ADVERTISEMENT

ಕೊಪ್ಪಳ: ಸುರಕ್ಷತೆ ನಿರ್ಲಕ್ಷಿಸಿ ಹಗಲಿರುಳು ಓಡಾಟ

ಸ್ಥಳೀಯತೆ ಗೊತ್ತಿಲ್ಲದಿದ್ದರೂ ವಿದೇಶಿಗರ ಯಥೇಚ್ಛ ಅಲೆದಾಟ, ಬೇಕಿದೆ ಸಿಸಿಟಿವಿ ಕಣ್ಗಾವಲು

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2025, 7:15 IST
Last Updated 9 ಮಾರ್ಚ್ 2025, 7:15 IST
ಪ್ರಕೃತಿ ಸೌಂದರ್ಯದಿಂದ ಕಂಗೊಳಿಸುವ ಗಂಗಾವತಿ ತಾಲ್ಲೂಕಿನ ಆನೆಗೊಂದಿ ಭಾಗದಲ್ಲಿ ಹರಿಯುವ ತುಂಗಭದ್ರಾ ಜಲಾಶಯ 
ಪ್ರಕೃತಿ ಸೌಂದರ್ಯದಿಂದ ಕಂಗೊಳಿಸುವ ಗಂಗಾವತಿ ತಾಲ್ಲೂಕಿನ ಆನೆಗೊಂದಿ ಭಾಗದಲ್ಲಿ ಹರಿಯುವ ತುಂಗಭದ್ರಾ ಜಲಾಶಯ    

ಕೊಪ್ಪಳ: ಜಿಲ್ಲೆಯ ಪ್ರವಾಸೋದ್ಯಮದ ರಮಣೀಯ ತಾಣ ಗಂಗಾವತಿ ತಾಲ್ಲೂಕಿನ ಆನೆಗೊಂದಿ ಹಾಗೂ ಸಾಣಾಪುರ ಭಾಗದಲ್ಲಿ ಹೊರರಾಜ್ಯ ಹಾಗೂ ವಿದೇಶಗಳ ಪ್ರಜೆಗಳು ಸ್ಥಳೀಯತೆಯ ಅಪಾಯವನ್ನೂ ಲೆಕ್ಕಿಸದೇ ಹಗಲಿರುಳು ಓಡಾಡುತ್ತಾರೆ.

ತುಂಗಭದ್ರಾ ಜಲಾಶಯದ ನೀರು ಸಾಣಾಪುರ ಭಾಗಕ್ಕೆ ಬರುವ ಹೊತ್ತಿಗಾಗಲೆ ಕವಲೊಡೆದು ಹರಿಯುತ್ತದೆ. ಸುತ್ತಲೂ ಬೆಟ್ಟಗುಡ್ಡಗಳ ಕಣ್ಮನ ಸೆಳೆಯುವ ಸಾಲು, ಕಣ್ಣುಗಳನ್ನು ಕೊರೈಸುವ ರೆಸಾರ್ಟ್‌ಗಳು, ಹೆಚ್ಚು ಹಣದ ಆಸೆಗೆ ವಿದೇಶಿ ಪ್ರವಾಸಿಗರಿಗೆ ಸಿಗುವ ಕೆಂಪು ರತ್ನಗಂಬಳಿಯ ಸ್ವಾಗತ, ಮೋಜುಮಸ್ತಿಯ ಸಂಭ್ರಮ, ನಶೆಯಲ್ಲಿ ತೇಲಾಡುವಂತೆ ಮಾಡುವ ಮದ್ಯದ ಯಥೇಚ್ಛ ಮಾರಾಟ ಈ ಎಲ್ಲ ಕಾರಣಗಳಿಂದಾಗಿ ಆನೆಗೊಂದಿಯ ಭಾಗ ಪ್ರವಾಸಿಗರಿಗೆ ಸ್ವರ್ಗದಂತೆ ಕಾಣುತ್ತದೆ.

ತುಂಗಭದ್ರಾ ನದಿಯ ಜಿಲ್ಲೆಯ ಭಾಗದಲ್ಲಿ ಗಂಗಾವತಿ ತಾಲ್ಲೂಕು ವ್ಯಾಪ್ತಿಯ ಐತಿಹಾಸಿಕ ಸ್ಮಾರಕಗಳು, ದೇವಸ್ಥಾನಗಳು ಇವೆ. ಆ ಭಾಗದಲ್ಲಿ ಹೊಸಪೇಟೆ ತಾಲ್ಲೂಕು ವ್ಯಾಪ್ತಿಯ ಹಂಪಿಯಿದೆ. ವಿಜಯನಗರ ಸಾಮ್ರಾಜ್ಯದ ವೈಭವ ಹಾಗೂ ಅಲ್ಲಿನ ಇತಿಹಾಸ ತಿಳಿದುಕೊಳ್ಳುವ ಉಮೇದಿಯಿಂದ ಅನೇಕ ದೇಶಗಳಿಂದ ಮತ್ತು ದೇಶದ ವಿವಿಧ ರಾಜ್ಯಗಳಿಂದ ‍ಪ್ರವಾಸಿಗರು ಬರುವುದು ಮೊದಲಿನಿಂದಲೂ ಇದೆ. ಹಂಪಿಯ ಪರಿಸರದ ಸೊಬಗು ಒಂದಾದರೆ ಆನೆಗೊಂದಿ ಹಾಗೂ ಸಾಣಾಪುರ ಭಾಗದ ನೀರಿನ ರಮಣೀಯತೆ, ಕತ್ತಲಾಗುತ್ತಿದ್ದಂತೆ ತೆರೆದುಕೊಳ್ಳುವ ಮೋಜಿನ ಲೋಕ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ADVERTISEMENT

ಅಷ್ಟೇ ಅಲ್ಲ; ಅಪಾರ ಪ್ರಮಾಣದಲ್ಲಿ ಪ್ರವಾಸಿಗರು ಬರುವುದು ಸ್ಥಳೀಯರಲ್ಲಿ ಹುಮ್ಮಸ್ಸು ತುಂಬಿಸುತ್ತದೆ. ವ್ಯಾಪಾರಿಗಳಿಗೆ ದೇಶಿ ‍ಪ್ರವಾಸಿಗರಿಗಿಂತ ಭರಪೂರವಾಗಿ ಹಣ ಖರ್ಚು ಮಾಡುವ ವಿದೇಶಿ ಪ್ರವಾಸಿಗರು ಬಂದರೆ ಸಾಕಷ್ಟು ಖುಷಿಯಾಗುತ್ತದೆ. ಎಲ್ಲೆಂದರಲ್ಲಿ ಸುಲಭವಾಗಿ ಬೈಕ್‌ಗಳು ಬಾಡಿಗೆ ಸಿಗುವುದಿಂದ ವಿದೇಶಿಗರು ಬೈಕ್‌ ಪಡೆದು ಹಂಪಿ, ಆನೆಗೊಂದಿ, ಪಂಪಾಸರೋವರ, ಸಾಣಾಪುರ, ಅಂಜನಾದ್ರಿ ಹೀಗೆ ಅನೇಕ ತಾಣಗಳಲ್ಲಿ ಓಡಾಡುತ್ತಾರೆ. ಸಂಜೆಯಾಗುತ್ತಿದ್ದಂತೆಯೇ ತಮ್ಮ ’ಸುಖದ ಲೋಕ’ ಸಂಭ್ರಮಿಸಲು ಅಣಿಯಾಗುತ್ತಾರೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ.

ಸ್ಥಳೀಯತೆಯ ಸಮಸ್ಯೆಗಳು ಮತ್ತು ಎಲ್ಲಿ ಅಪಾಯವಿದೆ ಎನ್ನುವ ಮುಂಜಾಗ್ರತಾ ಕ್ರಮದ ಮಾಹಿತಿ ಇಲ್ಲದೇ ಇರುವುದರಿಂದ ಸ್ಥಳೀಯರು ಹೇಳಿದ ಮಾತುಗಳೇ ಪ್ರವಾಸಿಗರಿಗೆ ವೇದವಾಕ್ಯದಂತೆ ಇರುತ್ತವೆ. ಇನ್ನು ಕೆಲವರು ಸಾಮಾಜಿಕ ತಾಣಗಳಲ್ಲಿ ಸಾಹಸ ಮೆರೆಯಲು ಅಪಾಯಕ್ಕೆ ಆಹ್ವಾನಿಸಿಕೊಳ್ಳುವ ಘಟನೆಗಳು ಕೂಡ ಹಿಂದೆ ನಡೆದಿವೆ. ಕೆಲವು ದಿನಗಳ ಹಿಂದೆಯಷ್ಟೇ ಅಪಾಯವನ್ನೂ ಲೆಕ್ಕಿಸಿದೇ ಹೈದರಾಬಾದ್‌ನ ವೈದ್ಯ 20 ಅಡಿ ಎತ್ತರದಿಂದ ಜಿಗಿದು ಪ್ರಾಣವನ್ನೇ ಕಳೆದುಕೊಂಡಿದ್ದಳು.

ಕೊಪ್ಪಳ ಹಾಗೂ ಹೊಸಪೇಟೆ ಮಾರ್ಗದ ಮಧ್ಯದಲ್ಲಿ ನೂರಾರು ಕಾರ್ಖಾನೆಗಳಿವೆ. ಅವುಗಳಲ್ಲಿ ಕೆಲಸ ಮಾಡುವ ಹೊರರಾಜ್ಯಗಳ ಉದ್ಯೋಗಿಗಳ ನೆರವು ಪಡೆದು ಅಲ್ಲಿಂದ ಇಲ್ಲಿಗೆ ಮೋಜು ಮಸ್ತಿಗಾಗಿ ಯುವಜನತೆ ಸಾಕಷ್ಟು ಸಂಖ್ಯೆಯಲ್ಲಿ ಬರುತ್ತಾರೆ. ಸ್ಥಳೀಯತೆ ಅಪಾಯದ ಬಗ್ಗೆ ಅರಿವಿಲ್ಲದ ಜಾಗಗಳಲ್ಲಿ ಹಗಲಿರುಳು ಓಡಾಡುತ್ತಾರೆ. ಬೆಟ್ಟ, ಮರಗಳ ಸಾಲು, ಕಡಿದಾದ ರಸ್ತೆ, ದಿಬ್ಬ ಹೀಗೆ ಅನೇಕ ಕಡೆ ಬೈಕ್‌ಗಳಲ್ಲಿ ಅಲೆದಾಡುತ್ತಾರೆ. ಹೀಗಾಗಿ ಮೇಲಿಂದ ಮೇಲೆ ಪ್ರವಾಸಿಗರ ಮೇಲೆ ಹಲ್ಲೆ, ಜೀವ ಕಳೆದುಕೊಳ್ಳುವಂಥ ಘಟನೆಗಳು ನಡೆಯುತ್ತಲೇ ಇವೆ. ಪ್ರಮುಖ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳು ಇವೆ. ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುವ ಪ್ರದೇಶಗಳ ಮೇಲೂ ಕಣ್ಗಾವಲು ಇರಿಸಬೇಕಾದ ಅಗತ್ಯವಿದೆ ಎನ್ನುವುದು ಪ್ರವಾಸಿಗರ ಆಗ್ರಹವಾಗಿದೆ. 

ಡಾ. ರಾಮ್‌ ಎಲ್‌. ಅರಸಿದ್ಧಿ
ಮತ್ತೊಬ್ಬ ಆರೋಪಿಗಾಗಿ ಹುಡುಕಾಟ
ಗಂಗಾವತಿ: ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು ಇನ್ನೊಬ್ಬ ಆರೋಪಿಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ರಾಮ್‌ ಎಲ್‌. ಅರಸಿದ್ಧಿ ಹೇಳಿದ್ದಾರೆ. ಇದಕ್ಕಾಗಿ ಆರು ತಂಡಗಳನ್ನು ರಚಿಸಲಾಗಿತ್ತು. ‘ಬಂಧಿತ ಆರೋಪಿಗಳು ಹಿಂದೆ ಅಪರಾಧ ಪ್ರಕರಣಗಳಲ್ಲಿ ಬಾಗಿಯಾದ ಇತಿಹಾಸವಿದೆಯೇ ಎನ್ನುವುದನ್ನು ಪರಿಶೀಲಿಸಲಾಗುತ್ತಿದೆ’ ಎಂದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹೇಮಂತಕುಮಾರ್ ಡಿವೈಎಸ್‌ಪಿ ಸಿದ್ದಲಿಂಗಪ್ಪಗೌಡ ಪೋಲಿಸ್ ಪಾಟೀಲ್ ಗ್ರಾಮೀಣ ಠಾಣೆ ಪೊಲೀಸ್‌ ಇನ್‌ಸ್ಟೆಕ್ಟರ್‌ ಸೋಮಶೇಖರ ಜುಟ್ಟಲ್ ನಗರಠಾಣೆ ಪಿಐ ಪ್ರಕಾಶ ಮಾಳೆ ಹಾಗೂ ಸಿಬ್ಬಂದಿ ಇದ್ದರು.  ‘ಸ್ವಲ್ಪ ಕತ್ತಲಾದರೂ ಓಡಾಡಲು ಹಿಂದೇಟು ಹಾಕುವ ಸ್ಥಳದಲ್ಲಿ ಪ್ರವಾಸಿಗರು ಸ್ಥಳೀಯರ ಹಾಗೂ ಮಧ್ಯವರ್ತಿಗಳ ನೆರವು ಪಡೆದು ಹುಚ್ಚು ಸಾಹಸಗಳನ್ನು ಮಾಡುತ್ತಾರೆ. ನಕ್ಷತ್ರಗಳನ್ನು ನೋಡುವ ನೆಪದಲ್ಲಿ ಬೆಳಗಿನ ಜಾವದ ತನಕವೂ ಸಮಯ ಕಳೆಯುತ್ತಾರೆ. ಆದ್ದರಿಂದ ಇಂಥ ಘಟನೆಗಳು ನಡೆಯುತ್ತಿವೆ’ ಎನ್ನುತ್ತಾರೆ ಸ್ಥಳೀಯರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.