ADVERTISEMENT

ಕುಕನೂರು: ಸುಡು ಬಿಸಿಲಿಗೆ ಹೈರಾಣಾದ ಜನ

ಹಗಲು ಬಿಸಿಲು; ರಾತ್ರಿ ಧಗೆ; ವಿದ್ಯುತ್‌ ವ್ಯತ್ಯಯದಿಂದ ಇನ್ನಷ್ಟು ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2022, 4:15 IST
Last Updated 7 ಏಪ್ರಿಲ್ 2022, 4:15 IST
ಕುಕನೂರಿನ ಅಂಬೇಡ್ಕರ್ ವೃತ್ತದಲ್ಲಿ ಧಗೆಯಿಂದ ಹಣ್ಣಿನ ಜ್ಯೂಸ್ ಸೇವಿಸುತ್ತಿರುವ ಜನ
ಕುಕನೂರಿನ ಅಂಬೇಡ್ಕರ್ ವೃತ್ತದಲ್ಲಿ ಧಗೆಯಿಂದ ಹಣ್ಣಿನ ಜ್ಯೂಸ್ ಸೇವಿಸುತ್ತಿರುವ ಜನ   

ಕುಕನೂರು: ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬಿಸಿಲಿನ ಬೇಗೆ ಯಿಂದ ತಾಲ್ಲೂಕಿನಾದ್ಯಂತ ಜನತೆ ಬಸವಳಿದಿದ್ದಾರೆ. ಹಗಲು ಸೂರ್ಯನ ನೇರ ಕಿರಣಗಳ ತಾಪವಾದರೆ, ರಾತ್ರಿ ಅವನು ಬಿಟ್ಟು ಹೋದ ಧಗೆ ಕಾಡುತ್ತಲೇ ಇದೆ.

ಕಳೆದ ಹತ್ತು ದಿನಗಳಿಂದ ತಾಪಮಾನವು 37 ಡಿಗ್ರಿ ಆಸು ಪಾಸಿನಲ್ಲಿ ಇದೆ. ಕನಿಷ್ಠ ಉಷ್ಣಾಂಶವೂ 22 ರಿಂದ 25 ಡಿಗ್ರಿ ಸೆಲ್ಸಿಯೆಸ್‌ವರೆಗೂ ಇದೆ

ಆಗಾಗ ಕೈಕೊಡುವ ವಿದ್ಯುತ್‌: ಬಿಸಿಲಿನ ಬೇಗೆಯ ತಾಪವನ್ನು ಹವಾ ನಿಯಂತ್ರಿತ ಕೊಠಡಿ, ಫ್ಯಾನ್‌, ಏರ್‌ ಕೂಲರ್‌ ಮೂಲಕ ಸ್ವಲ್ಪ ಮಟ್ಟಿಗೆ ನೀಗಿಸಿಕೊಳ್ಳೋಣ ಎಂದರೆ ಆಗಾಗ ವಿದ್ಯುತ್‌ ಕೈಕೊಡುತ್ತಲೇ ಇರುತ್ತದೆ

ADVERTISEMENT

ಬೆಳಿಗ್ಗೆಯಿಂದ ಸಂಜೆಯವರೆಗೆ ಆಗಾಗ ವಿದ್ಯುತ್‌ ಕಡಿತ ಆಗುತ್ತಲೇ ಇರುತ್ತದೆ. ಜತೆಗೆ ನಿರ್ವಹಣೆಯ ನೆಪದಲ್ಲಿಯೂ ಬೆಳಿಗ್ಗೆಯಿಂದ ಸಂಜೆ ಯವರೆಗೆ ವಿದ್ಯುತ್‌ ಕಡಿತ ಮಾಡಲಾಗುತ್ತದೆ. ದಿನದ 24 ಗಂಟೆಯೂ ಫ್ಯಾನ್‌ ಬೇಕು ಎನ್ನುವಂತಹ ಸ್ಥಿತಿ ಇದೆ.ವಿದ್ಯುತ್‌ ಕಡಿತಗೊಂಡರೆ ಸೆಕೆಯಿಂದಾಗಿ ಮನೆ, ಕಚೇರಿಗಳಲ್ಲಿ ಕುಳಿತು ಕೊಳ್ಳಲು ಆಗದಂತಹ ಸ್ಥಿತಿ ನಿರ್ಮಾಣವಾಗುತ್ತದೆ.

ರಸ್ತೆಯಲ್ಲಿ ಸಂಚಾರ ವಿರಳ: ಬೆಳಿಗ್ಗೆ 11 ರಿಂದ ಸಂಜೆ 4ರ ವರೆಗೆ ಪಟ್ಟಣದ ಪ್ರಮುಖ ರಸ್ತೆಗಳೂ ಜನ ಸಂಚಾರವಿಲ್ಲದೇ ಬಿಕೋ ಎನ್ನುತ್ತಿರುತ್ತವೆ. ಬಿಸಿಲಿನ ತಾಪಕ್ಕೆ ಬೆದರಿ ಸಾಕಷ್ಟು ಮಂದಿ ಮಧ್ಯಾಹ್ನದ ಹೊತ್ತು ಮಹಿಳೆಯರು, ಮಕ್ಕಳು ಸೇರಿ ಬಹುತೇಕರು ಬಜಾರಕ್ಕೆ ಬರುತ್ತಿಲ್ಲ.

ಬಿಸಿಲಿನ ಪರಿಣಾಮವಾಗಿ ಮಧ್ಯಾಹ್ನದ ಹೊತ್ತು ವ್ಯಾಪಾರ ಕುಸಿದಿದೆ. ಕೆಲವು ವ್ಯಾಪಾರಸ್ಥರು ಅಂಗಡಿಗಳನ್ನು ಮಧ್ಯಾಹ್ನದ ವೇಳೆ ಬಂದ್ ಮಾಡಿಕೊಂಡು ಹೋಗುತ್ತಿದ್ದಾರೆ. ಕೆಲವರು ಬಿಸಿಲಿನ ಧಗೆ ತಾಳದೇ ಮಧ್ಯಾಹ್ನದ ವೇಳೆ ಕೆರೆ, ಬಾವಿಗಳಿಗೆ ಈಜಲು ಹೋಗುತ್ತಾರೆ.

ಬಿಸಿಲಿನಿಂದ ಉಂಟಾಗುತ್ತಿರುವ ಧಗೆ ಹಾಗೂ ದಾಹವನ್ನು ತಣಿಸಿಕೊಳ್ಳಲು ಜನರು ತಂಪು ಪಾನೀಯ ಹಾಗೂ ಹಣ್ಣುಗಳ ಮೊರೆ ಹೋಗುತ್ತಿರುವುದರಿಂದ ಆ ಅಂಗಡಿಗಳವರಿಗೆ ಭರ್ಜರಿಯಾಗಿ ವ್ಯಾಪಾರ ಆಗುತ್ತಿದೆ.

ರಸ್ತೆಗೊಂದರಂತೆ ಅಲ್ಲಲ್ಲಿ ಎಳನೀರು ಮಾರಾಟವನ್ನು ಕಾಣಬಹುದು. ಈಗ ಹತ್ತಾರು ಕಡೆ ಕಲ್ಲಂಗಡಿ, ಕರಬೂಜ ಹಣ್ಣುಗಳನ್ನು ರಾಶಿ, ರಾಶಿ ಹಾಕಿಕೊಂಡು ಮಾರಾಟ ಮಾಡಲಾಗುತ್ತಿವೆ. ಕಲ್ಲಂಗಡಿ ವ್ಯಾಪಾರ ಭರ್ಜರಿಯಾಗಿದೆ. ವಿವಿಧ ಹಣ್ಣಿನ ಜ್ಯೂಸ್‌ಗಳಿಗೂ ಬೇಡಿಕೆ ಹೆಚ್ಚಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.