ADVERTISEMENT

ಹುಲಿಹೈದರ ಗ್ರಾಮದ ಘರ್ಷಣೆ| ನಿಜವಾದ ಆರೋಪಿಗಳನ್ನು ಮಾತ್ರ ಬಂಧಿಸಲಾಗುವುದು: ಎಸ್‌ಪಿ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2022, 14:12 IST
Last Updated 12 ಆಗಸ್ಟ್ 2022, 14:12 IST
ಕನಕಗಿರಿ ತಾಲ್ಲೂಕಿನ ಹುಲಿಹೈದರ ಗ್ರಾಮದ ಘರ್ಷಣೆಯಲ್ಲಿ ಮೃತಪಟ್ಟ ಪಾಷವಲಿ ಅವರ ಮನೆಗೆ ಶಾಸಕ ಬಸವರಾಜ ದಢೇಸೂಗೂರು ಶುಕ್ರವಾರ ಭೇಟಿ ನೀಡಿದರು
ಕನಕಗಿರಿ ತಾಲ್ಲೂಕಿನ ಹುಲಿಹೈದರ ಗ್ರಾಮದ ಘರ್ಷಣೆಯಲ್ಲಿ ಮೃತಪಟ್ಟ ಪಾಷವಲಿ ಅವರ ಮನೆಗೆ ಶಾಸಕ ಬಸವರಾಜ ದಢೇಸೂಗೂರು ಶುಕ್ರವಾರ ಭೇಟಿ ನೀಡಿದರು   

ಕನಕಗಿರಿ (ಕೊಪ್ಪಳ): ತಾಲ್ಲೂಕಿನ ಹುಲಿಹೈದರ ಗ್ರಾಮದಲ್ಲಿ ನಡೆದ ಗುಂಪು ಘರ್ಷಣೆಗೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಲು ಆರು ತಂಡಗಳನ್ನು ರಚನೆ ಮಾಡಲಾಗಿದೆ. ಘಟನೆಯಲ್ಲಿ ಭಾಗಿಯಾದ ನಿಜವಾದ ಆರೋಪಿಗಳನ್ನು ಮಾತ್ರ ಬಂಧಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ಹೇಳಿದರು.

ಗ್ರಾಮದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ‘ಘಟನೆಗೆ ಮೂಲ ಕಾರಣವನ್ನು ಪತ್ತೆ ಹಚ್ಚಲಾಗುತ್ತಿದೆ. ಅಮಾಯಕರನ್ನು ಬಂಧಿಸುವುದಿಲ್ಲ. ಗ್ರಾಮಸ್ಥರು ವಿನಾಕಾರಣ ಆತಂಕಕ್ಕೆ ಒಳಗಾಗುವುದು ಬೇಡ. ವಶಕ್ಕೆ ತೆಗೆದುಕೊಂಡವರಲ್ಲಿ ತಪ್ಪಿತಸ್ಥರು ಇಲ್ಲದಿದ್ದರೆ ವಾಪಸ್‌ ಕಳುಹಿಸಲಾಗುವುದು’ ಎಂದರು.

ADVERTISEMENT

ದಢೇಸೂಗೂರು ಭೇಟಿ: ಗುಂಪು ಘರ್ಷಣೆಯಲ್ಲಿ ಮೃತಪಟ್ಟ ಪಾಷವಲಿ ಮಾಳಿಗದ್ದಿ, ಯಂಕಪ್ಪ ತಳವಾರ ಹಾಗೂ ಗಾಯಗೊಂಡಿರುವ ಧರ್ಮಣ್ಣ ಅವರ ಮನೆಗೆ ಶಾಸಕ ಬಸವರಾಜ ದಢೇಸೂಗೂರು ಶುಕ್ರವಾರ ಭೇಟಿ ನೀಡಿ ಸಾಂತ್ವನ ಹೇಳಿದರು. ಪಾಷವಲಿ ಅವರ ಮನೆಗೆ ತೆರಳಿದಾಗ ಕುಟುಂಬದವರು ಬಿಕ್ಕಿಬಿಕ್ಕಿ ಅತ್ತರು.

‘ಹೂ, ಹಣ್ಣು ತರಲು ಹೋದವನನ್ನು ಕೊಂದು ಹಾಕಿದ್ದಾರೆ. ಪೊಲೀಸ್‌ ಪಹರೆ ಇದ್ದಿದ್ದರೆ ಘಟನೆ ನಡೆಯುತ್ತಿರಲಿಲ್ಲ. ನನ್ನ ಮಗ ಜೀವಂತವಾಗಿ ಇರುತ್ತಿದ್ದ. ನಮಗೆ ಬಂದ ಪರಿಸ್ಥಿತಿ ಯಾರಿಗೂ ಬರುವುದು ಬೇಡ’ ಎಂದು ಪಾಷವಲಿ ತಾಯಿ ಹೊನ್ನುರುಬೀ, ಸಹೋದರಿಯರಾದ ಜಾಹೀರಾಬಿ, ರಶೀದ್ ಕಣ್ಣೀರಾದರು.

‘ಕೈ, ಕಾಲು ಮಾತ್ರ ಮುರಿದಿದ್ದರೆ ಸಹೋದರ ಬದುಕುತ್ತಿದ್ದ. ಮೂರು ತಿಂಗಳ ಕೂಸು ಇದೆ, ಮುಂದೆ ತಂದೆ ಎಲ್ಲಿ ಅಂತ ಕೇಳಿದರೆ ಏನು ಉತ್ತರಿಸಬೇಕು’ ಎಂದು ಅವರ ಸಹೋದರಿ ರಶೀದ್‌ ಭಾವುಕರಾದರು.

ಯಂಕಪ್ಪ ಮನೆಗೆ ತೆರಳಿದ್ದಾಗ ಅವರ ಮನೆಗೆ ಬಾಗಿಲು ಹಾಕಲಗಿತ್ತು. ಗಾಯಾಳು ಧರ್ಮಣ್ಣ ಅವರ ಜತೆಗೆ ಹುಬ್ಬಳ್ಳಿಗೆ ತೆರಳಿರುವ ಸಂಬಂಧಿಕರ ಜತೆಗೆ ದೂರವಾಣಿಯಲ್ಲಿ ಮಾತನಾಡಿ ಆರೋಗ್ಯ ವಿಚಾರಿಸಿದರು.

ನಂತರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರ ಜತೆಗೆ ಮಾತನಾಡಿದ ಶಾಸಕರು ‘ಕೆಟ್ಟ ಗಳಿಗೆಯಲ್ಲಿ ಘಟನೆ ನಡೆದಿದೆ. ಅಮಾಯಕರನ್ನು ಬಂಧಿಸದಂತೆ ಪೊಲೀಸರಿಗೆ ಸೂಚಿಸಲಾಗಿದೆ’ ಎಂದರು.

ಕೂಲಿ ಕೆಲಸವಿಲ್ಲದೆ ಗ್ರಾಮದ ಕುಟುಂಬಕ್ಕೆ ಆಹಾರ ಧಾನ್ಯಗಳ ಕಿಟ್ ವಿತರಿಸುವಂತೆ ಜಿಲ್ಲಾಧಿಕಾರಿ ಅವರಿಗೆ ತಿಳಿಸಿದರು.

ಡಿವೈಎಸ್ ಪಿ ರುದ್ರೇಶ ಉಜ್ಜಿನಕೊಪ್ಪ, ಬಿಜೆಪಿ ಮಂಡಲ ಘಟಕದ ಅಧ್ಯಕ್ಷ ಮಹಾಂತೇಶ ಸಜ್ಜನ, ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಗ್ಯಾನಪ್ಪ ನಾಯಕ ಸೇರಿದಂತೆ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.