ADVERTISEMENT

ಕಲ್ಯಾಣ ಕರ್ನಾಟಕ ಉತ್ಸವ: ತಾರತಮ್ಯ ಬೇಡ; ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2025, 5:19 IST
Last Updated 13 ಸೆಪ್ಟೆಂಬರ್ 2025, 5:19 IST
ಕೊಪ್ಪಳದಲ್ಲಿ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಪ್ರತಿನಿಧಿಗಳು ಜಿಲ್ಲಾಧಿಕಾರಿ ಡಾ.ಸುರೇಶ ಇಟ್ನಾಳ ಅವರಿಗೆ ಮನವಿ ಸಲ್ಲಿಸಿದರು
ಕೊಪ್ಪಳದಲ್ಲಿ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಪ್ರತಿನಿಧಿಗಳು ಜಿಲ್ಲಾಧಿಕಾರಿ ಡಾ.ಸುರೇಶ ಇಟ್ನಾಳ ಅವರಿಗೆ ಮನವಿ ಸಲ್ಲಿಸಿದರು   

ಕೊಪ್ಪಳ: ಕಲ್ಯಾಣ ಕರ್ನಾಟಕ ಉತ್ಸವದ ದಿನ ಈ ಬಾರಿ ಕೊಪ್ಪಳದಲ್ಲಿಯೇ ರಾಷ್ಟ್ರಧ್ವಜಾರೋಹಣ ನೆರವೇರಿಸುವಂತೆ ಮುಖ್ಯಮಂತ್ರಿಗೆ ಮನವಿ ಮಾಡಲಾಗಿದೆ.

ಈ ಕುರಿತು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಪ್ರತಿನಿಧಿಗಳು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದಿರುವ ಮನವಿಯನ್ನು ಜಿಲ್ಲಾಧಿಕಾರಿ ಡಾ.ಸುರೇಶ ಇಟ್ನಾಳ ಅವರಿಗೆ ಸಲ್ಲಿಸಿದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ದಿನಾಚರಣೆಯನ್ನು ಕಲ್ಯಾಣ ಕರ್ನಾಟಕ ಉತ್ಸವವನ್ನಾಗಿ ಆಚರಿಸಲು ಘೋಷಿಸಿತ್ತು. ಅಂದಿನಿಂದ ಪ್ರತಿವರ್ಷ ಸೆ.17 ರಂದು ಕಲಬುರಗಿಯಲ್ಲಿಯೇ ಮುಖ್ಯಮಂತ್ರಿ ಧ್ವಜಾರೋಹಣ ನೆರವೇರಿಸುವುದು ವಾಡಿಕೆಯಾಗಿದೆ. ಕೇವಲ ಕಲಬುರಗಿ ಜಿಲ್ಲೆಗೆ ಮಾತ್ರ ಮಹತ್ವ ನೀಡುತ್ತಿರುವುದರಿಂದ ಕಲ್ಯಾಣ ಕರ್ನಾಟಕ ಪ್ರದೇಶದ ಇತರೆ ಜಿಲ್ಲೆಗಳಿಗೆ ತಾರತಮ್ಯದ ಅನುಭವವಾಗುತ್ತಿದೆ. ಹೈದ್ರಾಬಾದ ಸಂಸ್ಥಾನವನ್ನು ಭಾರತ ಒಕ್ಕೂಟದಲ್ಲಿ ವಿಲೀನಗೊಳಿಸುವಂತೆ ನಡೆಸಿದ ಹೋರಾಟದಲ್ಲಿ ರಾಯಚೂರು, ಕೊಪ್ಪಳ, ಯಾದಗಿರಿ ಹಾಗೂ ಬೀದರ ಜಿಲ್ಲೆಗಳಲ್ಲೂ ಸಾಕಷ್ಟು ಜನ ಇದ್ದು, ಅವರನ್ನು ಯಾರೂ ಸ್ಮರಿಸದೇ ಇರುವದು ದುರಾದೃಷ್ಟಕರ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ADVERTISEMENT

ಹಾಗಾಗಿ ಆದ್ದರಿಂದ, ರಾಜ್ಯದ ಮುಖ್ಯಮಂತ್ರಿಯಾಗಿ ತಾವು ಈ ಭಾಗದ ಎರಡನೆಯ ಸ್ವಾತಂತ್ರ್ಯ ದಿನಾಚರಣೆ ಎಂದೆ ಆಚರಿಸಲಾಗುವ ಸೆ.೧೭ರ ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಇತರೆ ಜಿಲ್ಲೆಗಳಲ್ಲಿಯೂ ಭಾಗವಹಿಸುವದರ ಮೂಲಕ ಸಮಾನತೆಯ ಪ್ರತಿಪಾದನೆಗೆ ಮುನ್ನಡಿ ಇಡಬೇಕು. ಕೊಪ್ಪಳ ಜಿಲ್ಲೆಯಲ್ಲಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮುಂದಿನ ವರ್ಷದಿಂದ ರಾಯಚೂರ, ಯಾದಗಿರಿ, ಬೀದರ ಜಿಲ್ಲೆಗಳಲ್ಲಿ ಸರದಿಯ ಆಧಾರದ ಮೇಲೆ ಭಾಗವಹಿಸಬೇಕು ಎಂದು ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ.

ಸಂಘದ ಅಧ್ಯಕ್ಷ ರಮೇಶ ತುಪ್ಪದ, ಜಿಲ್ಲಾ ಸಂಚಾಲಕ ಸಂತೊಷ ದೇಶಪಾಂಡೆ, ಪ್ರಮುಖರಾದ ಶಿವಕುಮಾರ ಕುಕನೂರ, ಮಂಜುನಾಥ ಅಂಗಡಿ, ಹುಲಗಪ್ಪ ಕಟ್ಟಿಮನಿ, ಸೋಮನಗೌಡ ಹೊಗರನಾಳ, ಸುಧಾಕರ ಮುಜಗೊಂಡ, ನಿತೇಶ‌ ಪುಲಸ್ಕರ, ವಿನೋದ ಡೊಳ್ಳಿನ, ಆರ್.ಮಂಜುನಾಥ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.