ADVERTISEMENT

ಸೋಲಾರ್ ಪ್ಲ್ಯಾಂಟ್‌ ಹೆಸರಲ್ಲಿ ರೈತರಿಗೆ ವಂಚನೆ: ದೂರು

ಅಕ್ರಮ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪನೆ; ತನಿಖೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2020, 14:16 IST
Last Updated 15 ಸೆಪ್ಟೆಂಬರ್ 2020, 14:16 IST
 ವಕೀಲ ಹನಮಂತರಾವ್ ಕೆಂಪಳ್ಳಿ ಹಾಗೂ ಬಸವರಾಜ ಬೊಮ್ಮನಾಳ ಅವರು ದಾಖಲೆಗಳನ್ನು ಪ್ರದರ್ಶಿಸಿದರು
 ವಕೀಲ ಹನಮಂತರಾವ್ ಕೆಂಪಳ್ಳಿ ಹಾಗೂ ಬಸವರಾಜ ಬೊಮ್ಮನಾಳ ಅವರು ದಾಖಲೆಗಳನ್ನು ಪ್ರದರ್ಶಿಸಿದರು   

ಯಲಬುರ್ಗಾ: ತಾಲ್ಲೂಕಿನ ಅನೇಕ ಗ್ರಾಮಗಳಲ್ಲಿ ಕಾನೂನು ಬಾಹಿರವಾಗಿಪವನ ವಿದ್ಯುತ್ ಹಾಗೂ ಸೋಲಾರ್ ವಿದ್ಯುತ್ ಘಟಕಗಳನ್ನು ಸ್ಥಾಪಿಸಲಾಗಿದ್ದು, ಈ ಬಗ್ಗೆ ತನಿಖೆ ನಡೆಸಬೇಕು ಎಂದು ಸಾಮಾಜಿಕ ಕಾರ್ಯಕರ್ತ, ವಕೀಲ ಹನಮಂತರಾವ್ ಕೆಂಪಳ್ಳಿ ಒತ್ತಾಯಿಸಿದ್ದಾರೆ.

ಪಟ್ಟಣದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭೂ ಕಾಯ್ದೆ ಅಡಿ ವಿದ್ಯುತ್ ಘಟಕಗಳ ಸ್ಥಾಪನೆ ಅಕ್ರಮವಾಗಿದೆ. ಘಟಕದವರು ಕೃಷಿ ಭೂಮಿಯನ್ನು ಕಡಿಮೆ ಬೆಲೆಗೆ ಖರೀದಿಸಿ ಮೋಸ ಮಾಡಿದ್ದಾರೆ. ಕೈಗಾರಿಕಾ ಉದ್ದೇಶಕ್ಕಾಗಿ ಖರೀದಿಸುವಾಗ ಮೂಲ ಬೆಲೆಗಿಂತಲೂ ನಾಲ್ಕು ಪಟ್ಟು ಅಧಿಕ ಹಣ ನೀಡಬೇಕು ಎಂಬ ನಿಯಮವಿದೆ. ಆದರೆ ಯಾವೊಂದು ನಿಯಮಗಳನ್ನು ಸೋಲಾರ್ ಕಂಪೆನಿಗಳು ಪಾಲನೆ ಮಾಡಿಲ್ಲ ಎಂದು ದೂರಿದರು.

ತಾಲ್ಲೂಕಿನಲ್ಲಿ ಕೃಷಿ ಚಟುವಟಿಕೆಗೆ ಯೋಗ್ಯವಾದ ಜಮೀನನ್ನೇ 2015 ರಿಂದ 2019 ರವರೆಗೆ ಖರೀದಿಸಿದ್ದಾರೆ. ಉತ್ತರ ಭಾರತ ಮೂಲದ ಕಂಪನಿ ಮಾಲೀಕರೊಂದಿಗೆ ಜಿಲ್ಲೆಯ ಒಟ್ಟು 24 ಇಲಾಖೆಯ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಧಿಕಾರಿಗಳು, ಅಧ್ಯಕ್ಷರು ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಸುಮಾರು ₹ 150 ಕೋಟಿಗೂ ಅಧಿಕ ಮೊತ್ತದ ಅಕ್ರಮ ವ್ಯವಹಾರ ಇದಾಗಿದೆ ಎಂದು ಆರೋಪಿಸಿದರು.

ADVERTISEMENT

ಈ ಬಗ್ಗೆ ಶಾಸಕ ಹಾಲಪ್ಪ ಆಚಾರ ಹಾಗೂ ಮಾಜಿ ಶಾಸಕ ಬಸವರಾಜ ರಾಯರಡ್ಡಿ ಅವರು ಕೂಡ ಗಮನಹರಿಸುತ್ತಿಲ್ಲ. ಮಾಹಿತಿ ಹಕ್ಕು ಅಡಿ ತಹಶೀಲ್ದಾರ್‌, ಪಿಡಿಒ ಹಾಗೂ ಇನ್ನಿತರ ಅಧಿಕಾರಿಗಳಿಗೆ ಮಾಹಿತಿ ಕೇಳಿದರೆ. ಮಾಹಿತಿ ಇಲ್ಲ ಎಂದೇ ಉತ್ತರಿಸುತ್ತಿದ್ದಾರೆ. ಹಾಗಾದರೆ ತಾಲ್ಲೂಕಿನಲ್ಲಿ ವಿದ್ಯುತ್ ಘಟಕಗಳು ಯಾವ ಆಧಾರದ ಮೇಲೆ ಇಲ್ಲಿ ತಲೆ ಎತ್ತುತ್ತಿವೆ ಎಂಬ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಉತ್ತರಿಸಬೇಕು ಎಂದು ಒತ್ತಾಯಿಸಿದರು.

ಯುವ ಹೋರಾಟಗಾರ ಬಸವರಾಜ ಬೊಮ್ಮನಾಳ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.