ADVERTISEMENT

ಏತ ನೀರಾವರಿ ಯೋಜನೆ ವರ್ಷದಲ್ಲಿ ಪೂರ್ಣಗೊಳಿಸಿದರೆ ರಾಜೀನಾಮೆ: ಶಾಸಕ ಬಯ್ಯಾಪುರ

​ಪ್ರಜಾವಾಣಿ ವಾರ್ತೆ
Published 1 ಜನವರಿ 2020, 10:20 IST
Last Updated 1 ಜನವರಿ 2020, 10:20 IST
ಅಮರೇಗೌಡ ಪಾಟೀಲ ಬಯ್ಯಾಪುರ
ಅಮರೇಗೌಡ ಪಾಟೀಲ ಬಯ್ಯಾಪುರ   

ಕುಷ್ಟಗಿ: ಕೃಷ್ಣಾ ಬಿ ಸ್ಕೀಂ ಯೋಜನೆಗೆ ಒಳಪಡುವ ಕೊಪ್ಪಳ ಏತನೀರಾವರಿ ಯೋಜನೆಯನ್ನು ಬಿಜೆಪಿ ನಾಯಕರು ಒಂದು ವರ್ಷದಲ್ಲಿ ಪೂರ್ಣಗೊಳಿಸಿದರೆ ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಲು ಸಿದ್ದನಿದ್ದೇನೆ ಎಂದು ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ಹೇಳಿದರು.

ಪಟ್ಟಣದ ಶಾಸಕರ ಕಾರ್ಯಾಲಯದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಪ್ರಚಾರದ ವೇಳೆ ಸಾರ್ವಜನಿಕರಿಗೆ ಇಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ದೊಡ್ಡನಗೌಡ ಪಾಟೀಲ್ ತಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ಒಂದು ವರ್ಷದ ಒಳಗೆ ಕೊಪ್ಪಳ ಏತನೀರಾವರಿ ಯೋಜನೆಯನ್ನು ಪೂರ್ಣಗೊಳಿಸಿ, ರೈತರ ಹೊಲಗಳಿಗೆ ನೀರು ಹರಿಸುವುದಾಗಿ ಪ್ರಚಾರ ಮಾಡಿದ್ದಾರೆ. ನಾನೂ ಸಹ ಶಾಸಕ ಸ್ಥಾನಕ್ಕೆ ಸ್ಪರ್ಧೆ ಬಯಸಿ, ಪ್ರಚಾರದಲ್ಲಿ ತೊಡಗಿದ್ದ ಸಂದರ್ಭದಲ್ಲಿ ಈ ಕುರಿತು ಮತದಾರರು ಕೇಳಿದಾಗ ಕೊಪ್ಪಳ ಏತನೀರಾವರಿ ಒಂದು ವರ್ಷದಲ್ಲಿ ಪೂರ್ಣಗೊಳ್ಳಲು ಸಾಧ್ಯವಿಲ್ಲ. ಇದು ಪೂರ್ಣಗೊಳ್ಳಬೇಕಾದರೆ, ಕನಿಷ್ಠ ಐದು ವರ್ಷವಾದರೂ ಕಳೆಯಬೇಕಾಗುತ್ತದೆ ಎಂದು ಹೇಳಿದ್ದೆ. ಆದರೆ, ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್ ನಾನು ಸುಳ್ಳು ಹೇಳುತ್ತಿದ್ದೇನೆ ಎನ್ನುತ್ತಿದ್ದಾರೆ ಎಂದರು.

ADVERTISEMENT

ಈಗಲೂ ನಾನು ಹೇಳುತ್ತೇನೆ ಈ ಯೋಜನೆ ಪೂರ್ಣಗೊಳ್ಳಬೇಕಾದರೆ, ಆಲಮಟ್ಟಿ ಆಣೆಕಟ್ಟು ಎತ್ತರಿಸಬೇಕು. ಅದಕ್ಕೆ ₹ 50ರಿಂದ ₹ 60 ಸಾವಿರ ಕೋಟಿ ಮೊತ್ತ ಬೇಕಾಗುತ್ತದೆ. ಜಲಾಶಯದ ಸುತ್ತಮುತ್ತಲಿನ ಸುಮಾರು ಹಳ್ಳಿಗಳು ಜಲಾವೃತ ವಾಗುತ್ತವೆ. ಅವುಗಳನ್ನು ಸ್ಥಳಾಂತರಿಸಲು ಸರ್ಕಾರ ಇಷ್ಟೊಂದು ಮೊತ್ತ ವ್ಯಯಿಸಬೇಕಾಗುತ್ತದೆ. ಸದ್ಯ ಸರ್ಕಾರದ ಬೊಕ್ಕಸದಲ್ಲಿ ಹಣವಿಲ್ಲ. ನೆರೆಹಾವಳಿ ಪರಿಹಾರದಿಂದ ಸರ್ಕಾರ ಆರ್ಥಿಕ ಪರಿಸ್ಥಿತಿ ಎದುರಿಸುತ್ತಿದೆ. ಜತೆಗೆ ಕೇಂದ್ರ ಸರ್ಕಾರ ಕೂಡ ರಾಜ್ಯ ಸರ್ಕಾರದ ಆರ್ಥಿಕ ಸಹಾಯಕ್ಕೆ ಸಹಕರಿಸುತ್ತಿಲ್ಲ. ಇಂಥ ಸಂದರ್ಭದಲ್ಲಿ ಇಲ್ಲಿಯ ಬಿಜೆಪಿ ನಾಯಕರು ಒಂದೇ ವರ್ಷದಲ್ಲಿ ಕೊಪ್ಪಳ ಏತನೀರಾವರಿ ಯೋಜನೆ ಪೂರ್ಣಗೊಳಿಸಿ, ರೈತರ ಹೊಲಗಳಿಗೆ ನೀರು ಹರಿಸಿದ್ದೆ ಆದರೆ, ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ, ಇಂಥ ತ್ಯಾಗಕ್ಕೂ ಸಿದ್ಧನಿದ್ದೇನೆ ಎಂದು ದೊಡ್ಡನಗೌಡರಿಗೆ ಸವಾಲು ಹಾಕಿದರು.

ಸೋಮಶೇಖರ ವೈಜಾಪೂರ, ತಾಜುದ್ದೀನ್ ದಳಪತಿ, ಚಿರಂಜಿವಿ ಹಿರೇಮಠ, ಮಂಜುನಾಥ ಕಟ್ಟಮನಿ, ವಸಂತ ಮೇಲಿನಮನಿ, ರಾಮಣ್ಣ ಬಿನ್ನಾಳ, ಪರಶುರಾಮ ನಾಗರಾಳ ಹಾಗೂ ರಾಜು ವಾಲಿಕಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.