
ಯಲಬುರ್ಗಾ: ‘ಹಿಂದೂಗಳು ಒಗ್ಗೂಡಿ ದೇಶದ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ ಮುಂದಾಗಬೇಕು. ಇಲ್ಲದಿದ್ದರೆ ಹಿಂದೂ ಸಮಾಜ ಸಂಪೂರ್ಣ ಅವಸಾನದತ್ತ ಸಾಗಬೇಕಾಗುತ್ತದೆ. ಪ್ರತಿ ಹಿಂದೂ ಒಂದು ಎಂಬ ಪರಿಕಲ್ಪನೆಯಲ್ಲಿ ಒಗ್ಗೂಡಬೇಕಾಗಿದೆ’ ಎಂದು ಹಿಂದೂ ಸಮಾಜದ ಮುಖಂಡ ಕೃಷ್ಣಾನಂದ ಹೇಳಿದರು.
ಪಟ್ಟಣದ ಮೊಗ್ಗಿಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ಹಿಂದೂ ಸಮಾಜೋತ್ಸವ ಹಾಗೂ ಶೋಭಾಯಾತ್ರಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಆರ್‌ಎಸ್‌ಎಸ್‍ಗೂ ಹಿಂದೂ ಸಂಘಟನೆಗೂ ಸಂಬಂಧವಿಲ್ಲ. ಹಿಂದೂ ಸಮಾಜದವರು ಒಗ್ಗೂಡಿ ಸಂಘಟಿತರಾಗಿ ಹಿಂದೂಗಳು ಮತ್ತೆ ತಮ್ಮತನವನ್ನು ಉಳಿಸಿಕೊಂಡು ಅತ್ತಿತ್ವವನ್ನು ಕಂಡುಕೊಳ್ಳಬೇಕಾಗಿದೆ’ ಎಂದರು.
‘ಹಿಂದೂಗಳನ್ನು ಮತಾಂತರಕ್ಕೆ ಒಳಪಡಿಸಿ, ನಮ್ಮ ಬಲವನ್ನು ಕ್ಷೀಣಿಸುವ ಪ್ರಯತ್ನಗಳು ನಡೆಯುತ್ತಿವೆ. ಹಿಂದೂ ಸ್ಥಾನದಲ್ಲಿ ಹಿಂದೂಗಳದ್ದೇ ದೊಡ್ಡ ಶಕ್ತಿ ಇದ್ದರೂ ವಾಸ್ತವದಲ್ಲಿ ಬೇರೆನೇ ಆಗುತ್ತಿದೆ. ನಿರ್ಲಕ್ಷ್ಯ ಮುಂದುವರಿದರೆ ಸಂಪೂರ್ಣ ವಿನಾಶವಾಗುವುದರಲ್ಲಿ ಎರಡು ಮಾತಿಲ್ಲ’ ಎಂದರು.
‘ಮಕ್ಕಳಿಗೆ ಒಳ್ಳೆಯ ಶಿಕ್ಷಣ ಮತ್ತು ಸಂಸ್ಕಾರ ನೀಡಬೇಕು. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಯೋಧರನ್ನು ಆದರ್ಶವಾಗಿಟ್ಟುಕೊಳ್ಳಬೇಕು. ಮಹಾತ್ಮರ ಮತ್ತು ಮಹನೀಯರ ಜಯಂತಿಗಳನ್ನು ಜಾತಿಗೆ ಸೀಮಿತಗೊಳಿಸದೇ ಅವರ ವ್ಯಕ್ತಿತ್ವವನ್ನು ಅನುಸರಿಸಿ, ದೇಶಕ್ಕೆ ನೀಡಿದ ಅವರ ಕೊಡುಗೆಯನ್ನು ಸ್ಮರಿಸಿ ಪ್ರತಿಯೊಬ್ಬರೂ ಗೌರವಿಸುವುದನ್ನು ರೂಢಿಸಿಕೊಳ್ಳಬೇಕಾಗಿದೆ’ ಎಂದು ಹೇಳಿದರು.
‘ನಮ್ಮ ಭಾಷೆ, ನೆಲ, ಜಲ ಸಂರಕ್ಷಣೆಗೆ ಹೆಚ್ಚಿನ ಕಾಳಜಿ ತೋರುವುದು, ಸ್ವದೇಶಿ ವಸ್ತುಗಳನ್ನು ಬಳಸಿಕೊಳ್ಳುವ ಮೂಲಕ ನಮ್ಮ ದೇಶವನ್ನು ಅಭಿವೃದ್ಧಿಯತ್ತ ಸಾಗುವಂತೆ ಮಾಡುವುದು. ಪಾಶ್ಚಿಮಾತ್ಯ ಸಂಸ್ಕೃತಿಯತ್ತ ಒಲವು ತೋರದೇ ದೇಶಿ ಸಂಸ್ಕೃತಿಯನ್ನು ಹೆಚ್ಚೆಚ್ಚು ಅನುಸರಣೆಗೆ ಮುಂದಾಗಬೇಕು’ ಎಂದು ಸಲಹೆ ನೀಡಿದರು.
ಶ್ರೀಧರ ಮುರಡಿ ಹಿರೇಮಠದ ಬಸವಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ‘ನಾವು ಅಸ್ತಿತ್ವದಲ್ಲಿ ಇರಬೇಕಾದರೆ ಹಿಂದುತ್ವದ ಅಡಿಯಲ್ಲಿ ಸಾಗಿದರೆ ಮಾತ್ರ ಸಾಧ್ಯವಿದೆ. ಈ ನಿಟ್ಟಿನಲ್ಲಿ ಹಿಂದೂಗಳು ಎಂದು ಕರೆಯಿಸಿಕೊಳ್ಳುವ ಪ್ರತಿಯೊಂದು ಸಮಾಜದವರು ಒಗ್ಗೂಡಿ ಅಸ್ತಿತ್ವ ಉಳಿಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.
ಮಾಜಿ ಸಚಿವ ಹಾಲಪ್ಪ ಆಚಾರ, ಬಸವಲಿಂಗಪ್ಪ ಭೂತೆ ಸೇರಿ ಅನೇಕ ಗಣ್ಯರು ಭಾಗವಹಿಸಿದ್ದರು. ಸಂಚಾಲಕ ಸುರೇಶಗೌಡ ಶಿವನಗೌಡ ಸ್ವಾಗತಿಸಿದರು. ಲೋಕೇಶ ಲಮಾಣಿ ನಿರೂಪಿಸಿದರು. ದೊಡ್ಡಯ್ಯ ಗುರುವಿನ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.