ADVERTISEMENT

ಕೊಪ್ಪಳ: ಆರೋಗ್ಯ ಕೇಂದ್ರದ ಕಟ್ಟಡಕ್ಕಿಲ್ಲ ಉದ್ಘಾಟನಾ ಭಾಗ್ಯ

ಚಿಕ್ಕ ಕೊಠಡಿಯಲ್ಲಿ ಆಸ್ಪತ್ರೆ: ಚಿಕಿತ್ಸೆಗಾಗಿ ದೂರದ ನಗರಗಳಿಗೆ ತೆರಳುವ ಜನ

​ಪ್ರಜಾವಾಣಿ ವಾರ್ತೆ
Published 12 ಜನವರಿ 2022, 6:06 IST
Last Updated 12 ಜನವರಿ 2022, 6:06 IST
ಕನಕಗಿರಿ ಸಮೀಪದ ನವಲಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಉದ್ಘಾಟನೆಗೊಂಡಿಲ್ಲ
ಕನಕಗಿರಿ ಸಮೀಪದ ನವಲಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಉದ್ಘಾಟನೆಗೊಂಡಿಲ್ಲ   

ಕನಕಗಿರಿ: ‘ಸಮೀಪದ ನವಲಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡ ನಿರ್ಮಾಣಗೊಂಡು ಹಲವು ತಿಂಗಳು ಗತಿಸಿದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಉದ್ಘಾಟನೆ ನನೆಗುದಿಗೆ ಬಿದ್ದಿದೆ’ ಎಂದು ಗ್ರಾಮಸ್ಥರು ದೂರಿದ್ದಾರೆ.

‘2017-18ನೇ ಸಾಲಿನ ವಿಶೇಷ ಅಭಿವೃದ್ಧಿ ಯೋಜನೆಯ ₹2.50 ಕೋಟಿ ಮೊತ್ತದಲ್ಲಿ ಸುಸಜ್ಜಿತ ಆಸ್ಪತ್ರೆ, ವೈದ್ಯರು, ಸಿಬ್ಬಂದಿಗಳಿಗೆ ಬಹು ಮಹಡಿ ವಸತಿ ಗೃಹ, ನಿರ್ಮಿಸಿದ್ದರೂ ಉದ್ಘಾಟನೆಗೊಂಡಿಲ್ಲ. ಕಾಮಗಾರಿ ಮುಗಿದು ಎಂಟು ತಿಂಗಳು ಗತಿಸಿದರೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಕುರಿತು ನಿರ್ಲಕ್ಷ್ಯ ತಾಳಿದೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ನಾಗರಾಜ ನಾಯಕ ದೂರಿದರು.

ಸದ್ಯ ಆರೋಗ್ಯ ಇಲಾಖೆಗೆ ಸೇರಿದ ಚಿಕ್ಕ ಕೊಠಡಿಯಲ್ಲಿ ಆಸ್ಪತ್ರೆ ನಡೆಸಿಕೊಂಡು ಹೋಗಲಾಗುತ್ತಿದ್ದು, ಚಿಕಿತ್ಸೆಗೆ ಬರುವ ರೋಗಿಗಳಿಗೆ ಸಮಸ್ಯೆಯಾಗಿದೆ ಎಂದು ಅವರು ತಿಳಿಸಿದರು. ನವಲಿ, ಜೀರಾಳ, ಕರಡೋಣ, ಚಿಕ್ಕ ಡಂಕನಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಟ್ಟು 28 ಗ್ರಾಮಗಳ ಜನರು ಚಿಕಿತ್ಸೆಗಾಗಿ ಈ ಆಸ್ಪತ್ರೆಯನ್ನು ನೆಚ್ಚಿಕೊಂಡಿದ್ದು ಹೆರಿಗೆ, ಅಪಘಾತ, ವಿಷ ಸೇವನೆ ಸೇರಿದಂತೆ ಇತರೆ ತುರ್ತು ಚಿಕಿತ್ಸೆಗೆ ಸೂಕ್ತ ಸ್ಥಳ ಇಲ್ಲದ ಪರಿಣಾಮ ಇನ್ನಿಲ್ಲದ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ನಾಯಕ ತಿಳಿಸಿದರು.

ADVERTISEMENT

ಕನಕಗಿರಿ ತಾಲ್ಲೂಕು ಆರೋಗ್ಯ ಅಧಿಕಾರಿಯಾಗಿ ಕೆಲಸ ಮಾಡುತ್ತಿರುವ ಡಾ.ಟಿ.ರಾಘವೇಂದ್ರ ಅವರು ಈ ಆಸ್ಪತ್ರೆಯ ವೈದ್ಯರಾಗಿದ್ದು, ನಿಯೋಜನೆ ಮೇಲೆ ಕೆಲಸ ಮಾಡುತ್ತಿರುವ ಕಾರಣ ವೈದ್ಯರ ಕೊರತೆ ಸಹ ಕಾಡುತ್ತಿದೆ. ಗ್ರಾಮದಲ್ಲಿ ಸೂಕ್ತ ಚಿಕಿತ್ಸೆ ಸಿಗದ ಹಿನ್ನೆಲೆಯಲ್ಲಿ ಕನಕಗಿರಿ, ಗಂಗಾವತಿ, ಕಾರಟಗಿ, ಸಿಂಧನೂರು ಸೇರಿದಂತೆ ದೂರದ ನಗರ ಪ್ರದೇಶದ ಕಡೆಗೆ ಜನರು ಸಾಲ ಮಾಡಿಕೊಂಡು ಚಿಕಿತ್ಸೆಗೆ ತೆರಳುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದರು. ತ್ವರಿತವಾಗಿ ಕಟ್ಟಡ ಉದ್ಘಾಟನೆಗೊಳಿಸಿ ವೈದ್ಯರು, ಸಿಬ್ಬಂದಿ ಹಾಗೂ ಸಮರ್ಪಕವಾಗಿ ಔಷಧಿಗಳನ್ನು ಪೊರೈಕೆ ಮಾಡಬೇಕು ಅವರು ಒತ್ತಾಯಿಸಿದರು. ವಿಳಂಬ ಮಾಡಿದರೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.