ADVERTISEMENT

ಸರ್ಕಾರಿ ಕಾಲೇಜಿನಲ್ಲೇ ಕಾಣದ ಮೂಲಸೌಕರ್ಯ

ಕುಡಿಯುವ ನೀರು, ಬೆಂಚು, ಶೌಚಾಲಯದ ವ್ಯವಸ್ಥೆಯೇ ಇಲ್ಲ!

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2021, 11:22 IST
Last Updated 7 ಡಿಸೆಂಬರ್ 2021, 11:22 IST
 ಕೊಲ್ಲಿ ನಾಗೇಶ್ವರರಾವ್ ಗಂಗಯ್ಯ ಪ್ರಥಮ ದರ್ಜೆ ಸರ್ಕಾರಿ ಕಾಲೇಜು (ಎಸ್‌ಕೆಎನ್‌ಜಿ ಕಾಲೇಜು)
 ಕೊಲ್ಲಿ ನಾಗೇಶ್ವರರಾವ್ ಗಂಗಯ್ಯ ಪ್ರಥಮ ದರ್ಜೆ ಸರ್ಕಾರಿ ಕಾಲೇಜು (ಎಸ್‌ಕೆಎನ್‌ಜಿ ಕಾಲೇಜು)   

ಗಂಗಾವತಿ: ಬಡ ವಿದ್ಯಾರ್ಥಿಗಳ ಪಾಲಿಗೆ ವಿದ್ಯಾಕಾಶಿಯಾಗಿ ಬೆಳೆದಿರುವ ಇಲ್ಲಿಯ ಶ್ರೀ ಕೊಲ್ಲಿ ನಾಗೇಶ್ವರರಾವ್ ಗಂಗಯ್ಯ ಪ್ರಥಮ ದರ್ಜೆ ಸರ್ಕಾರಿ (ಎಸ್‌ಕೆಎನ್‌ಜಿ) ಕಾಲೇಜಿನಲ್ಲಿ ಕುಡಿಯುವ ನೀರು, ಬೆಂಚುಗಳು, ಶೌಚಾಲಯ, ವಿಷಯ ಪರಿಣತ ಉಪನ್ಯಾಸಕರು ಮತ್ತಿತರ ಮೂಲಸೌಕರ್ಯಗಳೇ ಇಲ್ಲ.

ಈ ಕಾಲೇಜಿನಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಸೇರಿ 3,500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಇವರು ನಿತ್ಯ ಒಂದಲ್ಲ ಒಂದು ಸಮಸ್ಯೆ ಹೊತ್ತು ಪರಿಹಾರಕ್ಕಾಗಿ ಪ್ರತಿಭಟನೆ ನಡೆಸಿ, ಪ್ರಾಚಾರ್ಯರ ಮೊರೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಶೌಚಾಲಯಗಳ ದುರಸ್ತಿ ಇಲ್ಲ: ಕಾಲೇಜಿನಲ್ಲಿ ಎರಡು ಶೌಚಾಲಯಗಳಿದ್ದು, ಅವು ಹೆಸರಿಗೆ ಮಾತ್ರ ಎಂಬಂತಿವೆ. ನಿರ್ವಹಣೆ ಕೊರತೆಯಿಂದ ಶೌಚಾಲಯಗಳು ನೀರನ್ನೆ ಕಂಡಿಲ್ಲ. ನೀರಿನ ವ್ಯವಸ್ಥೆ ಇಲ್ಲದೆ ಶೌಚಾಲಯಗಳು ಗಬ್ಬುನಾರುತ್ತಿವೆ. ವಿದ್ಯಾರ್ಥಿಗಳು ನಿಸರ್ಗಕರೆಗೆ ಓಗೊಡಲು ಬಯಲನ್ನೆ ಆಶ್ರಯಿಸಬೇಕಾಗಿದೆ.

ನೀರಿನ ಅವ್ಯವಸ್ಥೆ: ಇಲ್ಲಿ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದು, ಕನಿಷ್ಠ ಕುಡಿಯಲು ನೀರಿನ ಸೌಲಭ್ಯವೇ ಇಲ್ಲ. ಕೆಳಗಿನ ಅಂತಸ್ತಿನಲ್ಲಿ ಒಂದು ಘಟಕವಿದ್ದು, ಅದು ಯಾವ ಸಮಯಕ್ಕೆ ಕೈಕೊಡಲಿದೆ ಎನ್ನುವುದೇ ಗೊತ್ತಾಗುವುದಿಲ್ಲ.

ADVERTISEMENT

ಬೆಂಚುಗಳ ಕೊರತೆ: ಪ್ರತಿ ವರ್ಷ ಪದವಿ ಮತ್ತು ಸ್ನಾತಕೋತ್ತರ ಪದವಿಗಳ ಪ್ರವೇಶ ಸಂಖ್ಯೆ ಏರುತ್ತಲೆ ಇದೆ. ಈ ವರ್ಷ ಸಹ ಪದವಿ ಮತ್ತು ಸ್ನಾತಕೋತ್ತರ ಪದವಿ ಪ್ರವೇಶಗಳ ಸಂಖ್ಯೆ 2 ಸಾವಿರಕ್ಕೆ ಏರಿದೆ. ತರಗತಿಗಳಲ್ಲಿ ವಿದ್ಯಾರ್ಥಿಗಳಿಗೆ ಕೂಡಲೂ ಜಾಗವಿಲ್ಲ.

ಅತಿಥಿ ಉಪನ್ಯಾಸಕರೂ ಇಲ್ಲ: ಕಾಲೇಜಿನಲ್ಲಿ ಕಲಾ, ವಾಣಿಜ್ಯ, ವಿಜ್ಞಾನ ವಿಭಾಗದಲ್ಲಿ ಆಯ್ಕೆ ವಿಷಯಗಳಿದ್ದು, ವಿದ್ಯಾರ್ಥಿಗಳ ಆಯ್ಕೆ ವಿಷಯಗಳನ್ವಯ, ಸೆಕ್ಷನ್ ಪ್ರಕಾರ ಪಠ್ಯ ಬೋಧನೆ ಮಾಡಬೇಕಾಗಿದೆ. ಆಯ್ಕೆ ವಿಷಯ ಬೋಧಿಸಲು ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಂಡಿಲ್ಲ.

ಎನ್ಇಪಿ ಪಠ್ಯ ಲಭ್ಯವಿಲ್ಲ: ಇದೀಗ ನೂತನವಾಗಿ ಎನ್ಇಪಿ ಶಿಕ್ಷಣ ಜಾರಿಯಾಗಿದ್ದು, ಇದುವರೆಗೂ ವಿದ್ಯಾರ್ಥಿಗಳಿಗೆ ಸೂಕ್ತ ಪಠ್ಯಕ್ರಮ ಲಭ್ಯವಿಲ್ಲ. ’ಪ್ರಾಧ್ಯಾಪಕರು ಏನು ಬೋಧಿಸುತ್ತಾರೆ ಎಂಬುದು ಗೊತ್ತಾಗುವುದಿಲ್ಲ’ ಎಂದು ಬಿ.ಎ ಪ್ರಥಮ ವರ್ಷದ ವಿದ್ಯಾರ್ಥಿ ರಮೇಶ ಹೇಳುತ್ತಾರೆ.

ಕಾಲೇಜಿನಲ್ಲಿನ ಸಮಸ್ಯೆಗಳ ಈಡೇರಿಕೆಗೆ ವಿದ್ಯಾರ್ಥಿಗಳು ಮನವಿ ಸಲ್ಲಿಸಲು ಮುಂದಾದರೇ, ’ಬೇಕಿದ್ದರೆ ಟಿ.ಸಿ ತೆಗೆದುಕೊಂಡು ಹೋಗಿ. ನಿಮ್ಮ ಮನೆಯಿಂದ ಬೆಂಚುಗಳನ್ನು ತೆಗೆದುಕೊಂಡು ಬನ್ನಿ‘ ಎಂದು ಹೀಯಾಳಿಸುತ್ತಾರೆ ಎನ್ನುವುದು ವಿದ್ಯಾರ್ಥಿಗಳ ಆರೋಪವಾಗಿದೆ.

**

ಈ ಕಾಲೇಜಿಗೆ ಸೇರಿ ಎರಡು ವರ್ಷಗಳು ಕಳೆದಿವೆ. ಒಂದು ದಿನವೂ ಶೌಚಾಲಯಗಳನ್ನು ಸ್ವಚ್ಛಗೊಳಿಸಿಲ್ಲ. ಪ್ರಾಚಾರ್ಯರಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜವಾಗಿಲ್ಲ
ಹೆಸರು ಹೇಳಲು ಇಚ್ಚಿಸದ ಬಿ.ಎ ವಿದ್ಯಾರ್ಥಿ

ಎಸ್.ಕೆ.ಎನ್.ಜಿ ಕಾಲೇಜಿನಲ್ಲಿ ಒಳ್ಳೆಯ ಪಠ್ಯ ಪುಸ್ತಕ , ಪ್ರಯೋಗಾಲಯ, ಸುಸಜ್ಜಿತ ಕಟ್ಟಡ, ಉತ್ತಮ ಬೋಧಕರು ಇದ್ದಾರೆ ಎಂದು ಪ್ರವೇಶಾತಿ ಪಡೆದಿದ್ದೆ. ಆದರೆ ಕೂಡಲು ಬೆಂಚುಗಳೇ ಇಲ್ಲ. ಒಂದು ಬೆಂಚಿನಲ್ಲಿ 5 ಜನ ಕೂಡಬೇಕು
ಹೆಸರು ಹೇಳಲು ಇಚ್ಚಿಸದ ಬಿಎಸ್ಸಿ ವಿದ್ಯಾರ್ಥಿನಿ

ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯಗಳ ದುರಸ್ತಿ ಜೊತೆಗೆ ಅಗತ್ಯ ಬೆಂಚು ಹಾಗೂ ಪಠ್ಯ ಬೋಧನೆಗೆ ಅತಿಥಿ ಶಿಕ್ಷಕರ ಸೌಲಭ್ಯ ಒದಗಿಸುವಂತೆ ವಿದ್ಯಾರ್ಥಿಗಳು ಮನವಿ ಸಲ್ಲಿಸಿದ್ದಾರೆ. ಎಲ್ಲ ಸೌಲಭ್ಯಗಳನ್ನು ಕಲ್ಪಿಸಲಾಗುವುದು.
ಡಾ.ಎನ್.ಜಿ ಹೆಬಸೂರು, ಪ್ರಾಚಾರ್ಯ, ಎಸ್.ಕೆ.ಎನ್.ಜಿ ಕಾಲೇಜು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.