ಕುಷ್ಟಗಿ: ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಅಳವಡಿಸಲಾಗಿದ್ದ ಹೈಮಾಸ್ಟ್ ದೀಪದ ಕಂಬ ಏಕಾಏಕಿ ಉರುಳಿ ಬಿದ್ದ ಘಟನೆ ಭಾನುವಾರ ಬೆಳಿಗ್ಗೆ ನಡೆದಿದೆ.
ಕ್ರೀಡಾಂಗಣದಲ್ಲಿ ಬೆಳಕಿನ ವ್ಯವಸ್ಥೆ ಕಲ್ಪಿಸಲು ಅಂದಾಜು ₹10 ಲಕ್ಷ ಅನುದಾನದಲ್ಲಿ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆಆರ್‌ಡಿಎಲ್) ಮೂರು ವರ್ಷಗಳ ಹಿಂದೆ ಒಟ್ಟು ಮೂರು ಕಂಬಗಳನ್ನು ಅಳವಡಿಸಿತ್ತು. ಆದರೆ ಅದರಲ್ಲಿ ಒಂದು ಕಂಬ ಏಕಾಏಕಿ ಉರುಳಿ ಬಿದ್ದಿರುವುದು ಅಚ್ಚರಿಕೆ ಕಾರಣವಾಗಿದೆ.
ಕ್ರೀಡಾಂಗಣದಲ್ಲಿ ಮಕ್ಕಳು ಸೇರಿದಂತೆ ಕ್ರೀಡಾಪಟುಗಳು ಆಟವಾಡುವ ಸಂದರ್ಭದಲ್ಲಿಯೇ ಕಂಬ ಬಿದ್ದಿದ್ದು ಅದೃಷ್ಟವಶಾತ್ ಸಂಭವನೀಯ ಅನಾಹುತ ತಪ್ಪಿದೆ ಎಂದು ಕ್ರೀಡಾಪಟು ರಮೇಶ ಮೇಲಿನಮನಿ ತಿಳಿಸಿದರು.
ಈ ಕುರಿತು ವಿವರಿಸಿದ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿಠ್ಠಲ ಜಾಬಗೌಡರ, ಮೂರು ವರ್ಷದ ಒಳಗೇ ಕಂಬ ಉರುಳಿ ಬಿದ್ದಿದೆ. ಆದರೆ ಯಾರೊ ದುಷ್ಕರ್ಮಿಗಳು ಕಂಬ ಬೀಳಿಸಿದ್ದಾರೆ ಎಂದೆ ಕಂಬ ಅಳವಡಿಸಿದ್ದ ಕೆಆರ್‌ಡಿಎಲ್ ಎಂಜಿನಿಯರ್ ಶಂಕೆ ವ್ಯಕ್ತಪಡಿಸಿದ್ದಾರೆ. ವಾರದ ಒಳಗೆ ಕಂಬವನ್ನು ದುರಸ್ತಿಗೊಳಿಸಿ ಪುನಃ ಅಳವಡಿಸುವಂತೆ ಸೂಚಿಸಿರುವುದಾಗಿ ಹೇಳಿದರು.
ಎಂಜಿನಿಯರ್ ಹೇಳಿದ್ದು: ಈ ಕುರಿತು ಮಾಹಿತಿ ನೀಡಿದ ಕೆಆರ್‌ಡಿಎಲ್ ಎಂಜಿನಿಯರ್ ಇರ್ಫಾನ್ ಪಠಾಣ್, ಯಾರೋ ಕಂಬವನ್ನು ಉರುಳಿಸಿರುವ ಸಾಧ್ಯತೆಗಳಿವೆಯೆ ಎಂಬ ನಿಟ್ಟಿನಲ್ಲಿಯೂ ಪರಿಶೀಲನೆ ನಡೆಸಲಾಗುತ್ತಿದೆ. ಕ್ರೀಡಾಂಗಣದಲ್ಲಿರುವ ಸಿಸಿ ಕ್ಯಾಮೆರಾಗಳ ಫೂಟೇಜ್‌ಗಳನ್ನು ಪರಿಶೀಲಿಸುವಂತೆ ತಂತ್ರಜ್ಞರಿಗೆ ಸೂಚಿಸಲಾಗಿದೆ. ಅಲ್ಲದೆ ವಾರದ ಒಳಗಾಗಿ ಪುನಃ ಹೈಮಾಸ್ಟ್ ಕಂಬವನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.