ಮುನಿರಾಬಾದ್: ಕೊಪ್ಪಳ ತಾಲ್ಲೂಕಿನ ಹುಲಿಗಿಯ ಹುಲಿಗೆಮ್ಮ ದೇವಿ ದೇವಸ್ಥಾನದ ಮುಖ್ಯರಸ್ತೆಯ ಒತ್ತುವರಿ ತೆರವು ಕಾರ್ಯಾಚರಣೆ ಶನಿವಾರ ಬೆಳಿಗ್ಗೆ ಆರಂಭವಾಯಿತು.
ಕಳೆದ ಮಂಗಳವಾರ ಸೀಗೆ ಹುಣ್ಣಿಮೆಯ ಅಂಗವಾಗಿ ದೇವಿಯ ದರ್ಶನಕ್ಕೆ ಬಂದಿದ್ದ ಲಕ್ಷಾಂತರ ಭಕ್ತರು ಸಂಚಾರ ದಟ್ಟಣೆಯ ಪರಿಣಾಮ ದೇವಸ್ಥಾನ ತಲುಪಲು ಹರಸಾಹಸ ಪಡಬೇಕಾಯಿತು. ವಿಪರೀತ ಜನಸಂದಣಿಯಿಂದಾಗಿ ಕೆಲವು ಭಕ್ತರು ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ ಘಟನೆ ಕೂಡ ನಡೆದಿತ್ತು. ದೇವಿಯ ಭಕ್ತರು, ಹುಲಿಗಿಯ ಸಂಘ-ಸಂಸ್ಥೆಯ ಪದಾಧಿಕಾರಿಗಳು, ಸ್ವಯಂಸೇವಕರು ಈ ಕುರಿತು ಆಕ್ರೋಶ ಹೊರಹಾಕಿದ್ದರು.
ಹುಲಿಗೆಮ್ಮ ದೇವಿ ದೇವಸ್ಥಾನ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ, ಸ್ಥಳೀಯ ಗ್ರಾಮ ಪಂಚಾಯಿತಿ, ಪೊಲೀಸ್ ಇಲಾಖೆ ಸಹಯೋಗದಲ್ಲಿ ಮೂರು ದಿನ ಮೊದಲೇ ಒತ್ತುವರಿ ತೆರವು ಕಾರ್ಯಾಚರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಮೊದಲ ಹಂತವಾಗಿ ಗ್ರಾಮ ಪಂಚಾಯಿತಿ ವತಿಯಿಂದ ಆಟೋರಿಕ್ಷಾದಲ್ಲಿ ಧ್ವನಿವರ್ಧಕದ ಮೂಲಕ ಒತ್ತುವರಿ ತೆರವು ಮಾಡಿಕೊಳ್ಳಲು ವ್ಯಾಪಾರಿಗಳಿಗೆ ಅವಕಾಶ ನೀಡಲಾಯಿತು. ಆಗ ಕೆಲವರು ಸ್ವಯಂಪ್ರೇರಿತರಾಗಿ ತೆರವು ಮಾಡಿಕೊಂಡರೆ, ಇನ್ನುಳಿದವರನ್ನು ಅಧಿಕಾರಿಗಳೇ ಮುಂದೆ ನಿಂತು ತೆರವು ಮಾಡಿಸಿದರು.
ಅಬ್ಬರಿಸಿದ ಜೆಸಿಬಿ ಯಂತ್ರಗಳು: ಯೋಜನೆಯಂತೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ನೇತೃತ್ವದಲ್ಲಿ ಶನಿವಾರ ಬೆಳಗಿನ ಜಾವ ರಸ್ತೆ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಲಾಯಿತು. ದೇವಸ್ಥಾನಕ್ಕೆ ಸೇರಿದ ವಾಣಿಜ್ಯ ಮಳಿಗೆಗಳ ಮುಂಭಾಗದಲ್ಲಿ ಶೆಡ್ ನಿರ್ಮಿಸಿಕೊಂಡು ಮುಖ್ಯ ರಸ್ತೆಯಲ್ಲಿ ಎರಡೂ ಬದಿ ವ್ಯಾಪಾರ ಮಾಡುತ್ತಿದ್ದ ಮಿಠಾಯಿ, ಅಲಂಕಾರಿಕ ಮತ್ತು ಆಟಿಕೆ ವಸ್ತುಗಳ ಅಂಗಡಿಯ ಮುಂಭಾಗವನ್ನು ತೆರವು ಮಾಡಲಾಯಿತು.
ನಂದಿ ಸರ್ಕಲ್ ಮತ್ತು ರೈಲ್ವೆ ಗೇಟ್ ಮುಂಭಾಗದ ಅನಧಿಕೃತ ಹೋಟೆಲ್, ಮೀನು, ಮಾಂಸ ಮಾರಾಟದ ಅಂಗಡಿಗಳನ್ನು ತೆಗೆಯಲಾಯಿತು.. ಅಂಗಡಿ ಮುಂದೆ ಹೆಚ್ಚುವರಿಯಾಗಿ ಕಟ್ಟಿಕೊಂಡಿದ್ದ ಶೆಡ್ ಮತ್ತು ಕಟ್ಟೆಗಳು ಯಂತ್ರಕ್ಕೆ ಆಹುತಿಯಾದವು.
ಜಿಲ್ಲಾಧಿಕಾರಿ ಸುರೇಶ ಇಟ್ನಾಳ, ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ, ಜಿಲ್ಲಾ ಪಂಚಾಯಿತಿ ಸಿಇಒ ವರ್ಣಿತ್ ನೇಗಿ, ಕೊಪ್ಪಳ ಗ್ರಾಮೀಣ ಠಾಣೆಯ ಸಿಪಿಐ ಸುರೇಶ ಡಿ., ಉಪ ವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಪ್ರಾಧಿಕಾರದ ಕಾರ್ಯದರ್ಶಿ ಎಂ. ಎಚ್.ಪ್ರಕಾಶರಾವ್, ಪಿಡಿಒ ಗುರು ದೇವಮ್ಮ ಸೇರಿದಂತೆ ಅನೇಕರು ಇದ್ದರು.
ಇದೇ ವೇಳೆ ಹುಲಿಗಿ ಗ್ರಾಮಸ್ಥರು ’ಗ್ರಾಮದಲ್ಲಿ ಬಸ್ ನಿಲ್ದಾಣ ಮತ್ತು ರುದ್ರಭೂಮಿಯ ಕೊರತೆ ಇದೆ, ದೇವಸ್ಥಾನಕ್ಕೆ ಬರುವ ಭಕ್ತರಿಗೆ ಶೌಚಾಲಯ, ಕುಡಿಯುವ ನೀರು, ಇರುವುದಿಲ್ಲ. ಇತ್ತ ಕಡೆಗೂ ಗಮನಹರಿಸಬೇಕು’ ಎಂದು ಜಿಲ್ಲಾಧಿಕಾರಿಗೆ ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.