ADVERTISEMENT

ಕೊಪ್ಪಳ: ಆರೋಗ್ಯದ ಬದುಕಿಗೆ ಆರು ಸೂತ್ರಗಳ ‘ಚಿಕಿತ್ಸೆ’

ಭಕ್ತ ಹಿತಚಿಂತನಾ ಸಭೆ, ಸಾವಿರಾರು ಭಕ್ತರ ಸಮ್ಮುಖದಲ್ಲಿ ಡಾಕ್ಟರ್‌ ನೀಡಿದ ಸಲಹೆ

ಪ್ರಮೋದ ಕುಲಕರ್ಣಿ
Published 7 ಜನವರಿ 2026, 6:39 IST
Last Updated 7 ಜನವರಿ 2026, 6:39 IST
ಕೊಪ್ಪಳದ ಗವಿಮಠದ ಜಾತ್ರೆಯಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ವೈದ್ಯೆ ವಿಜಯಲಕ್ಷ್ಮಿ ಬಾಳೇಕುಂದ್ರಿ ಮಾತನಾಡಿದರು 
ಕೊಪ್ಪಳದ ಗವಿಮಠದ ಜಾತ್ರೆಯಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ವೈದ್ಯೆ ವಿಜಯಲಕ್ಷ್ಮಿ ಬಾಳೇಕುಂದ್ರಿ ಮಾತನಾಡಿದರು    

ಕೊಪ್ಪಳ: ಗವಿಮಠದ ಜಾತ್ರೆಯ ಅಂಗವಾಗಿ ಕೈಲಾಸ ಮಂಟಪದಲ್ಲಿ ಮಂಗಳವಾರ ರಾತ್ರಿ ನಡೆದ ಭಕ್ತಿ ಹಿತಚಿಂತನ ಕಾರ್ಯಕ್ರಮದಲ್ಲಿ ವೈದ್ಯೆ ವಿಜಯಲಕ್ಷ್ಮಿ ಈಶ್ವರಪ್ಪ ಬಾಳೇಕುಂದ್ರಿ ಅವರು ಆರೋಗ್ಯಕರ ಬದುಕಿಗೆ ಆರು ಸೂತ್ರಗಳ ‘ಚಿಕಿತ್ಸೆ’ ನೀಡಿದರು.

ಬದುಕಿನ ದೀವಟಿಗೆ ಯಾವಾಗ ಆರುತ್ತದೆ ಎನ್ನುವುದು ಯಾರಿಗೂ ಗೊತ್ತಿಲ್ಲ. ಅನಿಶ್ಚಿತವಾದ ಬದುಕಿನಲ್ಲಿ ಗವಿಮಠದ ಸ್ವಾಮೀಜಿ ಮಾನವನಿಂದ ಮಹಾದೇವ ಆಗಿದ್ದಾರೆ. ಅವರಂತೆಯೇ ನಾವೆಲ್ಲರೂ ಆಗಬೇಕಾಗಿದೆ ಎಂದ ಅವರು ‘ಕಾಮ, ಕ್ರೋಧ, ಮೋಹ, ಲೋಭ, ಮದ, ಮತ್ಸರ ಈ ಆರು ಸೂತ್ರಗಳನ್ನು ಚೆನ್ನಾಗಿ ನಿರ್ವಹಿಸಿದರೆ ಆರೋಗ್ಯ ಚೆನ್ನಾಗಿರುತ್ತದೆ’ ಎಂದರು. 

‘ಹೃದಯವಂತಿಕೆ ಇಲ್ಲದವರು ಇದ್ದರೂ ಇಲ್ಲದಂತೆ’ ಎಂದ ಹೃದ್ರೋಗ ತಜ್ಞೆ ವಿಜಯಲಕ್ಷ್ಮಿ ‘ಗವಿಮಠದ ಜಾತ್ರೆಗೆ ಬಂದರೆ ಹೃದಯವಂತರಾಗುತ್ತೀರಿ. ನಿತ್ಯ ಪಾತ್ರೆಯನ್ನು ತೊಳೆಯುವಂತೆ ನಿತ್ಯ ಮನಸ್ಸನ್ನು ಕೂಡ ತೊಳೆಯಬೇಕು. ಬೆಳಿಗ್ಗೆ ಎದ್ದು ಹೊಸ ವಿಚಾರಗಳನ್ನು ತಿಳಿದುಕೊಳ್ಳಬೇಕು. ನಡೆ, ನುಡಿ ಯಾವಾಗಲೂ ಶುಚಿಯಾಗಿರಬೇಕು, ಭಕ್ತಿಸಾಗರದಲ್ಲಿ ಭವದಿಂದ ಮುಕ್ತಿಸಿಗಲಿ. ಭಕ್ತಿ, ಶಕ್ತಿ, ಮುಕ್ತಿಯ ಮಹಾಸಂಗಮ ಇಲ್ಲಿ ಮಿಳಿತವಾಗಿದೆ’ ಎಂದು ಬಣ್ಣಿಸಿದರು.

ADVERTISEMENT

ಹೆಬ್ಬಳ್ಳಿಯ ದತ್ತಾವಧೂತ ಗುರುಗಳು ಮಾತನಾಡಿ ‘ಕಾರ್ಯಕ್ರಮಗಳು ಹಾಗೂ ಉತ್ಸವಗಳಿಂದ ಮನುಷ್ಯನಲ್ಲಿ ಅಪಾರ ಬದಲಾವಣೆಯಾಗುತ್ತದೆ. ಅಂತರಂಗದಲ್ಲಿ ಬದಲಾವಣೆ ಆಗದ ಹೊರತು ಜೀವನ ಕೂಡ ಬದಲಾವಣೆ ಆಗುವುದಿಲ್ಲ. ಪರಿಸ್ಥಿತಿ ಹಾಗೂ ಮನ‌ಸ್ಥಿತಿಯ ನಡುವೆ ಜೀವನದ ಯುದ್ಧ ನಡೆಯುತ್ತಿದೆ. ಇಂಥ ಸಂಕೀರ್ಣದ ಪರಿಸ್ಥಿತಿಯಲ್ಲಿ ಸದ್ಗುರುಗಳಿಗೆ ಶರಣಾದರೆ ಶಾಂತಿ, ಸಮಾಧಾನ ಲಭಿಸುತ್ತದೆ’ ಎಂದು ಹೇಳಿದರು. ಗವಿಮಠದ ಮಣ್ಣಿನ ಕಣಕಣದಲ್ಲಿಯೂ ಅಧ್ಯಾತ್ಮವಿದೆ ಎಂದರು.

ಇದಕ್ಕೂ ಮೊದಲು ಮನೆಯ ಚಾವಣಿಯಲ್ಲಿ ತೋಟಗಾರಿಕಾ ಕೃಷಿ ಮಾಡಿ ಮಾದರಿಯಾದ ಕೇರಳದ ಕೊಲ್ಲಂನ ರಮಾಭಾಯಿ ಹಾಗೂ ಇತರ ಸಾಧಕರನ್ನು ಸನ್ಮಾನಿಸಲಾಯಿತು. ವಿರೂಪಾಕ್ಷ ಸ್ವಾಮೀಜಿ, ಸಿದ್ದೇಶ್ವರ ಸ್ವಾಮೀಜಿ, ಉಪ್ಪಿನಬೆಟಗೇರಿಯ ಕುಮಾರ ವಿರೂಪಾಕ್ಷ ಸ್ವಾಮೀಜಿ, ಬೂದುಗುಂಪಾದ ಕೊಟ್ಟೂರುಸ್ವಾಮಿ ಶಾಖಾಮಠದ ಸಿದ್ದೇಶ್ವರ ಸ್ವಾಮೀಜಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜನ
ಮನುಷ್ಯನ ಆಲಸ್ಯತನವೇ ಆತನ ದೊಡ್ಡ ವೈರಿ. ದುಡಿಯದೇ ಶ್ರೀಮಂತರಾಗಬೇಕು ಎನ್ನುವ ಮನೋಭಾವನೆ ಬೆಳೆಯುತ್ತಿದೆ. ಇದ್ದಾಗ ದುಡಿಯದೇ ಇದ್ದರೆ ಮನುಷ್ಯ ಸತ್ತಾಗಲೂ ಭಾರವಾಗುತ್ತಾನೆ.
ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಗವಿಮಠ
ಮನುಷ್ಯ ಪಕ್ಷಿಯ ಹಾಗೆ ಆಕಾಶದಲ್ಲಿ ಹಾರಾಡುವುದನ್ನು ಕಲಿತಿದ್ದಾನೆ. ಮೀನಿನಂತೆ ನೀರಿನಲ್ಲಿ ಈಜಾಡುವುದನ್ನು ಕಲಿತಿದ್ದಾನೆ. ಆದರೆ ಮನುಷ್ಯನಾಗಿ ಬದುಕುವುದನ್ನು ಮರೆತಿದ್ದಾನೆ.
ಸಿದ್ದೇಶ್ವರ ಸ್ವಾಮೀಜಿ ಬೂದುಗುಂಪಾದ ಕೊಟ್ಟೂರುಸ್ವಾಮಿ ಶಾಖಾಮಠ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.