ಎರಡನೇ ಎಲಿಮೆಂಟ್ ಅಳವಡಿಕೆ ಯಶಸ್ವಿ
ಕೊಪ್ಪಳ: ತಾಲ್ಲೂಕಿನ ಮುನಿರಾಬಾದ್ ನಲ್ಲಿರುವ ತುಂಗಭದ್ರಾ ಜಲಾಶಯದಲ್ಲಿ ಕೊಚ್ಚಿ ಹೋಗಿರುವ 19ನೇ ಕ್ರಸ್ಟ್ ಗೇಟ್ ಸ್ಥಳದಲ್ಲಿ ಎರಡನೇ ಎಲಿಮೆಂಟ್ ಅಳವಡಿಕೆ ಕಾರ್ಯ ಯಶಸ್ವಿಯಾಗಿದೆ.
ರಭಸವಾಗಿ ಹರಿಯುತ್ತಿರುವ ನೀರಿನ ನಡುವೆಯೂ ಶನಿವಾರ ಕಾರ್ಯಾಚರಣೆ ನಡೆಸಿದ ಸಿಬ್ಬಂದಿ ಎರಡು ಬೃಹತ್ ಕ್ರೇನ್ ಗಳ ನೆರವಿನಿಂದ ಎರಡನೇ ಎಲಿಮೆಂಟ್ ಅಳವಡಿಕೆ ಮಾಡಿದರು.
ನಾಲ್ಕು ಅಡಿ ಎತ್ತರದ ಒಟ್ಟು ಐದು ಎಲಿಮೆಂಟ್ ಅಳವಡಿಕೆ ಮಾಡಲಾಗುತ್ತಿದ್ದು, ಶುಕ್ರವಾರ ರಾತ್ರಿ ಮೊದಲ ಎಲಿಮೆಂಟ್ ಅಳವಡಿಕೆಯಾಗಿತ್ತು. ಜಲಾಶಯ ಗೇಟ್ ಹಾಗೂ ಸುರಕ್ಷತಾ ತಜ್ಞ ಕನ್ನಯ್ಯನಾಯ್ಡು ನೇತೃತ್ವದಲ್ಲಿ ಮೊದಲ ಕಾರ್ಯಾಚರಣೆ ನಡೆದಿತ್ತು.
ಶನಿವಾರ ಮಧ್ಯಾಹ್ನ 1.50ರ ಸುಮಾರಿಗೆ ಆರಂಭವಾದ ಎರಡನೇ ಎಲಿಮೆಂಟ್ ಆಳವಡಿಕೆ ಕಾರ್ಯ 3.10ಕ್ಕೆ ಮುಕ್ತಾಯವಾಯಿತು. ಇನ್ನು ಮೂರು ಎಲಿಮೆಂಟ್ ಅಳವಡಿಕೆ ಕಾರ್ಯ ಬಾಕಿ ಉಳಿದಿದೆ. ಕಳೆದ ಶನಿವಾರ ರಾತ್ರಿ ಗೇಟ್ ಕೊಚ್ಚಿ ಹೋಗಿ ಅಪಾರ ಪ್ರಮಾಣದ ನೀರು ಪೋಲಾಗಿದೆ.
ತುಂಗಭದ್ರಾ ಜಲಾಶಯಕ್ಕೆ ಒಟ್ಟು 32 ಕ್ರಸ್ಟ್ ಗೇಟ್ ಗಳಿದ್ದು ಎರಡನೇ ಎಲಿಮೆಂಟ್ ಅಳವಡಿಸುವಾಗ 24 ಗೇಟ್ ಮೂಲಕ ನೀರು ಹರಿಸಲಾಗುತ್ತಿತ್ತು. ಹಂತಹಂತವಾಗಿ ಒಂದೊಂದೇ ಗೇಟ್ ಬಂದ್ ಮಾಡಿ ಹೊಸ ಎಲಿಮೆಂಟ್ ಮೇಲೆ ಹೆಚ್ಚು ನೀರು ಹರಿಸಲಾಯಿತು. ಈ ಎಲಿಮೆಂಟ್ ಶಕ್ತಿ ಪರೀಕ್ಷೆಗೆ ಇದೇ ರೀತಿಯ ಪ್ರಯೋಗ ಮಾಡಲಾಗುತ್ತದೆ ಎಂದು ಟಿ.ಬಿ. ಮಂಡಳಿ ಅಧಿಕಾರಿಯೊಬ್ಬರು ತಿಳಿಸಿದರು.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಾಧ್ಯವಾದಷ್ಟು ನೀರು ಜಲಾಶಯದಲ್ಲಿಯೇ ಉಳಿಸಿ ಗೇಟ್ ಅಳವಡಿಕೆ ಕಾರ್ಯ ನಡೆಸಿದ್ದೇವೆ. ಮಲೆನಾಡಿನ ಭಾಗದಲ್ಲಿ ಉತ್ತಮ ಮಳೆಯಾಗಲಿದ್ದು ಕೆಲವೇ ದಿನಗಳಲ್ಲಿ ಜಲಾಶಯ ಮರಳಿ ಭರ್ತಿಯಾಗುವ ವಿಶ್ವಾಸವಿದೆ. ನೀರು ರಭಸವಾಗಿ ಹರಿಯುವಾಗಲೇ ಎಲಿಮೆಂಟ್ ಅಳವಡಿಕೆ ಕಾರ್ಯದಲ್ಲಿ ಯಶಸ್ಸು ಪಡೆದಿದ್ದೇವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.