ADVERTISEMENT

ಕೊಪ್ಪಳ: ಹೈಟೆಕ್‌ ರೈಲು ನಿಲ್ದಾಣ ನಾಳೆ ಲೋಕಾರ್ಪಣೆ

ಅಮೃತ ಭಾರತ್‌ ಯೋಜನೆಯಡಿ ಮೇಲ್ದರ್ಜೆಗೇರಿದ ಮುನಿರಾಬಾದ್‌ ನಿಲ್ದಾಣದಲ್ಲಿ ಹೊಸ ಕಳೆ

ಪ್ರಮೋದ ಕುಲಕರ್ಣಿ
Published 21 ಮೇ 2025, 5:24 IST
Last Updated 21 ಮೇ 2025, 5:24 IST
ಕೊಪ್ಪಳ ತಾಲ್ಲೂಕಿನ ಹುಲಿಗಿಯಲ್ಲಿ ಮುನಿರಾಬಾದ್‌ ರೈಲು ನಿಲ್ದಾಣದ ನವೀಕೃತ ಕಟ್ಟಡದ ನೋಟ
ಕೊಪ್ಪಳ ತಾಲ್ಲೂಕಿನ ಹುಲಿಗಿಯಲ್ಲಿ ಮುನಿರಾಬಾದ್‌ ರೈಲು ನಿಲ್ದಾಣದ ನವೀಕೃತ ಕಟ್ಟಡದ ನೋಟ   

ಕೊಪ್ಪಳ: ಬ್ರಿಟಿಷರ ಆಳ್ವಿಕೆಯ ಕಾಲದಿಂದಲೂ ಜಿಲ್ಲೆಯ ಜೊತೆಗೆ ರೈಲು ಸೌಲಭ್ಯದ ನಂಟು ಹೊಂದಲು ಕಾರಣವಾಗಿರುವ ತಾಲ್ಲೂಕಿನ ಹುಲಿಗಿಯಲ್ಲಿರುವ ಮುನಿರಾಬಾದ್‌ ರೈಲು ನಿಲ್ದಾಣವನ್ನು ಕೇಂದ್ರ ಸರ್ಕಾರದ ಅಮೃತ್‌ ಭಾರತ್‌ ಯೋಜನೆಯಡಿ ನವೀಕರಣ ಮಾಡಲಾಗಿದ್ದು ಗುರುವಾರ (ಮೇ 22) ಉದ್ಘಾಟನೆಯಾಗಲಿದೆ.

ಈ ಯೋಜನೆಯಡಿ ಕೊಪ್ಪಳ ಮತ್ತು ಮುನಿರಾಬಾದ್‌ ರೈಲು ನಿಲ್ದಾಣಗಳನ್ನು ಮೇಲ್ದರ್ಜೆಗೆ ಏರಿಸಲಾಗಿದೆ. ₹18.40 ಕೋಟಿ ವೆಚ್ಚದಲ್ಲಿ ಮೊದಲ ಹಂತದಲ್ಲಿ ಕಾಮಗಾರಿ ಪೂರ್ಣಗೊಂಡ ಮುನಿರಾಬಾದ್ ನಿಲ್ದಾಣವನ್ನು ಮಾತ್ರ ಈಗ ಪ್ರಧಾನಿ ನರೇಂದ್ರ ಮೋದಿ ವರ್ಚುವಲ್‌ ಮೂಲಕ ಲೋಕಾರ್ಪಣೆ ಮಾಡಲಿದ್ದಾರೆ. ಕಾಮಗಾರಿ ಪ್ರಗತಿಯಲ್ಲಿರುವ ಕೊಪ್ಪಳದ ನಿಲ್ದಾಣದ ಕಟ್ಟಡ ಎರಡನೇ ಹಂತದಲ್ಲಿ ಉದ್ಘಾಟನೆಯಾಗಲಿದೆ.

ಹಿಂದಿನ ಎರಡು ಅವಧಿಗೆ ಸಂಸದರಾಗಿದ್ದ ಸಂಗಣ್ಣ ಕರಡಿ ಅವರು ಐತಿಹಾಸಿಕ ನಿಲ್ದಾಣವನ್ನು ‘ಅಮೃತ ಭಾರತ್‌’ ಯೋಜನೆಯಡಿ ಸೇರಿಸಲು ಶ್ರಮಿಸಿದ್ದರು. ಈಗ ಸಂಸದರಾಗಿರುವ ರಾಜಶೇಖರ ಹಿಟ್ನಾಳ ಅವರ ಅವಧಿಯಲ್ಲಿ ನವೀಕೃತ ಕಟ್ಟಡ ಲೋಕಾರ್ಪಣೆಯಾಗುತ್ತಿದೆ.  

ADVERTISEMENT

ಬ್ರಿಟಿಷರ ಆಳ್ವಿಕೆಯ ಅವಧಿಯಲ್ಲಿ ಮುಂಬೈ ಪ್ರಾಂತ್ಯದ ಬಳ್ಳಾರಿ ಮತ್ತು ಮದ್ರಾಸ್ ಪ್ರಾಂತ್ಯದ ಗದಗ ತನಕ ಮಾತ್ರ ರೈಲು ಸಂಪರ್ಕವಿತ್ತು. ಗದಗದಿಂದ ಬಳ್ಳಾರಿಗೆ ಸಂಪರ್ಕಿಸುವ ರೈಲಿನ ವ್ಯವಸ್ಥೆ ಇರಲಿಲ್ಲ. ಆಗ ಮುಖ್ಯವಾಗಿ ಸರಕು ಸಾಗಾಣಿಕೆಗೆ ತೊಂದರೆಯಾಗಿತ್ತು. ಮುಂಬೈ ಪ್ರಾಂತ್ಯದಿಂದ ಮದ್ರಾಸ್ ಪ್ರಾಂತ್ಯಕ್ಕೆ ಮತ್ತು ಮದ್ರಾಸ್ ಪ್ರಾಂತ್ಯದಿಂದ ಮುಂಬೈ ಪ್ರಾಂತ್ಯಕ್ಕೆ ಸರಕು ಸಾಗಾಣಿಕೆಯ ವ್ಯವಸ್ಥೆ ಅಗತ್ಯವಾಗಿತ್ತು. ಹೀಗಾಗಿ ಗದಗ ಮತ್ತು ಬಳ್ಳಾರಿಯ ಮಧ್ಯೆ ರೈಲು ಸಂಪರ್ಕ ಕಲ್ಪಿಸಲು ಈ ನಿಲ್ದಾಣ ಪ್ರಮುಖ ವೇದಿಕೆಯಾಯಿತು ಎಂದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.

ಸಾಲರಜಂಗ್‍ನ ಅವಧಿಯಲ್ಲಿ ಕೊಪ್ಪಳ ತಾಲ್ಲೂಕು ಅಧಿಕಾರಿಯಾಗಿದ್ದ ನರಸಿಂಗರಾಯರ ಆಡಳಿತದ ಸಮಯದಲ್ಲಿ (ಸುಮಾರು 1860ರಿಂದ 1870) ಗದಗದಿಂದ ಬಳ್ಳಾರಿಗೆ ರೈಲು ಸಂಪರ್ಕ ಕಲ್ಪಿಸುವ ಮಾರ್ಗ ನಿರ್ಮಿಸಲಾಯಿತು ಎಂದು ಇತಿಹಾಸ ಸಂಶೋಧಕರು ಹೇಳುತ್ತಾರೆ.

ಹೈಟೆಲ್‌ ಸ್ಪರ್ಶ: ನೆಲಮಹಡಿ ಹಾಗೂ ಮೇಲ್ಮಹಡಿ ಹೊಂದಿರುವ ನಿಲ್ದಾಣದಲ್ಲಿ ಮೊದಲ ಮತ್ತು ಎರಡನೇ ಪ್ಲಾಟ್‌ ಫಾರ್ಮ್‌ಗೆ ಸಂಪರ್ಕ ಕಲ್ಪಿಸಲು 12 ಮೀಟರ್‌ ಅಗಲದ ಮೇಲ್ಸೇತುವೆ, ನವೀಕೃತ ಟಿಕೆಟ್‌ ಕೌಂಟರ್‌, ಪ್ರಯಾಣಿಕರು ಕಾಯುವ ಕೋಣೆ, ಹವಾನಿಯಂತ್ರಿತ ಕೊಠಡಿ, ರೆಸ್ಟೋರೆಂಟ್‌, ನಿಲ್ದಾಣದ ವ್ಯವಸ್ಥಾಪಕರಿಗೆ ಸುಸಜ್ಜಿತ ಕೊಠಡಿ, ರೈಲಿನ ಕೋಚ್‌ಗಳ ಕುರಿತು ತಿಳಿಸಲು ಮಾಹಿತಿ ಫಲಕ, ಅಂಗವಿಕಲರಿಗಾಗಿ ಪ್ರತ್ಯೇಕ ಟಿಕೆಟ್‌ ಕೌಂಟರ್‌, ಹೊರಗಡೆ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮತ್ತು ಹೊಸದಾಗಿ ಎರಡನೇ ಪ್ಲಾಟ್‌ ಫಾರ್ಮ್‌ ಹೀಗೆ ಅನೇಕ ಸೌಲಭ್ಯಗಳನ್ನು ನವೀಕೃತ ನಿಲ್ದಾಣದಲ್ಲಿ ಕಲ್ಪಿಸಲಾಗಿದೆ.

ಪ್ರತ್ಯೇಕ ಪ್ರವೇಶ ಮತ್ತು ನಿರ್ಗಮನ ದ್ವಾರಗಳು, 3600 ಚದುರ ಮೀಟರ್ ವಿಸ್ತೀರ್ಣದ ಪ್ಲಾಟ್‌ಪಾರ್ಮ್‌, ಎರಡು ಲಿಫ್ಟ್‌ಗಳ ಸೌಲಭ್ಯಗಳು ಇವೆ. ಈ ರೈಲು ನಿಲ್ದಾಣ ಹುಬ್ಬಳ್ಳಿ-ಗುಂತಕಲ್ ರೈಲು ಮಾರ್ಗದ ಮೂಲಕ ಕರ್ನಾಟಕವನ್ನು ಆಂಧ್ರಪ್ರದೇಶಕ್ಕೆ ಸಂಪರ್ಕಿಸುವ ಪ್ರಮುಖ ಕೊಂಡಿಯಾಗಿದೆ.

ರಾಜಶೇಖರ ಹಿಟ್ನಾಳ
ಮುನಿರಾಬಾದ್‌ ರೈಲು ನಿಲ್ದಾಣದ ನವೀಕೃತ ಕಟ್ಟಡ ಉದ್ಘಾಟನೆಯಾಗುತ್ತಿದ್ದು ಹುಲಿಗಿಯಲ್ಲಿ ವೇದಿಕೆ ಕಾರ್ಯಕ್ರಮ ಆಯೋಜಿಸಲಾಗಿದೆ.
ರಾಜಶೇಖರ ಹಿಟ್ನಾಳ ಸಂಸದ

ಹೀಗೆ ನಿರ್ಮಾಣವಾಗಿತ್ತು ರೈಲು ನಿಲ್ದಾಣ 

‘ಹೈದರಾಬಾದ್‌ನ ನಿಜಾಮನು ಕೊಪ್ಪಳ ವಿಭಾಗವನ್ನು ಮೀರ್ ತುರಾಬ್ ಅಲೀಖಾನ್ ಬಹದ್ದೂರ್ ಅವರ ಹಿರಿಯ ಮಗ ನವಾಬ್ ಮೀರಲಾಯಕ ಅಲೀಖಾನನು ಕೊಪ್ಪಳ ಜಾಹಗೀರ್ ಆಗಿದ್ದನು. ಇವನನ್ನು 2ನೇ ಸಾಲರಜಂಗ್‌ ಎಂದು ಕರೆಯಲಾಗುತ್ತಿತ್ತು. ಗದಗ ಮತ್ತು ಬಳ್ಳಾರಿಯ ಮಧ್ಯೆ ರೈಲು ಮಾರ್ಗ ಸಂಪರ್ಕದ ಕೆಲಸದಲ್ಲಿ ನಿಜಾಮರ ಮತ್ತು ಸಾಲರಜಂಗ್‍ನ ಅವಶ್ಯಕತೆಯಿತ್ತು. ಹೀಗಾಗಿ ಬ್ರಿಟಿಷ್ ಸರ್ಕಾರ ಕೊಪ್ಪಳ ಜಾಹಗೀರ ಅಧಿಕಾರಿ ಸಾಲರಜಂಗ್‍ನ ಸಹಾಯ ಬೇಡಿದರು. ಸಾಲರಜಂಗ್‌ನಿಗೂ ಸರಕು ಸಾಕಾಣಿಕೆಯ ಅವಶ್ಯಕತೆಗಾಗಿ ರೈಲಿನ ಸಂಪರ್ಕ ಬೇಕಾಗಿತ್ತು. ಜೊತೆಗೆ ಅವರ ಮಿಲ್‍ಗಳಿಗೆ ಸರಕುಗಳು ಮತ್ತು ತಯಾರಿಸಿದ ವಸ್ತುಗಳ ಸಾಕಾಣಿಕೆಗಾಗಿ ರೈಲು ಮಾರ್ಗ ಅಗತ್ಯವಾಗಿತ್ತು. ಈ ಕಾರಣಕ್ಕಾಗಿ ಹುಲಿಗಿಯಲ್ಲಿ ರೈಲು ನಿಲ್ದಾಣದ ವ್ಯವಸ್ಥೆ ಮಾಡಿದ್ದರು’ ಎಂದು ಇತಿಹಾಸ ಸಂಶೋಧಕ ಸಿದ್ಧಲಿಂಗಪ್ಪ ಕೊಟ್ನೇಕಲ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ನವೀಕೃತವಾದರೂ ಬದಲಾಗದ ಹೆಸರು

ಕೊಪ್ಪಳ: ಶಕ್ತಿ ದೇವತೆ ಎಂದೇ ಹೆಸರಾದ ತಾಲ್ಲೂಕಿನ ಹುಲಿಗಿಯಲ್ಲಿ ಈ ರೈಲು ನಿಲ್ದಾಣವಿದೆ. ಆದರೆ ಇದನ್ನು ಮೊದಲಿನಿಂದಲೂ ಮುನಿರಾಬಾದ್‌ ನಿಲ್ದಾಣವೆಂದು ಕರೆಯಲಾಗುತ್ತಿದೆ. ಅನೇಕ ಬಾರಿ ಪ್ರಯಾಣಿಕರು ತುಂಗಭದ್ರಾ ಜಲಾಶಯ ನೋಡಲು ಮುನಿರಾಬಾದ್‌ ಟಿಕೆಟ್ ಪಡೆದು ಬಂದವರು ಹುಲಿಗಿಯಲ್ಲಿ ಇಳಿದು ನಿರಾಸೆ ಅನುಭವಿಸಬೇಕಾಗಿತ್ತು. ಆದ್ದರಿಂದ ಊರಿನ ಹೆಸರನ್ನೇ ಅಥವಾ ಕ್ಷೇತ್ರದ ಅಧಿದೇವತೆ ಹುಲಿಗೆಮ್ಮ ದೇವಿ ಹೆಸರನ್ನು ನಿಲ್ದಾಣಕ್ಕೆ ನಾಮಕರಣ ಮಾಡಬೇಕು ಎಂದು ಜಿಲ್ಲೆಯ ಜನ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.