ADVERTISEMENT

ಕಾಲುವೆಗೆ ನೀರು: ಐಸಿಸಿ ಸಭೆಯತ್ತ ರೈತರ ಚಿತ್ತ

ಜಲಾಶಯದಲ್ಲಿ 35.267 ಟಿಎಂಸಿ ನೀರು ಸಂಗ್ರಹ: ಮಳೆ ಕಡಿಮೆಯಾದರೆ ಮತ್ತೆ ಹೋರಾಟ

ಸಿದ್ದನಗೌಡ ಪಾಟೀಲ
Published 11 ಜುಲೈ 2021, 6:11 IST
Last Updated 11 ಜುಲೈ 2021, 6:11 IST
ಕೊಪ್ಪಳ ತಾಲ್ಲೂಕಿನ ಮುನಿರಾಬಾದ್ ಸಮೀಪದ ತುಂಗಭದ್ರಾ ಜಲಾಶಯದ ವಿಹಂಗಮ ನೋಟಪ್ರಜಾವಾಣಿ ಚಿತ್ರ
ಕೊಪ್ಪಳ ತಾಲ್ಲೂಕಿನ ಮುನಿರಾಬಾದ್ ಸಮೀಪದ ತುಂಗಭದ್ರಾ ಜಲಾಶಯದ ವಿಹಂಗಮ ನೋಟಪ್ರಜಾವಾಣಿ ಚಿತ್ರ   

ಕೊಪ್ಪಳ: ಆರಂಭದಲ್ಲಿ ಮಲೆನಾಡಿನಲ್ಲಿ ಮುಂಗಾರು ಉತ್ತಮವಾಗಿ ಸುರಿದಿದೆ. ಜಲಾಶಯದಲ್ಲಿ ನಿರೀಕ್ಷೆಗೂ ಮೀರಿ ನೀರು ಸಂಗ್ರಹವಾಗಿದೆ. ಸೋಮವಾರ (ಜು.12) ಐಸಿಸಿ ಸಭೆ ನಡೆಯಲಿದ್ದು, ರೈತರ ಚಿತ್ತ ಅದರತ್ತ ನೆಟ್ಟಿದೆ.

ಜಲಾಶಯ 200 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. 30 ಅಡಿ ಹೂಳು ತುಂಬಿದೆ ಎನ್ನಲಾಗಿದೆ. ಶನಿವಾರದವರೆಗೂ 35.267ಟಿಎಂಸಿ ನೀರು ಸಂಗ್ರಹವಾಗಿದೆ. ಮಲೆನಾಡಿನಲ್ಲಿ ಮಳೆ ಕಡಿಮೆಯಾಗಿರುವುದರಿಂದ ಒಳಹರಿವಿನ ಪ್ರಮಾಣ ಕಡಿಮೆಯಾಗಿದೆ.

ಮುಂಗಾರು ಭತ್ತದ ಮೊದಲ ಬೆಳೆಗೆ ನೀರು ಬಿಡಬೇಕು ಎಂಬ ರೈತರ ಬೇಡಿಕೆಗೆ ಸ್ಪಂದನೆ ದೊರೆತಿದ್ದು, ಸೋಮವಾರ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್‌ ಅಧ್ಯಕ್ಷತೆಯಲ್ಲಿ ನೀರಾವರಿ ಸಲಹಾ ಸಮಿತಿ ಸಭೆ ನಡೆಯಲಿದೆ. ಜುಲೈ 15 ರ ನಂತರ ಸಭೆ ನಡೆಯಲಾಗುತ್ತದೆ ಎನ್ನುವ ಅಂದಾಜು ಇತ್ತು. ಆದರೆ ಈ ಭಾಗದ ಜನಪ್ರತಿನಿಧಿಗಳು ಮತ್ತು ರೈತ ಮುಖಂಡರ ಒತ್ತಾಯದ ಮೇರೆಗೆ ಜು.12 ರಂದು ಸಭೆ ಆಯೋಜನೆ ಆಗಿದೆ.

ADVERTISEMENT

ಜಲಾಶಯದ ಎಡ ಮತ್ತು ಬಲದಂಡೆ ಕಾಲುವೆ ವ್ಯಾಪ್ತಿಗೆ ಕೊಪ್ಪಳ, ರಾಯಚೂರು, ಹೊಸಪೇಟೆ, ಬಳ್ಳಾರಿ, ಆಂಧ್ರಪ್ರದೇಶ, ತೆಲಂಗಾಣದ ಹಲವಾರು ಜಿಲ್ಲೆಗಳು ಒಳಪಡುತ್ತವೆ. ಅಲ್ಲದೆ ಮೇಲ್ಮಟ್ಟದ, ಕೆಳಮಟ್ಟದ ಕಾಲುವೆಗಳು, ರಾಯಸಂಗನಬಸವಣ್ಣ ಕಾಲುವೆ,ವಿಜಯನಗರ ಕಾಲುವೆಗಳು ಸೇರಿ ಐದು ಪ್ರಮುಖ ಕಾಲುವೆಗಳಿಗೆ ನೀರು ಹಂಚಿಕೆ ಕುರಿತು ಸಭೆಯಲ್ಲಿ ಚರ್ಚಿಸಲಾಗುತ್ತದೆ.

ತುಂಗಭದ್ರಾ ಕಾಡಾ ಅಧ್ಯಕ್ಷ ಎಚ್‌.ಎಂ.ತಿಪ್ಪೇರುದ್ರಸ್ವಾಮಿ ಪತ್ರಿಕೆಯೊಂದಿಗೆ ಮಾತನಾಡಿ,‘ಅವಧಿ ಪೂರ್ವದಲ್ಲಿಯೇ ಮೊದಲ ಬೆಳೆಗೆ ನಿರೀಕ್ಷೆಯಂತೆ ನೀರು ಬಿಡಲಾಗುತ್ತದೆ. ಜಲಾಶಯದಲ್ಲಿ ನೀರಿನ ಕೊರತೆಯಿಲ್ಲ. ರೈತರು ಆತಂಕ ಪಡಬೇಕಿಲ್ಲ’ ಎಂದರು.

ನಿರೀಕ್ಷೆಯಂತೆ ಮುಂಗಾರು ಮತ್ತು ಹಿಂಗಾರು ಮಳೆ ಸುರಿಯದೇ ಇದ್ದರೆ ಕಾಲುವೆಗೆ ನೀರು ಹರಿಸಲು ಸಮಸ್ಯೆಯಾಗುತ್ತದೆ. ಕಾಲುವೆಯ ಕೊನೆ ಭಾಗದ ರೈತರಿಗೂ ನೀರು ದೊರೆಯಬೇಕು ಎನ್ನುವುದು ಎಲ್ಲ ರೈತ ಮುಖಂಡರ ವಾದ. ಕಾಲುವೆಗೆ ಬಿಡುವ ನೀರಿನ ಪ್ರಮಾಣ ಆಧರಿಸಿ ಮತ್ತು ಜಲಾಶಯದಲ್ಲಿಯ ನೀರಿನ ಸಂಗ್ರಹದ ಆಧಾರದ ಮೇಲೆ ಕಾಲುವೆಗೆ ನೀರು ಹರಿದು ಬರಲಿದೆ. ಮಳೆ ಕೊರತೆಯಾದರೆ ಮತ್ತೆ ರೈತರ ಹೋರಾಟ ಆರಂಭವಾಗುವುದರಲ್ಲಿ ಸಂದೇಹವಿಲ್ಲ.

ಜಲಾಶಯದ ನೀರನ್ನು ಸದ್ಬಳಕೆ ಮಾಡಿಕೊಂಡು ಕಾಲುವೆಗೆ ಪ್ರಥಮ, ಕೈಗಾರಿಕೆಗೆ ದ್ವಿತೀಯ, ನದಿಗೆ ತೃತೀಯ ಆದ್ಯತೆ ಮೇರೆಗೆ ನೀರು ಬಿಡಬೇಕಾಗುತ್ತದೆ. ಈಗ ಇರುವ 35 ಟಿಎಂಸಿ ನೀರಿನಲ್ಲಿಯೇ ಹಂಚಿಕೆ ಲೆಕ್ಕಾಚಾರ ಮಾಡಿಕೊಂಡಿರುವ ನೀರಾವರಿ ತಜ್ಞರು, ಸಭೆಯಲ್ಲಿ ಕಾಲುವೆಗಳಿಗೆ ಎಷ್ಟು ಪ್ರಮಾಣದಲ್ಲಿ ನೀರು ಬಿಡಲಿದ್ದಾರೆ ಎಂಬ ಕೂತೂಹಲ ರೈತ ಸಮುದಾಯದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.