ADVERTISEMENT

ಶಿಫಾರಸಿನಂತೆ ಒಳಮೀಸಲಾತಿ ವರ್ಗೀಕರಣ ಆಗಿಲ್ಲ: ಸಂಸದ ಗೋವಿಂದ ಕಾರಜೋಳ

ಕ್ರಿಶ್ಚಿಯನ್‌ ಪದ ತೆಗೆಯದೆ ಇದ್ದರೆ ಜಾತಿಗಣತಿ ಬಹಿಷ್ಕಾರ–ನಾರಾಯಣಸ್ವಾಮಿ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2025, 5:11 IST
Last Updated 12 ಸೆಪ್ಟೆಂಬರ್ 2025, 5:11 IST
ಕೊಪ್ಪಳ ತಾಲ್ಲೂಕಿನ ಮುನಿರಾಬಾದ್ ಸಮೀಪ ಗುರುವಾರ ಒಳಮೀಸಲಾತಿ ನಂತರ ಮಾದಿಗ ಸಮುದಾಯದವರ ಮುಂದಿನ ನಡೆ ಕುರಿತು ಚರ್ಚಿಸಲು ಸಭೆ ನಡೆಯಿತು  
ಕೊಪ್ಪಳ ತಾಲ್ಲೂಕಿನ ಮುನಿರಾಬಾದ್ ಸಮೀಪ ಗುರುವಾರ ಒಳಮೀಸಲಾತಿ ನಂತರ ಮಾದಿಗ ಸಮುದಾಯದವರ ಮುಂದಿನ ನಡೆ ಕುರಿತು ಚರ್ಚಿಸಲು ಸಭೆ ನಡೆಯಿತು      

ಕೊಪ್ಪಳ: ‘ರಾಜ್ಯದಲ್ಲಿ ಆಡಳಿತ ನಡೆಸಿದ ಬಿಜೆಪಿ ಸರ್ಕಾರಗಳು 2011ರಿಂದಲೂ ಒಳಮೀಸಲಾತಿ ಪರವಾಗಿಯೇ ಇದ್ದವು. ಆದರೆ ಸಿದ್ದರಾಮಯ್ಯ ಮತ್ತು ಅವರ ತಂಡದವರು ಜನರನ್ನು ತಪ್ಪುದಾರಿಗೆಳೆಯುವ ಪ್ರಯತ್ನ ಮಾಡುತ್ತಲೇ ಬಂದರು.  ನಾಗಮೋಹನದಾಸ್ ಆಯೋಗ ಬಹಳ ವೈಜ್ಞಾನಿಕವಾಗಿಯೇ ವರದಿ ಸಲ್ಲಿಸಿದ್ದರೂ ಅದನ್ನು ಒಪ್ಪಲು ಸಿದ್ಧವಿಲ್ಲದ ರಾಜ್ಯ ಸರ್ಕಾರ ಕೇವಲ ಮೂರು ವಿಭಾಗ ಮಾಡಿ ಅಲೆಮಾರಿಗಳಿಗೆ ಘೋರ ಅನ್ಯಾಯ ಮಾಡಿದೆ. ಇದು ಸುಪ್ರೀಂ ಕೋರ್ಟ್ ಆದೇಶಕ್ಕೆ ತೀರಾ ವಿರುದ್ಧವಾದುದು’ ಎಂ‌ದು ಸಂಸದ ಗೋವಿಂದ ಕಾರಜೋಳ ಹೇಳಿದರು.

ಮುನಿರಾಬಾದ್‌ನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಒಳಮೀಸಲಾತಿಯ ಮುಂದಿನ ನಡೆಗಳ ಕುರಿತ ಚಿಂತನ ಮಂಥನ ಸಭೆಗೂ ಮೊದಲು ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಕೇಂದ್ರದ ಮಾಜಿ ಸಚಿವ ಎ.ನಾರಾಯಣ ಸ್ವಾಮಿ ಮಾತನಾಡಿ, ‘ಸೆ.22ರಿಂದ ಮತ್ತೊಮ್ಮೆ ಜಾತಿಗಣತಿ ನಡೆಯಲಿದೆ. ‘ಇಡೀ ಹಿಂದೂ ಸಮಾಜವನ್ನು ಒಡೆಯುವ ತಂತ್ರಗಾರಿಕೆ ಈ ಕ್ರಿಶ್ಚಿಯನ್ ಪದ ಸೇರಿಸುವುದರ ಹಿಂದೆ ಇದೆ. ಪ್ರತಿಯೊಂದು ಹಿಂದೂ ಹೆಸರಿನೊಂದಿಗೆ ಕ್ರಿಶ್ಚಿಯನ್ ಹೆಸರು ಸೇರಿಸಿ ಹಿಂದೂಗಳ ಜನಸಂಖ್ಯೆಯ ಪ್ರಮಾಣವನ್ನು ಹೆಚ್ಚು ಕಡಿಮೆ ಮಾಡಿಸುವ ಹುನ್ನಾರ ನಡೆದಿದೆ. ಈಗಿನ ಸ್ಥಿತಿಯಲ್ಲೇ ಮನೆ ಮನೆಗೆ ಸಮೀಕ್ಷೆ ನಡೆಸುವುದಾದರೆ ಅದನ್ನು ಜನ ಸಾರ್ವತ್ರಿಕವಾಗಿ ತಿರಸ್ಕರಿಸಬೇಕು’ ಎಂದು ನಾರಾಯಣಸ್ವಾಮಿ ಸೂಚಿಸಿದರು.

ADVERTISEMENT

ಶೈಕ್ಷಣಿಕ ಪ್ರಗತಿಗೆ ಪ್ರಯತ್ನ: ನಾಗಮೋಹನದಾಸ್ ವರದಿಯಂತೆ ಮಾದಿಗ ಸಮುದಾಯದವರಲ್ಲಿ ಉನ್ನತ ಶಿಕ್ಷಣದಲ್ಲಿ ಕಾಲೇಜನ್ನು ಅರ್ಧದಲ್ಲೇ ಬಿಡುವವರ ಸಂಖ್ಯೆ ಶೇ 44ರಷ್ಟು ಇರುವುದು ಗೊತ್ತಾಗಿದೆ. ಇದು ಬಹಳ ಗಂಭೀರ ವಿಚಾರ. ಸರ್ಕಾರ ಶೈಕ್ಷಣಿಕ ವಾತಾವರಣ ನಿರ್ಮಾಣ ಮಾಡದಿರುವುದೇ ಇದಕ್ಕೆ ಕಾರಣ. ಮಾದಿಗ ಸಮುದಾಯದವರು ಎಸ್‌ಎಸ್‌ಎಲ್‌ಸಿ ಪಾಸ್ ಮಾಡಿಕೊಂಡು ಮುಂದೆ ಬಂದಾಗ, ಉನ್ನತ ಶಿಕ್ಷಣಕ್ಕೆ ಅವರಿಗೆ ನೆರವಾಗುವ ನಿಟ್ಟನಲ್ಲಿ ಸಮುದಾಯದ ಸುಶಿಕ್ಷಿತರು ಪ್ರಯತ್ನಿಸಬೇಕು ಎಂದರು.

ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೇಸೂಗೂರು, ಮುಖಂಡ ಹನುಮಂತಪ್ಪ ಬಳ್ಳಾರಿ, ಐಎಎಸ್ ನಿವೃತ್ತ ಅಧಿಕಾರಿಗಳಾದ  ಲಕ್ಷ್ಮೀನಾರಾಯಣಸ್ವಾಮಿ, ಅನಿಲ್‌ ಕುಮಾರ್, ಗಣೇಶ ಹೊರತಟ್ನಾಳ, ಲಿಂಗಣ್ಣ ಆಲೂರು, ಮುತ್ತಣ್ಣ ಬೆನ್ನೂರು, ಈರಪ್ಪ ಕಡೆಗುಂಟಿ, ಪರಶುರಾಮಪ್ಪ ಆನೆಗೊಂದಿ, ನಾಗಲಿಂಗ ಮಾಳೆಕೊಪ್ಪ, ಮಂಜುನಾಥ ಮುಸಲಾಪುರ, ಹುಣಸಿ ರಾಮಣ್ಣ ಸೇರಿದಂತೆ ಕೊಪ್ಪಳ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಪ್ರಮುಖರು ಸಭೆಯಲ್ಲಿ ಪಾಲ್ಗೊಂಡಿದ್ದರು. 

ಸೋನಿಯಾ ರಾಹುಲ್ ಮೆಚ್ಚಿಸಲು ಗಲಭೆ

‘ಮದ್ದೂರಿನಲ್ಲಿ ಗಣೇಶೋತ್ಸವ ಸಂದರ್ಭದಲ್ಲಿ ಆಗಿರುವ ವಿದ್ಯಮಾನ ರಾಜ್ಯ ಸರ್ಕಾರದ ಪ್ರಾಯೋಜಿತ ಜಾತಿ ಸಂಘರ್ಷ ಕಾರ್ಯಕ್ರಮ. ಸೋನಿಯಾ ಗಾಂಧಿ ರಾಹುಲ್ ಗಾಂಧಿ ಅವರನ್ನು ಮೆಚ್ಚಿಸಲು ರಾಜ್ಯ ಸರ್ಕಾರವೇ ಈ ಕುತಂತ್ರ ಎಸಗಿದೆ’ ಎಂದು ಸಂಸದ ಗೋವಿಂದ ಕಾರಜೋಳ ಆರೋಪಿಸಿದರು. ‘ಹಿಂದೂಗಳ ಹಬ್ಬ ಬಂದಾಗ ಧರ್ಮ ಸಂಬಂಧಿತ ಗಲಭೆ ಆಗುತ್ತದೆ ಎಂದು ಸರ್ಕಾರವೇ ಮೊದಲು ಗುಲ್ಲೆಬ್ಬಿಸುತ್ತದೆ. ಕೇಸರಿ ಧ್ವಜ ಹಿಡಿಯಬಾರದು ಎಂಬ ಮೌಖಿಕ ಆದೇಶ ಹೊರಡಿಸಲಾಗುತ್ತದೆ. ಹಿಂದೂಗಳ ಹಬ್ಬಗಳಲ್ಲಿ ಗಲಾಟೆ ಎಬ್ಬಿಸಿ ಅಶಾಂತಿ ಸೃಷ್ಟಿಯಾಗುವಂತೆ ಮಾಡುವುದು ಸರ್ಕಾರದ ಉದ್ದೇಶ. ಪಾಕಿಸ್ತಾನ ಜಿಂದಾಬಾದ್ ಎಂದು ಭದ್ರಾವತಿಯಲ್ಲಿ ಹೇಳಿದವರನ್ನು ಬಿಡಿ ವಿಧಾನಸೌಧದಲ್ಲಿ ಹೇಳಿದವರಿಗೇ ಶಿಕ್ಷೆ ವಿಧಿಸದ ಸರ್ಕಾರ ಇದು. ರಾಜ್ಯದಲ್ಲಿರುವುದು ಲಜ್ಜೆಗೆಟ್ಟ ಸರ್ಕಾರ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.