಾರಿಸಿ ಗಮನಸೆಳೆದರು. ಶೋಭಾಯಾತ್ರೆಯುದ್ದಕ್ಕೂ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು.
ಭಾರತಮಾತೆ ನಮ್ಮೆಲ್ಲರ ತಾಯಿ ಎಂಬುದರ ಅರಿವಿಲ್ಲದ ಕಾರಣಕ್ಕೆ ನೆರೆ ರಾಜ್ಯಗಳ ಜನ ಜಗಳವಾಡುವಂತಾಗಿದೆ. ಸಹೋದರತ್ವ ಭಾವನೆ ಗಟ್ಟಿಯಾದರೆ ಇಂಥಲ ಸಮಸ್ಯೆಗಳಿಗೆ ಪರಿಹಾರ ಸಾಧ್ಯ–ನರೇಂದ್ರ, ಆರ್‌ಎಸ್‌ಎಸ್ ಪ್ರಚಾರಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.