ಎಚ್.ಎಂ.ರೇವಣ್ಣ
ಕೊಪ್ಪಳ: ‘ಹಾಸನದಲ್ಲಿ ನಡೆಯಲಿರುವ ಸ್ವಾಭಿಮಾನ ಸಮಾವೇಶವನ್ನು ಕಾಂಗ್ರೆಸ್ ಪಕ್ಷದ ಚಿಹ್ನೆಯ ಅಡಿಯಲ್ಲಿಯೇ ನಡೆಸಲಾಗುತ್ತಿದ್ದು, ಕೆಪಿಸಿಸಿ ಅಧ್ಯಕ್ಷರು ಸೇರಿ ಎಲ್ಲ ನಾಯಕರು ಪಾಲ್ಗೊಳ್ಳಲಿದ್ದಾರೆ’ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಂ.ರೇವಣ್ಣ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಅನಾಮಧೇಯ ಪತ್ರಗಳ ಬಗ್ಗೆ ಚರ್ಚೆ ಮಾಡುವ ಅವಶ್ಯಕತೆಯಿಲ್ಲ. ಪಕ್ಷದ ಚಿನ್ಹೆಯ ಅಡಿಯಲ್ಲೇ ಸಮಾವೇಶ ಮಾಡಿ ಎಂದು ರಾಹುಲ್ ಗಾಂಧಿ ಹೇಳಿದ್ದರಿಂದ ಯಾರಿಗೂ ಯಾವ ಗೊಂದಲವಿಲ್ಲ’ ಎಂದರು.
‘ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ. ಇದರಿಂದ ಅಭಿವೃದ್ಧಿ ಕಾಮಗಾರಿಗೆ ಸಣ್ಣ ಮಟ್ಟದಲ್ಲಿ ತೊಡಗಿದ್ದರೂ ದೊಡ್ಡ ಸಮಸ್ಯೆಯೇನಲ್ಲ. ಗ್ಯಾರಂಟಿ ಯೋಜನೆಗಳಲ್ಲಿ ಸಣ್ಣ ಮಾರ್ಪಾಡುಗಳು ಸಹಜವಾಗಿ ಆಗುತ್ತವೆ’ ಎಂದರು.
‘ರಾಜ್ಯ ಸಾರಿಗೆ ಇಲಾಖೆಯಲ್ಲಿ ಪಿಎಫ್ ಹಣ ಪಾವತಿಗೂ ಹಣ ಇಲ್ಲದ ಎಂಬುದು ತಪ್ಪು ಮಾಹಿತಿ. ನಾನು ಕೂಡ ಸಾರಿಗೆ ಸಚಿವನಾಗಿ ಕೆಲಸ ಮಾಡಿದ್ದೇನೆ. ಬಿಜೆಪಿಯವರು ಉಳಿಸಿದ್ದ ₹5900 ಕೋಟಿ ಬಾಕಿಯಿದೆ’ ಎಂದು ಹೇಳಿದರು. ಬೇರೆ ಯೋಜನೆಗಳ ಹಣ ಗ್ಯಾರಂಟಿಗೆ ಬಳಸಿದ್ದೇವೆ ಎಂದು ಬಿಜೆಪಿ ವಿನಾಕಾರಣ ಆರೋಪ ಮಾಡುತ್ತಿದ್ದು, ಇದರಲ್ಲಿ ಯಾವುದೇ ಹುರುಳಿಲ್ಲ ಎಂದು ಸ್ಪಷ್ಟಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.