ADVERTISEMENT

ಕುಷ್ಟಗಿ: ಕಳಪೆ ಉಪಾಹಾರ; ಮಕ್ಕಳು ಅಸ್ವಸ್ಥ

ಇಡ್ಲಿಯಲ್ಲಿ ತುಕ್ಕುಹಿಡಿದ ಪಿನ್‌, ಹುಳು, ಕಸಕಡ್ಡಿ ಪತ್ತೆ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2021, 6:00 IST
Last Updated 29 ನವೆಂಬರ್ 2021, 6:00 IST
ಕುಷ್ಟಗಿ ತಾಲ್ಲೂಕು ನಿಡಶೇಸಿ ಮೊರಾರ್ಜಿ ವಸತಿ ಶಾಲೆ ಮಕ್ಕಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು
ಕುಷ್ಟಗಿ ತಾಲ್ಲೂಕು ನಿಡಶೇಸಿ ಮೊರಾರ್ಜಿ ವಸತಿ ಶಾಲೆ ಮಕ್ಕಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು   

ಕುಷ್ಟಗಿ: ತಾಲ್ಲೂಕಿನ ನಿಡಶೇಸಿ ಮೊರಾರ್ಜಿ ವಸತಿ ಶಾಲೆಯಲ್ಲಿ ಹುಳು ಮತ್ತು ತುಕ್ಕುಹಿಡಿದ ಪಿನ್‌ ಇದ್ದ ಉಪಾಹಾರ ಸೇವಿಸಿದ ಕೆಲ ಮಕ್ಕಳು ಭಾನುವಾರ ವಾಂತಿ ಮಾಡಿಕೊಂಡಿದ್ದಾರೆ.

ಇಬ್ಬರು ಮಕ್ಕಳು ವಾಂತಿ ಮಾಡಿಕೊಳ್ಳುತ್ತಿದ್ದಂತೆ ಶಾಲೆಯ ಇತರೆ ಮಕ್ಕಳೂ ಭಯದಿಂದ ಉಪಾಹಾರ ಸೇವಿಸಲಿಲ್ಲ. ತಕ್ಷಣ ಆಂಬುಲೆನ್ಸ್‌ನಲ್ಲಿ ಮಕ್ಕಳನ್ನು ಇಲ್ಲಿಯ ಸರ್ಕಾರಿ ಆಸ್ಪತ್ರೆಗೆ ಕೆರೆ ತರಲಾಯಿತು.

ಹೆದರಿಕೆ ಮತ್ತು ಉಪಾಹಾರ ಸೇವಿಸದ ಕಾರಣ ಅನೇಕ ವಿದ್ಯಾರ್ಥಿಗಳು ತಲೆಸುತ್ತು ಬಂದು ಮಕ್ಕಳು ಸಾಮೂಹಿಕವಾಗಿ ಅಳಲು ಶುರು ಮಾಡಿದರು. ತಕ್ಷಣ ಚಿಕಿತ್ಸೆ ಆರಂಭಿಸಿದ ವೈದ್ಯರಾದ ಡಾ.ಚಂದ್ರಕಲಾ ಮತ್ತು ಡಾ.ಕೆ.ಎಸ್‌.ರೆಡ್ಡಿ ಮಕ್ಕಳಿಗೆ ಧೈರ್ಯ ತುಂಬುವ ಕೆಲಸ ಮಾಡಿದರು. ಚಿಕಿತ್ಸೆ ನೀಡಿ, ಅವರನ್ನು ಮನೆಗೆಕಳುಹಿಸಿದರು.

ADVERTISEMENT

ಭಯಭೀತರಾದ ಪಾಲಕರು, ಜನರು ಆಸ್ಪತ್ರೆಯಲ್ಲಿ ಜಮಾಯಿಸಿದ್ದರಿಂದ ಗೊಂದಲದ ವಾತಾವರಣ ಉಂಟಾಗಿತ್ತು. ಸ್ಥಳಕ್ಕೆ ಬಂದ ಶಾಸಕ ಅಮರೇಗೌಡ ಬಯ್ಯಾಪುರ ಮಕ್ಕಳ ಆರೋಗ್ಯ ವಿಚಾರಿಸಿ, ಶಿಕ್ಷಕರಿಂದ ಮಾಹಿತಿ ಪಡೆದರು.

ಕಳಪೆ ಆಹಾರ ಸಿದ್ಧಪಡಿಸಿದ ಅಡುಗೆ ಸಿಬ್ಬಂದಿ ಮತ್ತು ಊಟ ಉಪಹಾರದ ಜವಾಬ್ದಾರಿ ಹೊತ್ತ ಶಾಲೆಯ ಸಿಬ್ಬಂದಿ ವಿರುದ್ಧ ಪಾಲಕರು ಆಕ್ರೋಶ ವ್ಯಕ್ತಪಡಿಸಿದರು.

ತಹಶೀಲ್ದಾರ್ ಎಂ.ಸಿದ್ದೇಶ್‌, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಡಾ.ಜಯರಾಂ ಚವ್ಹಾಣ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಚನ್ನಬಸಪ್ಪ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.