ಅಳವಂಡಿ: ಇಲ್ಲಿನ ಮುದುಕನಗೌಡ ಗಾಳಿ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ಮಕ್ಕಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಇಲ್ಲೊಬ್ಬ ಮುಖ್ಯ ಶಿಕ್ಷಕ ₹1 ಲಕ್ಷ ರೂಪಾಯಿ ದೇಣಿಗೆ ನೀಡಲು ಮುಂದಾಗಿದ್ದಾರೆ.
ಕೊಪ್ಪಳ ತಾಲ್ಲೂಕಿನ ಅಳವಂಡಿ ಗ್ರಾಮದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಸುಮಾರು 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಇಲ್ಲಿನ ವಿದ್ಯಾರ್ಥಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿತ್ತು. ಶಾಲೆಯ ಮಕ್ಕಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿಸಬೇಕು ಎಂಬ ಉದ್ದೇಶದಿಂದ ಈ ಶಾಲೆಗೆ ನೂತನವಾಗಿ ಮುಖ್ಯಶಿಕ್ಷಕರಾಗಿ ಬಡ್ತಿ ಹೊಂದಿದ ಯಲ್ಲಪ್ಪ ಬಂಡಿ ಅವರು ತಮ್ಮ ತಂದೆಯ ಸ್ಮರಣಾರ್ಥ ಸುಮಾರು ₹1 ಲಕ್ಷ ವೆಚ್ಚದಲ್ಲಿ ಕುಡಿಯುವ ನೀರಿನ ನೀರಿನ ವ್ಯವಸ್ಥೆ ಮಾಡಲು ಮುಂದಾಗುವ ಮೂಲಕ ಶಿಕ್ಷಕರ ವರ್ಗಕ್ಕೆ ಮಾದರಿಯಾಗಿದ್ದಾರೆ.
ಯಲ್ಲಪ್ಪ ಬಂಡಿ ಅವರು ಕೊಪ್ಪಳ ತಾಲ್ಲೂಕಿನ ನೀರಲಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಆಂಗ್ಲ ಭಾಷೆಯ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಕೆಲ ದಿನಗಳ ಹಿಂದೆ ಮುಖ್ಯಶಿಕ್ಷಕರಾಗಿ ಬಡ್ತಿ ಹೊಂದಿ, ಅಳವಂಡಿಯ ಸರ್ಕಾರಿ ಪ್ರೌಢಶಾಲೆಯನ್ನು ಆಯ್ಕೆ ಮಾಡಿಕೊಂಡು ಶುಕ್ರವಾರ ಮುಖ್ಯ ಶಿಕ್ಷಕರಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ಶಾಲೆಯಲ್ಲಿ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡುವ ವೇಳೆ ಈ ಘೋಷಣೆ ಮಾಡುವ ಮಾಡುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರ ಜೊತೆಗೆ ಮಕ್ಕಳ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ದೇಣಿಗೆ ನೀಡಲು ಮುಂದಾಗಿದ್ದು ಎಲ್ಲ ಕಡೆ ಉತ್ತಮ ಪ್ರಶಂಸೆ ವ್ಯಕ್ತವಾಗಿದೆ.
ಸರ್ಕಾರಿ ಶಾಲೆಯ ಮಕ್ಕಳಿಗೆ ಕುಡಿಯುವ ನೀರಿನ ದಾಹ ನೀಗಿಸಲು ಶಾಲೆಯ ಮುಖ್ಯ ಶಿಕ್ಷಕ ಯಲ್ಲಪ್ಪ ಬಂಡಿ ಅವರು ನೀರಿನ ವ್ಯವಸ್ಥೆ ಕಲ್ಪಿಸಲು ಅದರ ವೆಚ್ಚವನ್ನು ಭರಿಸಲು ಮುಂದಾಗಿದ್ದು ಉತ್ತಮ ಕಾರ್ಯವಾಗಿದೆಗುರು ಬಸವರಾಜ ಹಳ್ಳಿಕೇರಿ ಗ್ರಾ.ಪಂ ಸದಸ್ಯ ಅಳವಂಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.