
ಗಂಗಾವತಿ: ತಾಲ್ಲೂಕಿನ ಸಾಣಾಪುರ, ಹನುಮನಹಳ್ಳಿ, ಆನೆಗೊಂದಿ ಭಾಗದ ಪ್ರವಾಸಿ ತಾಣಗಳ ವೀಕ್ಷಣೆಗೆ ಬರುವ ವಿದೇಶಿ ಮತ್ತು ಸ್ವದೇಶಿ ಪ್ರವಾಸಿಗರಿಗೆ ಸ್ಥಳೀಯರು ಪರವಾನಗಿ ಇಲ್ಲದೇ ಬೈಕ್‌ಗಳನ್ನು ಬಾಡಿಗೆ ನೀಡುತ್ತಿರುವ ಆರೋಪ ಕೇಳಿಬಂದಿದೆ. ಸವಾರರ ಅಡ್ಡಾದಿಡ್ಡಿ ಚಾಲನೆಯಿಂದ ಅಪಘಾತಕ್ಕೀಡಾಗಿ ಆಸ್ಪತ್ರೆ ಸೇರುವ ಘಟನೆಗಳು ನಡೆಯುತ್ತಿವೆ.
ಅಕ್ಟೋಬರ್ ತಿಂಗಳಿನಿಂದ ಹಂಪಿ, ಅಂಜನಾದ್ರಿ, ಆನೆಗೊಂದಿ ಭಾಗದ ನಿಸರ್ಗ ಹಚ್ಚಹಸಿರಿನಿಂದ ಕೂಡಿ, ನೋಡುಗರ ಕಣ್ಮನ ಸೆಳೆಯುತ್ತದೆ. ಈ ಅವಧಿಯಲ್ಲಿ ಕೆಲವರು ಅನಧಿಕೃತ ರೆಸಾರ್ಟ್‌ಗಳನ್ನು ನಿರ್ಮಿಸಿಕೊಂಡು, ವಾರಾಂತ್ಯಕ್ಕೆ ಬರುವ ಪ್ರವಾಸಿಗರಿಗೆ ಬಾಡಿಗೆ ರೂಪದಲ್ಲಿ ರೂಮ್, ಬೈಕ್ ನೀಡಿ, ಮೋಜು-ಮಸ್ತಿಗೆ ಆಸ್ಪದ ನೀಡಲಾಗುತ್ತಿದ್ದಾರೆ.
ಎಲ್ಲೆಲ್ಲಿ ಬೈಕ್ ಬಾಡಿಗೆ?: ಸಾಣಾಪುರ ಗ್ರಾಮದ ಪಂಚಾಯ್ತಿ ಎದುರು, ಕೆರೆ ರಸ್ತೆ, ರಾಮಬಾಬು ಸಲೂನ್ ಶಾಪ್ ಎದುರು ಮತ್ತು 100 ಮೀ ಅಂತರದಲ್ಲಿ ಹಾಗೇ ಸಾಣಾಪುರ ಬಸಾಪುರ, ಹನುಮನಹಳ್ಳಿ, ವಿರೂಪಾಪುರಗಡ್ಡಿ, ಆನೆಗೊಂದಿ ಗ್ರಾಮದ ರೆಸಾರ್ಟ್, ಹೋಂಸ್ಟೇ, ಹೋಟೆಲ್, ಆಟೊ ಚಾಲಕರ ಬಳಿ ಸೇರಿ ಹಲವೆಡೆ ದಿನಕ್ಕೆ ₹500ರಿಂದ ₹1 ಸಾವಿರಕ್ಕೆ ಬೈಕ್ ಬಾಡಿಗೆ ಸಿಗುತ್ತವೆ. ಬಹುತೇಕರಿಗೆ ಬಾಡಿಗೆ ನೀಡಲು ಪರವಾನಗಿಯೇ ಇರುವುದಿಲ್ಲ ಎನ್ನುವುದು ಗುಟ್ಟಾಗಿ ಉಳಿದಿಲ್ಲ.
ವಾಹನ ಚಲಾಯಿಸಲು ಬರದವರಿಗೆ ಬೈಕ್: ವಿದೇಶಿಗರಿಗೆ ಭಾರತದ ಬೈಕ್‌ಗಳನ್ನು ಓಡಿಸಿದ ಅನುಭವವಿರುವಿದಿಲ್ಲ್ಲಗೇರ್ ಬೈಕ್ ಹೊರತುಪಡಿಸಿ ಸ್ಕೂಟಿ, ಹೊಂಡಾನವಿ ಬೈಕ್ ಬಾಡಿಗೆ ಪಡೆದು ಸಂಚರಿಸುತ್ತಾರೆ. ಈ ವಾಹನಗಳಿಗೆ ಗೇರ್ ಇರುವುದಿಲ್ಲ. ಪ್ರವಾಸಿಗರು ಮನಸ್ಸಿಗೆ ಬಂದಷ್ಟು ಎಕ್ಸಲೈಟರ್ ತಿರುಗಿಸಿ ಓಡಿಸುತ್ತಾರೆ. ತಿರುವು, ರಸ್ತೆಉಬ್ಬು, ಜನಸಂದಣಿ ಪ್ರದೇಶ, ಎದುರು ಬೃಹತ್ ವಾಹನಗಳು ಬಂದಾಗ ನಿಯಂತ್ರಿಸಲಾಗದೇ ಜನರಿಗೆ ಡಿಕ್ಕಿಹೊಡೆದು ಅಪಘಾತ ಮಾಡುತ್ತಿದ್ದಾರೆ.
ದಾಖಲೆ ಇರಲ್ಲ: ಬಾಡಿಗೆ ನೀಡುವ ಬಹುತೇಕ ಬೈಕ್‌ಗಳಿಗೆ ವಿಮೆ, ಬೈಕ್ ಮಾಲೀಕನ ಹೆಸರಲ್ಲಿ ನೋಂದಣಿ ಇರಲ್ಲ. ಯಾವ ವರ್ಷದ ಬೈಕ್ ಎಂಬ ದಾಖಲೆಗಳಿರಲ್ಲ. ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ ದೂರದ ಮಾತು. ಎಲ್ಲವೂ ಸೆಕೆಂಡ್ ಹ್ಯಾಂಡ್ ಬೈಕ್‌ಗಳೇ ಆಗಿರುತ್ತವೆ. ಬೈಕ್ ನೀಡುವವರು ಕೂಡ ಪ್ರವಾಸಿಗರ ಬಳಿ ಚಾಲನಾ ಪರವಾನಗಿ ಪರಿಶೀಲಿಸಲ್ಲ ಎನ್ನುವುದು ಸಾರ್ವಜನಿಕರ ದೂರು.
ಪೊಲೀಸರಿಂದ ಇಲ್ಲ ತಡೆ: ಸಾಣಾಪುರ ಭಾಗದಲ್ಲಿ ಪರವಾನಗಿ ಇಲ್ಲದೆ ಬೈಕ್ ಬಾಡಿಗೆ ನೀಡುತ್ತಿರುವ ಬಗ್ಗೆ ಸಂಚಾರ ಮತ್ತು ಗ್ರಾಮೀಣ ಪೊಲೀಸ್ ಠಾಣೆಗೆ, ಸಾಣಾಪುರ ಭಾಗದಲ್ಲಿ ಕರ್ತವ್ಯ ನಿರ್ವಹಿಸುವ ಬೀಟ್ ಪೊಲೀಸರಿಗೆ ಮಾಹಿತಿ ಇದೆ. ಆದರೂ ಇವುಗಳಿಗೆ ಕಡಿವಾಣ ಹಾಕುತ್ತಿಲ್ಲ. ಕೆಲ ತಿಂಗಳುಗಳಿಂದ ಹಲವು ಅಪಘಾತಗಳು ನಡೆದರೂ ಕ್ರಮವಾಗಿಲ್ಲ.
ಪ್ರವಾಸಿಗರು ಬಾಡಿಗೆ ಬೈಕ್‌ಗಳಲ್ಲಿ ಹಗಲು ರಾತ್ರಿ ಎನ್ನದೆ ಬೆಟ್ಟ-ಗುಡ್ಡ, ನಿರ್ಜನ ಪ್ರದೇಶಗಳಿಗೆ ತೆರಳಿ ರೇವ್ ಪಾರ್ಟಿ, ಕೈಮಿಂಗ್, ಫೋಟೊಗ್ರಫಿ ಸೇರಿ ಗಾಂಜಾ, ಎರಾಯಿನ್‌ನಂತಹ ಮಾದಕ ವಸ್ತುಗಳ ಸೇವಿಸಿ, ಸಂಕಷ್ಟ ಎದುರಿಸಿದ ಘಟನೆಗಳು ನಡೆದಿದ್ದು ಪ್ರಕರಣಗಳು ದಾಖಲಾಗಿವೆ.
ವಿದೇಶಿ ಪ್ರಜೆ ಸಹೋದರನಿಗೆ ಡಿಕ್ಕಿ ಹೊಡೆದಿದ್ದು ಬಲಗಾಲು ತೀವ್ರವಾಗಿ ಗಾಯಗೊಂಡಿದೆ. ಯಾವ ತಪ್ಪು ಮಾಡದೇ ಶಿಕ್ಷೆ ಅನುಭವಿಸುತ್ತಿದ್ದಾನೆ. ಅವನ ಮುಂದಿನ ಜೀವನಕ್ಕೆ ಯಾರು ಹೊಣೆ? ವಿದೇಶಿ ಪ್ರಜೆನಾ ಬೈಕ್ ಬಾಡಿಗೆ ನೀಡಿದ ಮಾಲೀಕನಾ?ಯೋಹಾನಕುಮಾರ, ಸಾಣಾಪುರ ನಿವಾಸಿ
ವಿದೇಶಿ ಮತ್ತು ಸ್ವದೇಶಿ ಪ್ರವಾಸಿಗರು ವಾಹನ ಚಲಾಯಿಸುತ್ತಿದ್ದರೆ ರಸ್ತೆಗೆ ಬರಲು ಭಯವಾಗುತ್ತದೆ. ಅವರಿಗೆ ವಾಹನ ಚಲಾಯಿಸಲು ಬರುವುದಿಲ್ಲ. ಪರವಾನಗಿ ಇಲ್ಲದೆ ಸ್ಥಳೀಯರು ಬೈಕ್ ಬಾಡಿಗೆ ನೀಡುತ್ತಿದ್ದಾರೆ. ಪೊಲೀಸರು ಏನೂ ಮಾಡುತ್ತಿದ್ದಾರೆ?ಹಾರನಾಯಕ ಗಂಗಾವತಿ, ನಿವಾಸಿ
ಕೆಲವು ದ್ವಿಚಕ್ರ ವಾಹನಗಳ ಮಾಲೀಕರು ಆರ್‌ಟಿಒನಿಂದ ಅನುಮತಿ ಪಡೆದುಕೊಂಡಿದ್ದಾರೆ. ಅನಧಿಕೃತವಾಗಿ ವಿದೇಶಿಗರಿಗೆ ಬೈಕ್ ನೀಡಿದ್ದು ಕಂಡು ಬಂದರೆ ಕ್ರಮ ಕೈಗೊಳ್ಳಲಾಗುವುದು. ಜಿ.ಎಸ್. ನ್ಯಾಮಗೌಡ ಗಂಗಾವತಿ ಉಪವಿಭಾಗದ ಡಿವೈಎಸ್‌ಪಿ
ಪ್ರಕರಣ ಮುಚ್ಚುವ ರೆಸಾರ್ಟ್ ಮಾಲೀಕರು ಈಚೆಗೆ ಸಾಣಾಪುರ ಗ್ರಾಮದ ಗ್ರಾ.ಪಂ ಬಳಿ ಶಾಂತಕುಮಾರ ಎನ್ನುವ ಯುವಕನೊಬ್ಬ ಮೇಸ್ತ್ರಿ ಕೆಲಸದ ಬಗ್ಗೆ ಸಹ ವ್ಯಕ್ತಿಯೊಂದಿಗೆ ಮಾತನಾಡುತ್ತಿದ್ದಾಗ ವಿದೇಶಿ ಪ್ರಜೆಯೊಬ್ಬ ನಿರ್ಲಕ್ಷ್ಯತನದಿಂದ ಬೈಕ್ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದಿದ್ದು ಬಲಗಾಲಿಗೆ ತೀವ್ರ ಸ್ವರೂಪದ ಗಾಯವಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಘಟನೆ ಮಾಸುವ ಮುನ್ನವೇ ಹನುಮನಹಳ್ಳಿ ಗ್ರಾಮದಲ್ಲಿ 55 ವರ್ಷ ಮಹಿಳೆಯೊಬ್ಬರಿಗೆ ವಿದೇಶಿ ಮಹಿಳೆ ನಿರ್ಲಕ್ಷ್ಯತನದಿಂದ ಬೈಕ್ ಚಲಾಯಿಸಿಕೊಂಡು ಡಿಕ್ಕಿ ಹೊಡೆದಿದ್ದು ಕೈ ಮುರಿದಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ನಡುವೆಯೇ ರೆಸಾರ್ಟ್ ಮಾಲೀಕರು ಅಪಘಾತ ಪ್ರಕರಣಗಳು ಬಯಲಿಗೆ ಬಂದರೆ ಉದ್ಯಮಕ್ಕೆ ಪೆಟ್ಟಾಗುತ್ತದೆಂದು ಮಹಿಳೆಯ ಕುಟುಂಬಸ್ಥರ ಬಳಿಗೆ ತೆರಳಿ ಚಿಕಿತ್ಸೆಗೆ ತುಸು ಹಣನೀಡಿ ಪ್ರಕರಣ ಠಾಣೆ ಮೆಟ್ಟಿಲೇರದಂತೆ ನೋಡಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.