
ಕೊಪ್ಪಳ: ’ಹಿಂದೆ ನಮ್ಮ ಪಕ್ಷದ ವತಿಯಿಂದ ಜಿಲ್ಲಾಡಳಿತಕ್ಕೆ ದೂರು ನೀಡಿದ್ದ ಬಳಿಕ ಅಳವಂಡಿ ಭಾಗದಲ್ಲಿ ಕಡಿಮೆಯಾಗಿದ್ದ ಅಕ್ರಮ ಮರಳು ಸಾಗಾಟದ ಹಾವಳಿ ಈಗ ಮತ್ತೆ ಜೋರಾಗಿದೆ. ಗಣಿ ಮತ್ತು ಪೊಲೀಸ್ ಇಲಾಖೆಯ ಸಿಬ್ಬಂದಿಯೇ ಅಕ್ರಮ ನಡೆಸುವವರಿಗೆ ಸಹಕಾರ ನೀಡುತ್ತಿದ್ದಾರೆ’ ಎಂದು ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ ಆರೋಪಿಸಿದರು.
‘ಹಿಂದೆ ಜಿಲ್ಲಾಧಿಕಾರಿಗೆ ಈ ಕುರಿತು ದೂರು ನೀಡಿದಾಗ ಅವರು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿಯನ್ನು ಕರೆದು ತಕ್ಷಣವೇ ಪರಿಶೀಲಿಸುವಂತೆ ಸೂಚಿಸಿದ್ದರು. ನಾವು ದೂರು ಕೊಟ್ಟು ಕೆಲವೇ ಹೊತ್ತಿನಲ್ಲಿ ಅಕ್ರಮ ಗಣಿ ವಹಿವಾಟು ನಡೆಸುವವರಿಗೆ ಮಾಹಿತಿ ರವಾನೆಯಾಗಿದೆ. ಗಣಿ ಇಲಾಖೆ ಸಿಬ್ಬಂದಿ ಮತ್ತು ಮುಫ್ತಿಯಲ್ಲಿದ್ದುಕೊಂಡು ಪೊಲೀಸರು ಅಕ್ರಮ ಎಸಗುವವರಿಗೆ ಸಹಕರಿಸುತ್ತಿದ್ದಾರೆ. ನೈಸರ್ಗಿಕ ಸಂಪತ್ತು ಕೊಳ್ಳೆ ಹೊಡೆದವರಿಗೆ ಸರ್ಕಾರಿ ನೌಕರರೇ ಸಹಕರಿಸಿದರೆ ಹೇಗೆ’ ಎಂದು ಶನಿವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಪ್ರಶ್ನಿಸಿದರು.
‘ಸಿಂಧೋಗಿ ಭಾಗದಲ್ಲಿ ನೊಂದವರು ಅಕ್ರಮದ ಬಗ್ಗೆ ಧ್ವನಿ ಎತ್ತಿದರೆ ಜೀವ ಬೆದರಿಕೆ ಒಡ್ಡಲಾಗುತ್ತಿದೆ. ಆ ಭಾಗದಲ್ಲಿ ನೆಮ್ಮದಿಯಾಗಿ ಬದುಕಲು ಜನರಿಗೆ ಸಾಧ್ಯವಾಗುತ್ತಿಲ್ಲ. ಹಿಂದೆ ಟ್ರ್ಯಾಕ್ಟರ್ ಮೂಲಕ ಸಾಗಿಸುತ್ತಿದ್ದ ಮರಳು ಈಗ ಟಿಪ್ಪರ್ ಮೂಲಕ ಸಾಗಿಸಲಾಗುತ್ತಿದೆ. ಮರಳು ಮಾರಾಟಕ್ಕೆ ನನ್ನ ವಿರೋಧವಿಲ್ಲ; ಆದರೆ ಸಂಬಂಧಿಸಿದ ಗ್ರಾಮ ಪಂಚಾಯಿತಿಗೆ ಕರ ಕಟ್ಟಬೇಕು’ ಎಂದು ಆಗ್ರಹಿಸಿದರು.
ಬಿಜೆಪಿ ಮುಖಂಡರಾದ ಸುನಿಲ್ ಹೆಸರೂರ, ಗಣೇಶ ಹೊರತಟ್ನಾಳ ಹಾಗೂ ಕಂಠಯ್ಯ ಹಿರೇಮಠ ಪಾಲ್ಗೊಂಡಿದ್ದರು.
ಜಿಲ್ಲಾಸ್ಪತ್ರೆಯಲ್ಲಿ ಸ್ಕ್ಯಾನಿಂಗ್‌ಗೆ ಹಾಗೂ ಔಷಧ ಹೊರಗಡೆಯಿಂದ ತರುವಂತೆ ಚೀಟಿ ಬರೆದುಕೊಡಲಾಗುತ್ತಿದೆ. ಗರ್ಭಿಣಿಯರು ನೆಲದ ಮೇಲೆ ಕುಳಿತು ಊಟ ಮಾಡಬೇಕಾಗಿದೆ. ಡಿಎಚ್.ಒ ಹಾಗೂ ಕಿಮ್ಸ್ ನಿರ್ದೇಶಕರ ನಡುವೆ ಹೊಂದಾಣಿಕೆಯಿಲ್ಲ.ಹೇಮಲತಾ ನಾಯಕ ವಿಧಾಪರಿಷತ್ ಸದಸ್ಯೆ
ಮಾನದಂಡು ಬಿಟ್ಟು ರೈತ ಬೆಳೆದ ಎಲ್ಲ ಮೆಕ್ಕಜೋಳ ಸರ್ಕಾರ ಖರೀದಿಸಬೇಕು. ಪ್ರತಿ ಜಿಲ್ಲೆಯಲ್ಲಿಯೂ ಖರೀದಿ ಕೇಂದ್ರ ಆರಂಭಿಸಬೇಕು. ಕಡಿಮೆ ಬೆಲೆಗೆ ಮಾರಾಟ ಮಾಡಿದ ರೈತರಿಗೆ ಪರಿಹಾರ ಕೊಡಬೇಕು.ಡಾ. ಬಸವರಾಜ ಕ್ಯಾವಟರ್ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ
‘ರಾಯರಡ್ಡಿ ಪತ್ರಕ್ಕೆ ಕಿಮ್ಮತ್ತು ಇಲ್ಲವೇ?‘
ಗಣಿ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದು ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ವರ್ಗಾವಣೆ ಮಾಡಬೇಕು ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಅವರೇ ಖುದ್ದು ಪತ್ರ ಬರೆದರೂ ಸರ್ಕಾರ ಕಿಮ್ಮತ್ತು ಕೊಟ್ಟಿಲ್ಲ ಎಂದು ಹೇಮಲತಾ ನಾಯಕ ಹೇಳಿದರು. ‘ನಾವು ವಿರೋಧ ಪಕ್ಷದವರು; ನಮ್ಮ ಮಾತಿಗೆ ಬೆಲೆ ಇಲ್ಲವಾದರೂ ಹಿರಿಯ ಶಾಸಕರ ಪತ್ರಕ್ಕೂ ಕಿಮ್ಮತ್ತು ನೀಡದಷ್ಟು ಅಧಿಕಾರಿಗಳು ಪ್ರಬಲರಾಗಿದ್ದಾರೆ. ಜಿಲ್ಲೆಗೆ ಉಪಲೋಕಾಯುಕ್ತ ನ್ಯಾಯಮೂರ್ತಿ ಭೇಟಿ ನೀಡಿದಾಗಲೂ ಹಿರಿಯ ಭೂ ವಿಜ್ಞಾನಿ ಪುಷ್ಪಲತಾ ಎಸ್. ಕವಲೂರು ಬಂದಿಲ್ಲ. ಅವರ ವಿರುದ್ಧ ಕ್ರಮ ಯಾಕಿಲ್ಲ’ ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.