ಗಂಗಾವತಿ: ತಾಲ್ಲೂಕಿನ ಆನೆಗೊಂದಿ, ಹನುಮನಹಳ್ಳಿ, ಸಾಣಾಪುರ ಭಾಗದ ಕಂದಾಯ ಭೂಮಿಗಳಲ್ಲಿ ತಲೆಯೆತ್ತಿರುವ ಅನಧಿಕೃತ ರೆಸಾರ್ಟ್‌ಗಳ ತೆರವಿಗೆ ಹಂಪಿ ಅಭಿವೃದ್ಧಿ ಪ್ರಾಧಿಕಾರವು ಜುಲೈ 16ರಂದು ಮುಹೂರ್ತ ನಿಗದಿಪಡಿಸಿದೆ. ಆದರೆ ರೆಸಾರ್ಟ್‌ಗಳ ಮಾಲೀಕರು ಜನಪ್ರತಿನಿಧಿಗಳನ್ನು ಭೇಟಿ ಮಾಡಿ, ತೆರವಿಗೆ ಮುಂದಾಗದಂತೆ ಅಧಿಕಾರಿಗಳಿಗೆ ಒತ್ತಡ ಹೇರಲಾಗುತ್ತಿದೆ.
ಸಾಣಾಪುರ, ಆನೆಗೊಂದಿ ಭಾಗದಲ್ಲಿ 5 ವರ್ಷಗಳಿಂದ ಕಂದಾಯ, ಸರ್ಕಾರಿ, ಅರಣ್ಯ, ನದಿಪಾತ್ರಗಳಲ್ಲಿ ಅನಧಿಕೃತ ರೆಸಾರ್ಟ್‌ಗಳು ತಲೆಯೆತ್ತಿವೆ. ರೆಸಾರ್ಟ್ ಮಾಲೀಕರು ನೆಪಕ್ಕೆ ಪ್ರವಾಸೋದ್ಯಮ ಅಭಿವೃದ್ಧಿ ಎನ್ನುತ್ತಿದ್ದೂ, ಇಲ್ಲಿ ನಡೆಸೋದೆಲ್ಲ ಮೋಜು-ಮಸ್ತಿ, ನಶೆ ಬರಿಸುವ ವಸ್ತುಗಳ ಸೇವನೆಯ ಚಟುವಟಿಕೆಗಳು ನಡೆದಿವೆ.
ಸಾಣಾಪುರ, ಆನೆಗೊಂದಿ ಭಾಗದಲ್ಲಿ 5 ವರ್ಷಗಳಲ್ಲಿ ಹಲವು ಬಾರಿ ಅನಧಿಕೃತ ರೆಸಾರ್ಟ್‌ಗಳನ್ನು ತೆರವುಗೊಳಿಸಿ, ಮತ್ತೆ ನಿರ್ಮಿಸದಂತೆ ಸೂಚಿಸಲಾಗಿದೆ. ಆದರೂ ರಾಜಕಾರಣಿಗಳ ಪ್ರಭಾವ ಬಳಸಿ, ಅಧಿಕಾರಿಗಳಿಗೆ ಲಂಚ ನೀಡಿ ಮತ್ತೆ, ಮತ್ತೆ ಅನಧಿಕೃತ ರೆಸಾರ್ಟ್ ನಿರ್ಮಿಸಿಕೊಂಡು, ಮಾಲೀಕರು ವ್ಯವಹಾರ ನಡೆಸುತ್ತಿದ್ದಾರೆ.
ವಾರಾಂತ್ಯ, ತಿಂಗಳಾಂತ್ಯ, ಹಬ್ಬ-ಹರಿದಿನ, ಹೊಸವರ್ಷ, ಜನ್ಮದಿನ ಎಂದು ವಿವಿಧ ದಿನಗಳಂದು ಇವೆಂಟ್ ರಚಿಸಿಕೊಂಡು, ರಾತ್ರಿಯೆಲ್ಲ ಪ್ರವಾಸಿಗರನ್ನು ಮದ್ಯದ ನಶೆಯಲ್ಲಿ ತೇಲುವಂತೆ ಮಾಡಿ, ರೆಸಾರ್ಟ್ ಮಾಲೀಕರು ಲಕ್ಷಾಂತರ ಹಣ ಸಂಪಾದಿಸುತ್ತಿದ್ದಾರೆ. ಇದಕ್ಕೆ ಜಿಲ್ಲಾಡಳಿತ, ಜೆಸ್ಕಾಂ, ತಾಲ್ಲೂಕು ಆಡಳಿತ ಆಧಿಕಾರಿಗಳು ಬೆಂಬಲ ನೀಡುತ್ತಿದ್ದು, ಗಾಂಜಾ, ಅತ್ಯಾಚಾರ ಪ್ರಕರಣಗಳು ನಡೆಯುತ್ತಲೇ ಇವೆ.
ಘಟನೆಗಳು ಗಂಭೀರವಾದಾಗ ಮಾತ್ರ ಪೊಲೀಸ್ ಇಲಾಖೆ, ತಾಲ್ಲೂಕು ಆಡಳಿತ ನೆಪಕ್ಕೆ ರೆಸಾರ್ಟ್‌ಗಳನ್ನು ಪರಿಶೀಲಿಸಿ, ವರದಿ ಮಾಡಿಕೊಂಡು ಎಚ್ಚರಿಕೆ ನೀಡುತ್ತಿದೆಯೇ ಹೊರತು, ಅಕ್ರಮಗಳ ಶಾಶ್ವತ ಕಡಿವಾಣಕ್ಕೆ ಈವರೆಗೆ ಸೂಕ್ತ ಕ್ರಮಕೈಗೊಳ್ಳುತ್ತಿಲ್ಲ. ಹೀಗಾಗಿ ಸಾಣಾಪುರ, ಆನೆಗೊಂದಿ ಭಾಗದಲ್ಲಿ ಅನೈತಿಕ ಚಟುವಟಿಕೆಗಳ ಪ್ರಕರಣಗಳು ಮರುಕಳಿಸುತ್ತಲೇ ಇವೆ.
ಈ ಬಾರಿಯಾದರೂ ತೆರವಾಗುವವೇ: 2023 ರಿಂದ 2024ರವರೆಗೆ ಅನಧಿಕೃತ ರೆಸಾರ್ಟ್‌ಗಳ ತೆರವಿಗೆ ಹಲವು ಬಾರಿ ನೋಟಿಸ್ ನೀಡಿದ್ದು ಬಿಟ್ಟರೆ, ರೆಸಾರ್ಟ್ ತೆರವಾಗಿಲ್ಲ. ನೆಪಕ್ಕೆ ವಿದ್ಯುತ್ ಕಡಿತಗೊಳಿಸಲಾಗುತ್ತಿತ್ತು. ಮತ್ತೆ ಕೂಡಲೇ ವಿದ್ಯುತ್ ಸ್ಥಾಪಿಸಿಕೊಳ್ಳುತ್ತಿದ್ದರು. ಹೀಗಾಗಿ ಈ ಬಾರಿಯಾದರೂ ಅಧಿಕಾರಿಗಳು ರೆಸಾರ್ಟ್‌ಗಳನ್ನು ತೆರವುಗೊಳಿಸುವರೇ ಎಂದು ಹಿಂದೂಪರ, ಕರವೇ ಸಂಘಟನೆಗಳು ಪ್ರಶ್ನಿಸಿವೆ.
ರೆಸಾರ್ಟ್ ತೆರವಿಗೆ ಕೊಟ್ಟರು ಸ್ವಾಮಿ ಕೇಂದ್ರ ಕೋರ್ಟ್ ಮೊರೆ: ವಿಜಯನಗರ ಸಾಮ್ರಾಜ್ಯ ಐಹಿತ್ಯ ಕಾಪಾಡಲು ಹೊಸಪೇಟೆ ಕಲ್ಯಾಣ ಕೇಂದ್ರದವರು ಅನಧಿಕೃತ ರೆಸಾರ್ಟ್ ತೆರವಿಗೆ ಕೋರ್ಟ್ ಮೊರೆ ಹೋಗಿದ್ದು, ನ್ಯಾಯಾಲಯ ಅನಧಿಕೃತ ರೆಸಾರ್ಟ್‌ಗಳ ತೆರವಿಗೆ ಆದೇಶ ನೀಡಿದೆ. ಹಂಪಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಈ ಬಗ್ಗೆ ಜುಲೈ 11ರಂದು ಸಭೆ ನಡೆಸಿ, ಜುಲೈ 16ರಂದು, ಆನೆಗೊಂದಿ ಭಾಗದಲ್ಲಿನ ಅನಧಿಕೃತ ರೆಸಾರ್ಟ್‌ಗಳ ತೆರವಿಗೆ ದಿನಾಂಕ ನಿಗದಿಗೊಳಿಸಲಾಗಿದೆ.
ಏನೆಲ್ಲ ಸಿದ್ಧತೆ, ಜವಾಬ್ದಾರಿ: ಹಂಪಿ ಪ್ರಾಧಿಕಾರ ಹೊಸಪೇಟೆ, ಗಂಗಾವತಿ ತಹಶೀಲ್ದಾರ್‌ಗೆ ಅನಧಿಕೃತ ರೆಸಾರ್ಟ್ ತೆರವಿಗೆ ಬೇಕಾದ ಜೆಸಿಬಿ, ಹಿಟಾಚಿ ವಾಹನಗಳ ವ್ಯವಸ್ಥೆ, ಜೆಸ್ಕಾಂ ಇಲಾಖೆಗೆ ವಿದ್ಯುತ್ ಕಡಿತ ಜವಾಬ್ದಾರಿ, ಬಂದೋಬಸ್ತ್‌ಗೆ ಪೊಲೀಸ್ ಇಲಾಖೆ, ವೈದ್ಯಾಧಿಕಾರಿಗಳಿಗೆ ಆಂಬುಲೆನ್ಸ್ ವ್ಯವಸ್ಥೆ ಕಲ್ಪಿಸಲು ಸೂಚನೆ ನೀಡಿದ್ದು, ಎಲ್ಲ ಅಧಿಕಾರಿಗಳು ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಹಂಪಿ ಅಭಿವೃದ್ಧಿ ಪ್ರಾಧಿಕಾರ ಆನೆಗೊಂದಿ ಸಾಣಾಪುರ ಭಾಗದಲ್ಲಿ ಅನಧಿಕೃತ ರೆಸಾರ್ಟ್ ತೆರವಿನ ಸಿದ್ಧತೆ ಬಗ್ಗೆ ಪತ್ರ ಬರೆದಿದೆ. ನಾವು ಎಲ್ಲ ರೀತಿಯಲ್ಲಿ ಸಿದ್ಧತೆ ಕೈಗೊಂಡಿದ್ದು ತೆರವು ಕಾರ್ಯಾಚರಣೆಗೆ ಸಿದ್ಧರಿದ್ದೇವೆಯು.ನಾಗರಾಜ ತಹಶೀಲ್ದಾರ್ ಗಂಗಾವತಿ
ಅಧಿಕಾರಿಗಳು ಪ್ರತಿಬಾರಿ ಅನಧಿಕೃತ ರೆಸಾರ್ಟ್‌ಗಳ ತೆರವಿಗೆ ಆದೇಶ ನೀಡುತ್ತಾರೆ. ಆದರೆ ತೆರವುಗೊಳಿಸುವುದಿಲ್ಲ. ಈ ಬಾರಿ ಆನೆಗೊಂದಿ ಭಾಗದ ಅನಧಿಕೃತ ರೆಸಾರ್ಟ್‌ಗಳನ್ನು ಮತ್ತೆ ತಲೆ ಎತ್ತದಂತೆ ತೆರವುಗೊಳಿಸಬೇಕುಪಂಪಣ್ಣ ನಾಯಕ ಕರವೇ ಜಿಲ್ಲಾಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.