ADVERTISEMENT

ಕೊರೊನಾ ವೈರಸ್ ಭೀತಿ; ಹನಮಪ್ಪನ ಜಾತ್ರೆ ರದ್ದು

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2020, 14:20 IST
Last Updated 24 ಮಾರ್ಚ್ 2020, 14:20 IST
ಯಲಬುರ್ಗಾ ಪಟ್ಟಣದ ತೋಪಿನ ಹನಮಪ್ಪನ ದೇವಸ್ಥಾನದಲ್ಲಿ ಯುಗಾದಿ ಹಬ್ಬದಂದು ನಡೆಯುತ್ತಿದ್ದ ಜಾತ್ರೆಯನ್ನು ರದ್ದುಪಡಿಸಲಾಗಿದೆ
ಯಲಬುರ್ಗಾ ಪಟ್ಟಣದ ತೋಪಿನ ಹನಮಪ್ಪನ ದೇವಸ್ಥಾನದಲ್ಲಿ ಯುಗಾದಿ ಹಬ್ಬದಂದು ನಡೆಯುತ್ತಿದ್ದ ಜಾತ್ರೆಯನ್ನು ರದ್ದುಪಡಿಸಲಾಗಿದೆ   

ಯಲಬುರ್ಗಾ: ಕೊರೊನಾ ವೈರಸ್ ಹರಡದಂತೆ ಜಿಲ್ಲಾಡಳಿತ ಕೈಗೊಂಡಿರುವ ನಿಷೇಧಾಜ್ಞೆ ಹಿನ್ನೆಲೆಯಲ್ಲಿ ಯುಗಾದಿ ದಿನ ಜರಲಿದ್ದ ತೋಪಿನ ಹನಮಪ್ಪನ ಜಾತ್ರೆಯನ್ನು ರದ್ದುಪಡಿಸಲಾಗಿದೆ ಎಂದು ತಹಶೀಲ್ದಾರ್ ಶ್ರೀಶೈಲ ತಳವಾರ ತಿಳಿಸಿದ್ದಾರೆ.

ತಹಶೀಲ್ ಕಚೇರಿ ಹಿಂದೆ ಇರುವ ಹನಮಪ್ಪನ ದೇವಸ್ಥಾನದಲ್ಲಿ ಇದೇ ಮಾರ್ಚ್‌ 25ರಂದು ವಿವಿಧ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆಯಬೇಕಿತ್ತು. ನೂರಾರು ವರ್ಷಗಳಿಂದಲೂ ಅದ್ದೂರಿಯಾಗಿ ಆಚರಿಸಿಕೊಂಡು ಬರಲಾಗುತ್ತಿದ್ದ ಒಂದು ದಿನದ ಸಂಭ್ರಮೋತ್ಸವವಕ್ಕೆ ಕೊರೊನಾ ವೈರಸ್ ಭೀತಿಯಿಂದಾಗಿ ಕಡಿವಾಣ ಹಾಕಿದಂತಿದೆ.

ಸಂಜೆಯಾಗುತ್ತಿದ್ದಂತೆ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಹಲವು ಗ್ರಾಮಸ್ಥರು ಸಹಸ್ರಾರು ಸಂಖ್ಯೆಯಲ್ಲಿ ಜನರು ಸೇರಿ ವಿಜೃಂಭಣೆಯಿಂದ ಉಚ್ಚಾಯದ ಮೆರವಣಿಗೆ ಹಮ್ಮಿಕೊಳ್ಳುತ್ತಿದ್ದರು. ಕೇವಲ 2ರಿಂದ 3ಗಂಟೆಯೊಳಗೆ ನಡೆಯುತ್ತಿದ್ದ ಜಾತ್ರೋತ್ಸವ ಈ ವರ್ಷ ಸ್ಥಗಿತಗೊಂಡಿದೆ. ಈ ಮೂಲಕ ಸೋಂಕು ಹರಡುವಿಕೆಗೆ ತಾಲ್ಲೂಕು ಆಡಳಿತ ಮುಂಜಾಗ್ರತಾ ಕ್ರಮ ಕೈಗೊಂಡಿದೆ.

ADVERTISEMENT

ಸೋಂಕಿನ ಭೀಕರತೆ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಅದಕ್ಕಾಗಿ ಯಲಬುರ್ಗಾ ತಾಲ್ಲೂಕು ಸಂಪೂರ್ಣ ಬಂದ್ ಮಾಡಲಾಗಿದೆ. ಸಾರ್ವಜನಿಕರ ಸಹಕಾರ ಅವಶ್ಯವಾಗಿರುವುದರಿಂದ ಜಾತ್ರೆ ಅಥವಾ ಇನ್ನಿತರ ಯಾವುದೇ ಪೂಜೆಗಾಗಿ ದೇವಸ್ಥಾನಕ್ಕೆ ಬರದೇ ಮನೆಯಲ್ಲಿಯೇ ಇದ್ದು ಹಬ್ಬವನ್ನು ಆಚರಿಸಿಕೊಳ್ಳಬೇಕು.

ಮನೆಯಿಂದ ಹೊರಬರದಂತೆ ಎಚ್ಚರವಹಿಸಿದರೆ ಸೋಂಕು ಹರಡುವಿಕೆಯು ಗಣನೀಯ ಪ್ರಮಾಣದಲ್ಲಿ ನಿಯಂತ್ರಣಕ್ಕೆ ಬರುತ್ತದೆ. ಸರ್ಕಾರದ ಈ ಕರೆಯನ್ನು ತಪ್ಪದೇ ಪಾಲಿಸಿ ಸರ್ಕಾರದ ಮುಜಾಗ್ರತಾ ಕ್ರಮಗಳಿಗೆ ಸಹಕರಿಸಬೇಕು ಎಂದು ತಹಶೀಲ್ದಾರ್ ಶ್ರೀಶೈಲ ತಳವಾರ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.