
ಕನಕಗಿರಿ: ದೇಗುಲಗಳ ನಗರ ಎಂದು ಖ್ಯಾತಿ ಪಡೆದಿರುವ ಈ ಊರು 1978ರಲ್ಲಿ ವಿಧಾನಸಭಾ ಕ್ಷೇತ್ರವಾಗಿ ರಚನೆಯಾಗಿದ್ದು ಈಗ ಸುವರ್ಣ ಮಹೋತ್ಸವದ ಆಚರಣೆಯ ಹೊಸ್ತಿಲಲ್ಲಿದೆ. ಅದಕ್ಕೂ ಮುನ್ನ ಕನಕಗಿರಿ ಭಾಗ ಗಂಗಾವತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿತ್ತು.
ಗಂಗಾವತಿಯ ಎಂ.ನಾಗಪ್ಪ ಕ್ಷೇತ್ರದ ಮೊದಲ ಶಾಸಕ. ಬಳಿಕ ಶ್ರೀರಂಗದೇವರಾಯಲು ಹಾಗೂ ಎಂ.ಮಲ್ಲಿಕಾರ್ಜುನ ನಾಗಪ್ಪ ಎರಡು ಸಲ ಶಾಸಕರಾಗಿ ಆಯ್ಕೆಯಾಗಿದ್ದರೆ ನಾಗಪ್ಪ ಸಾಲೋಣಿ, ಜಿ.ವೀರಪ್ಪ ಕೇಸರಹಟ್ಟಿ ತಲಾ ಒಂದೊಂದು ಸಲ ಶಾಸಕರಾಗಿದ್ದರು.
ವಿಧಾನಸಭಾ ಕ್ಷೇತ್ರಗಳ ಪುನರ್ ವಿಂಗಡಣೆಯಿಂದ 2008ರಲ್ಲಿ ಪರಿಶಿಷ್ಟ ಜಾತಿಗೆ ಮೀಸಲಾದ ಈ ಕ್ಷೇತ್ರದಲ್ಲಿ ಇಲ್ಲಿವರೆಗೆ ನಾಲ್ಕು ಸಲ ಚುನಾವಣೆ ನಡೆದಿದ್ದು ಶಿವರಾಜ ತಂಗಡಗಿ 3, ಬಸವರಾಜ ದಢೇಸೂಗೂರು ಒಂದು ಬಾರಿ ಶಾಸಕರಾಗಿದ್ದಾರೆ.
ಕ್ಷೇತ್ರ ರಚನೆಯಾಗಿ 50 ವರ್ಷ ಸಮೀಪಿಸುತ್ತಿದ್ದರೂ ಏನು ಅಭಿವೃದ್ಧಿಯಾಗಿದೆ ಎಂಬ ಚರ್ಚೆ ಜನರದ್ದು. ಕಾಂಗ್ರೆಸ್, ಜನತಾ ಪಕ್ಷ, ಜನತಾದಳ, ಬಿಜೆಪಿ ಸೇರಿದ ವಿವಿಧ ಪಕ್ಷಗಳು ಆಡಳಿತ ನಡೆಸಿದರೂ ಕ್ಷೇತ್ರದಲ್ಲಿ ಎಲ್ಲಿಯೂ ತಮ್ಮ ಪಕ್ಷದ ಸ್ವಂತ ಕಚೇರಿ ಕಟ್ಟಿಸಿಲ್ಲ, ಕನಿಷ್ಠ ನಿವೇಶನವನ್ನೂ ಖರೀದಿಸಿಲ್ಲ ಎಂದು ಪಕ್ಷದ ಕಾರ್ಯಕರ್ತರು ಮುಖಂಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾರೆ. ಬಾಡಿಗೆ ಮನೆ, ಗೋಧಾಮ, ವಾಣಿಜ್ಯ ಮಳಿಗೆಗಳ ಬಾಡಿಗೆ ಕಟ್ಟಡದಲ್ಲಿ ಪಕ್ಷದ ಕಚೇರಿಗಳಿವೆ.
2018ರಲ್ಲಿ ಕನಕಗಿರಿ ಹಾಗೂ ಕಾರಟಗಿ ತಾಲ್ಲೂಕು ಕೇಂದ್ರವಾಗಿ ಘೋಷಣೆಯಾಗಿದ್ದು ದಶಕ ಕಾಣುತ್ತಾ ಬಂದರೂ ಪೂರ್ಣ ಪ್ರಮಾಣದ ತಾಲ್ಲೂಕು ಕಚೇರಿಗಳು ಎರಡು ಕಡೆಯಲ್ಲಿಯೂ ಇಲ್ಲ. ಕಾರಟಗಿ ತಾಲ್ಲೂಕು ನೀರಾವರಿ ಪ್ರದೇಶವಾಗಿದ್ದರೆ ಒಣಭೂಮಿ ಪ್ರದೇಶ ಹೊಂದಿರುವ ಕನಕಗಿರಿ ಸಂಪೂರ್ಣ ಮಳೆಯನ್ನೇ ಆಶ್ರಯಿಸಿದೆ.
ಇಲ್ಲಿನ ಜನ ಹೊಟ್ಟೆಪಾಡಿಗಾಗಿ ಪುಣೆ, ಬೆಂಗಳೂರು, ಗೋವಾ, ಮಹಾರಾಷ್ಟ್ರ, ತಮಿಳುನಾಡು, ಮೈಸೂರು ಸೇರಿ ಇತರ ನಗರಗಳಿಗೆ ಗುಳೆ ಹೋಗುವುದನ್ನು ನಿಲ್ಲಿಸಲು ಯಾವ ಸರ್ಕಾರದಿಂದಲೂ ಆಗಿಲ್ಲ ಎನ್ನುವುದು ಸ್ಥಳೀಯರ ಆರೋಪ.
11 ಕಿಮೀ ದೂರದ ಅಂತರದಲ್ಲಿ ತುಂಗಾಭದ್ರಾ ಕಾಲುವೆ ಹರಿಯುತ್ತಿದ್ದರೂ ಬೇಸಿಗೆ ಸಮಯದಲ್ಲಿ ನೀರಿನ ಸಮಸ್ಯೆ ಜನರನ್ನು ಕಾಡುತ್ತಿದೆ. ಕೆರೆಗಳಿಗೆ ನೀರು ತುಂಬಿಸುವ ಕೆಲಸವಾಗಿರುವುದು ಸ್ವಲ್ಪ ಸಮಾಧಾನ ತಂದಿದ್ದರೂ ನೀರಿನ ಬವಣೆ ತಪ್ಪಿಲ್ಲ ಎಂದು ವಾಲ್ಮೀಕಿ ನಗರದ ಜನರು ಹೇಳುತ್ತಾರೆ.
ತುಂಗಾಭದ್ರಾ ಜಲಾಶಯದಿಂದ ಹರಿದು ಸಮುದ್ರ ಸೇರುತ್ತಿರುವ ನೀರು ಸಂಗ್ರಹಿಸಲು ಈ ಭಾಗದಲ್ಲಿ
ಸಮಾನಾಂತರ ಜಲಾಶಯಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಆಯಾ ಸರ್ಕಾರದ ಸಚಿವರು ಹೇಳಿದರೂ ಕೆಲಸ ಮಾತ್ರ ಶೂನ್ಯವಾಗಿದೆ.
‘ಕಣ್ಣಿದ್ದವರು ಕನಕಗಿರಿ ನೋಡಬೇಕು, ಕಾಲಿದ್ದವರು ಹಂಪಿ ನೋಡಬೇಕೆಂಬ’ ಪ್ರತೀತಿ ಇಲ್ಲಿದ್ದು ಕನಕಾಚಲಪತಿ ದೇವಸ್ಥಾನ, ಕಲಾತ್ಮಕ ಕೆತ್ತನೆಯ ವೆಂಕಟಚಲಪತಿ ಭಾವಿ, ಪ್ರವಾಸಿ ಮಂದಿರದ ರಸ್ತೆಯಲ್ಲಿರುವ ಎರಡು ಪುಷ್ಕರಣಿಗಳು, ಪ್ರವಾಸಿ ಮಂದಿರದ ಆವರಣದಲ್ಲಿರುವ ಬಾವಿ, ಕೊಪ್ಪಳ ರಸ್ತೆಯಲ್ಲಿರುವ ಚಿಕ್ಕ ಕನಕಪ್ಪನ ಬಾವಿ ಸೇರಿದಂತೆ ಹಲವಾರು ಸ್ಮಾರಕಗಳು, ದೇಗುಲಗಳು ಇಲ್ಲಿದ್ದರೂ ಅಭಿವೃದ್ಧಿ ಕಾಣದೆ ವಿನಾಶದ ಅಂಚಿನಲ್ಲಿವೆ.
ಬ್ರಿಟಿಷರ ಕಾಲದ ಪ್ರವಾಸಿ ಮಂದಿರ ದುಸ್ಥಿತಿಯಲ್ಲಿದ್ದು ಸರಿಪಡಿಸುವ ಕೆಲಸ ಮಾಡಬೇಕಿದೆ. ವಸತಿ ನಿಲಯಗಳ ಸಂಖ್ಯೆ ಹೆಚ್ಚಳವಾಗಿದ್ದರೂ ವೃತ್ತಿಪರ ಶಿಕ್ಷಣ ಸಂಸ್ಥೆಗಳ ಕೊರತೆಯಿಂದ ಸಾಕಷ್ಟು ನಿರುದ್ಯೋಗ ತಾಲ್ಲೂಕಿನಲ್ಲಿದೆ. ಕೆಲ ಗ್ರಾಮೀಣ ವಿದ್ಯಾರ್ಥಿಗಳು ಬಸ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಗ್ರಾಮೀಣ ರಸ್ತೆಗಳ ಸ್ಥಿತಿ ಸಹ ಅಯೋಮಯವಾಗಿದೆ.
‘ಕನಕಗಿರಿ ಹಾಗೂ ಕಾರಟಗಿ ಜನರಿಗೆ ಶುದ್ದ ಕುಡಿಯುವ ನೀರಿನ ಯೋಜನೆಗೆ ₹204 ಕೋಟಿ ರೂಪಾಯಿ ಬಿಡುಗಡೆಯಾಗಿದ್ದು ಕಾಮಗಾರಿ ನಡೆಯುತ್ತಿದೆ. ಎರಡು ಯಾತ್ರಿ ನಿವಾಸಗಳನ್ನು ನಿರ್ಮಾಣ ಮಾಡಲಾಗಿದೆ. ಸರ್ಕೀಟ್ ಹೌಸ್ ಕಾಮಗಾರಿ ಪ್ರಗತಿಯಲ್ಲಿದೆ. ಕಾರಟಗಿ ಭಾಗದಲ್ಲಿ ಏತ ನೀರಾವರಿ ಯೋಜನೆ ಅನುಷ್ಠಾನಗೊಳಿಸಲಾಗಿದೆ. ತಾಲ್ಲೂಕು ಕಚೇರಿಗಳನ್ನು ಆರಂಭಿಸಲು ಒತ್ತು ನೀಡಲಾಗಿದೆ’ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.
ಕನಕಗಿರಿ ಹಾಗೂ ಕಾರಟಗಿ ತಾಲ್ಲೂಕು ರಚನೆ ಮಾಡಿದ್ದಲ್ಲದೆ ಪಟ್ಟಣ ಪಂಚಾಯಿತಿ ಮತ್ತು ಪುರಸಭೆಯನ್ನಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ಕನಕಗಿರಿ ಉತ್ಸವವನ್ನು ನಾಲ್ಕು ಸಲ ಆಚರಣೆ ಮಾಡಿ ಇತಿಹಾಸ ಪರಂಪರೆ ಉಳಿಸುವ ಕೆಲಸ ಮಾಡಲಾಗಿದೆಶಿವರಾಜ ತಂಗಡಗಿ ಕೊಪ್ಪ ಜಿಲ್ಲಾ ಉಸ್ತುವಾರಿ ಸಚಿವ
ಪಟ್ಟಣ ಪಂಚಾಯಿತಿಯಾಗಿ ದಶಕವಾಗಿದ್ದು ಹೇಳಿಕೊಳ್ಳುವಂತ ಅಭಿವೃದ್ಧಿ ಕೆಲಸಗಳು ನಡೆದಿಲ್ಲಪಾಮಣ್ಣ ಅರಳಿಗನೂರು ಪ್ರಗತಿಪರ ಚಿಂತಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.