ADVERTISEMENT

ಕೊಪ್ಪಳ | ಅಕ್ರಮ ಮರಳು ವಶ: ಹೆಸರು ಉಲ್ಲೇಖಿಸದೇ ಎಫ್‌ಐಆರ್‌ ದಾಖಲು

​ಪ್ರಜಾವಾಣಿ ವಾರ್ತೆ
Published 25 ಜೂನ್ 2025, 16:14 IST
Last Updated 25 ಜೂನ್ 2025, 16:14 IST
ಹಿರೇಸಿಂಧೋಗಿ ಸಮೀಪದ ಹಿರೇಹಳ್ಳದಲ್ಲಿ ವಶಪಡಿಸಿಕೊಂಡಿದ್ದ ಮರಳು  
ಹಿರೇಸಿಂಧೋಗಿ ಸಮೀಪದ ಹಿರೇಹಳ್ಳದಲ್ಲಿ ವಶಪಡಿಸಿಕೊಂಡಿದ್ದ ಮರಳು     

ಕೊಪ್ಪಳ: ತಾಲ್ಲೂಕಿನ ಹಿರೇಸಿಂಧೋಗಿ ಗ್ರಾಮದ ಹಿರೇಹಳ್ಳ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದಿದ್ದ ಅನಧಿಕೃತ ಮರಳು ಗಣಿಗಾರಿಕೆ ಮತ್ತು ಸಾಗಾಣಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಳವಂಡಿ ಪೊಲೀಸ್‌ ಠಾಣೆಯಲ್ಲಿ ಕೊನೆಗೂ ಎಫ್‌ಐಆರ್‌ ದಾಖಲಾಗಿದ್ದು, ಯಾರ ಹೆಸರನ್ನೂ ಉಲ್ಲೇಖಿಸಿಲ್ಲ. 

ಹಿರೇಹಳ್ಳ ವ್ಯಾಪ್ತಿಯಲ್ಲಿ ನಡೆದಿದ್ದ ಅನಧಿಕೃತ ಮರಳು ಗಣಿಗಾರಿಕೆ ಕುರಿತು ಸಾರ್ವಜನಿಕರಿಂದ ಅನೇಕ ದೂರುಗಳು ಕೇಳಿಬಂದಿದ್ದವು. ಬಳಿಕ ಎಚ್ಚೆತ್ತುಕೊಂಡಿದ್ದ ಅಧಿಕಾರಿಗಳು ತಾಲ್ಲೂಕ ಮರಳು ಉಸ್ತುವಾರಿ ಸಮಿತಿಯಿಂದ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ₹2.40 ಲಕ್ಷ ರಾಜಧನದ ಮೂರು ಸಾವಿರ ಮೆಟ್ರಿಕ್‌ ಟನ್‌ನಷ್ಟು ಮರಳು ವಶಕ್ಕೆ ಪಡೆದುಕೊಂಡಿದ್ದರು.

ಬಳಿಕ ಕೊಪ್ಪಳ ತಾಲ್ಲೂಕಿನಲ್ಲಿ ಅವ್ಯಾಹತವಾಗಿ ಮರಳು ಅನಧಿಕೃತವಾಗಿ ಸಾಗಣೆ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಜಿಲ್ಲಾ ಬಿಜೆಪಿ ವತಿಯಿಂದ ಮಂಗಳವಾರ ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ರಾಮ್‌ ಎಲ್‌. ಅವರಿಗೆ ಮನವಿ ಸಲ್ಲಿಸಲಾಗಿತ್ತು. ಅಧಿಕಾರಿಗಳು ದಾಳಿ ನಡೆಸಿದ್ದರೂ ಪ್ರಕರಣ ದಾಖಲಾಗದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದರು. ಮನವಿ ಸಲ್ಲಿಸಿದ ದಿನವೇ ಎಫ್‌ಐಆರ್‌ ದಾಖಲಾಗಿದೆ. ಘಟನೆ ಜೂನ್‌ 18ರಂದು ನಡೆದಿತ್ತು. 

ADVERTISEMENT

ಗಣಿ ಮತ್ತು ಭೂವಿಜ್ಞಾನ ಇಲಾಖೆ, ಕಂದಾಯ ಇಲಾಖೆ, ಪರಿಸರ ಇಲಾಖೆ, ಅರಣ್ಯ ಇಲಾಖೆ, ಗ್ರಾಮ ಪಂಚಾಯಿತಿ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ದಾಳಿ ನಡೆಸಿದ್ದವು. 

ಈ ಕುರಿತು ಪತ್ರಿಕಾ ಪ್ರಕಟಣೆಯನ್ನೂ ನೀಡಿರುವ ಹಿರಿಯ ಭೂವಿಜ್ಞಾನಿ ಹಾಗೂ ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಸದಸ್ಯ ಕಾರ್ಯದರ್ಶಿ ಪುಷ್ಪಲತಾ ‘ಕಾರ್ಯಾಚರಣೆಯಲ್ಲಿ ಅನಧಿಕೃತ ಮರಳು ಗಣಿಗಾರಿಕೆಗೆ ಬಳಸುವ  ಬೋಟ್ ಮತ್ತು ಇತರೆ ಪರಿಕರಗಳನ್ನು, ಅಕ್ರಮವಾಗಿ  ಹಳ್ಳದ ಪಾತ್ರದಲ್ಲಿ ಶೇಖರಿಸಿಡಲಾದ ಮರಳಿನ ಗುಡ್ಡೆಗಳನ್ನು ನಾಶಪಡಿಸಲಾಗಿದೆ. ಮರಳು ಗಣಿಗಾರಿಕೆಯಲ್ಲಿ  ತೊಡಗಿದ ವ್ಯಕ್ತಿಗಳ ವಿರುದ್ದ ಹಾಗೂ ಸಹಕಾರ ನೀಡಿದ ವ್ಯಕ್ತಿಗಳ ವಿರುದ್ಧ ಪ‍್ರಕರಣದ ದಾಖಲಿಸಲಾಗಿದೆ’ ಎಂದಿದ್ದಾರೆ.

ಆದರೆ ಅನಧಿಕೃತ ಮರಳು ವ್ಯವಹಾರದಲ್ಲಿ ಯಾರ ಹೆಸರನ್ನು ಉಲ್ಲೇಖಿಸದೇ ಎಫ್‌ಐಆರ್‌ ದಾಖಲಾಗಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಭೂ ವಿಜ್ಞಾನಿ ಸನಿತ್‌ ಅವರು ಅಳವಂಡಿ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದು ‘ಮೇಲಧಿಕಾರಿಗಳ ಆದೇಶದ ಮೇರೆಗೆ ಹಿರೇಹಳ್ಳದಲ್ಲಿ ಪರಿಶೀಲನೆಗೆ ಹೋದಾಗ ಸುಮಾರು ಮೂರು ಸಾವಿರ ಮೆಟ್ರಿಕ್‌ ಟನ್‌ನಷ್ಟು ಮರಳು ಕಳ್ಳತನದಿಂದ ಸಾಗಣೆ ಮಾಡಿದ್ದು ಗೊತ್ತಾಗಿದೆ. ಅವರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಬೇಕು’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಹೇಮಲತಾ ನಾಯಕ

‘ಕಾಟಾಚಾರಕ್ಕೆ ಎಫ್‌ಐಆರ್‌’

ಕೊಪ್ಪಳ: ಪೊಲೀಸ್‌ ಅಧಿಕಾರಿಗಳ ಮೇಲೆ ಒತ್ತಡ ತಂದ ಕಾರಣಕ್ಕೆ ಸಿಬ್ಬಂದಿ ಕಾಟಾಚಾರಕ್ಕೆ ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ. ದಾಳಿ ವೇಳೆ ಸಿಕ್ಕ ಸಾಮಗ್ರಿಗಳ ಮಾಲೀಕರನ್ನು ಪತ್ತೆ ಹಚ್ಚಿ ಅವರ ವಿರುದ್ಧವೂ ದೂರು ದಾಖಲಿಸಬೇಕು ಎಂದು ವಿಧಾನಪರಿಷತ್‌ ಸದಸ್ಯೆ ಹೇಮಲತಾ ನಾಯಕ ಆಗ್ರಹಿಸಿದ್ದಾರೆ. ‘ಅಕ್ರಮ ಮರಳು ಚಟುವಟಿಕೆಯಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ ಎನ್ನುವ ಮಾಹಿತಿ ಅಧಿಕಾರಿಗಳಿಗೆ ಇದ್ದೇ ಇರುತ್ತದೆ. ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಅವರ ಹೆಸರನ್ನು ಎಫ್ಐಆರ್‌ನಲ್ಲಿ ಸೇರಿಸಬೇಕು’ ಎಂದು ಹೇಳಿದ್ದಾರೆ.     

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.