
ಕನಕಗಿರಿ: ಕನಕಗಿರಿ ವಿಧಾನಸಭಾ ಕ್ಷೇತ್ರ ರಚನೆಯಾಗಿ 48 ವರ್ಷ ಗತಿಸಿದ್ದು, ಪರಿಶಿಷ್ಟ ಜಾತಿ ಮೀಸಲಾತಿ ಬಂದು 18 ವರ್ಷಗಳು ಉರುಳಿವೆ. ನೀರಾವರಿ ವ್ಯಾಪ್ತಿಯ ಗಂಗಾವತಿ ತಾಲ್ಲೂಕಿನಲ್ಲಿ ಈ ಹಿಂದೆ ಕನಕಗಿರಿ ಇದ್ದರೂ ಈ ಪ್ರದೇಶ ಒಣಭೂಮಿ ಹಾಗೂ ಮಳೆಯಾಶ್ರಿತ ಪ್ರದೇಶದಿಂದ ಕೂಡಿದ ಪರಿಣಾಮ ಅಷ್ಟೊಂದು ಅಭಿವೃದ್ಧಿ ಕಂಡಿಲ್ಲ.
ಹೀಗಾಗಿ ಬಜೆಟ್ ಕ್ಷೇತ್ರಕ್ಕೆ ವರದಾನವಾಗುತ್ತಾ ಎಂಬ ಪ್ರಶ್ನೆ ಪ್ರತಿಬಾರಿಯೂ ಕಾಡುತ್ತದೆ. 2018ರಲ್ಲಿ ಕನಕಗಿರಿಯು ಹೊಸದಾಗಿ ತಾಲ್ಲೂಕು ಕೇಂದ್ರವಾಗಿ ಘೋಷಣೆಯಾಗಿದ್ದು ಮೂರು ಹೋಬಳಿ ಪ್ರದೇಶ ಹೊಂದಿದೆ. ಜೀರಾಳ, ಚಿಕ್ಕಡಂಕನಕಲ್ ಗ್ರಾಮ ಪಂಚಾಯಿತಿಯ ಕೆಲ ಗ್ರಾಮಗಳು ನೀರಾವರಿಗೆ ಸೇರಿದರೆ ಉಳಿದ ಎಲ್ಲಾ ಗ್ರಾಮಗಳು ಒಣಭೂಮಿ ಪ್ರದೇಶ ಹೊಂದಿದೆ. ಪ್ರತಿ ವರ್ಷವೂ ಜನ ಅತಿವೃಷ್ಠಿ ಇಲ್ಲವೆ ಅನಾವೃಷ್ಠಿಗೆ ತುತ್ತಾಗುತ್ತಿದ್ದಾರೆ.
ಇಲ್ಲಿಂದ 10 ಕಿ.ಮೀ. ದೂರದಲ್ಲಿ ತುಂಗಾಭದ್ರಾ ಎಡದಂಡೆ ಕಾಲುವೆಯಿದ್ದರೂ ನೀರಾವರಿ ಸೌಲಭ್ಯ ಇಲ್ಲಿಲ್ಲ. ಬೇಸಿಗೆಯಲ್ಲಿ ಪಟ್ಟಣ ಹಾಗೂ ಗ್ರಾಮೀಣ ಭಾಗದ ಜನರು ಕುಡಿಯುವ ನೀರಿಗೆ ತತ್ತರಿಸುವಂತಾಗಿದೆ. ಈ ಭಾಗದ ಜನ ಶಿಕ್ಷಣ, ಆರ್ಥಿಕವಾಗಿ ಸಬಲೀಕರಣಗೊಳ್ಳಬೇಕೆಂಬ ಇಚ್ಛಾಶಕ್ತಿ ಸರ್ಕಾರಕ್ಕೆ ಇದ್ದರೆ ಸಮಾನಾಂತರ ಜಲಾಶಯಗಳನ್ನು ನಿರ್ಮಿಸುವ ಅಗತ್ಯವಿದೆ ಎನ್ನುವುದು ಜನರ ಆಗ್ರಹವಾಗಿದೆ.
ಈ ಹಿಂದಿನ ಬಿಜೆಪಿ ಸರ್ಕಾರ ಯೋಜನೆಗೆ ₹1 ಸಾವಿರ ಕೋಟಿ ಅನುದಾನ ನೀಡುವುದಾಗಿ ಬಜೆಟ್‌ನಲ್ಲಿ ಘೋಷಣೆತೇ ವಿನಃ: ನಯಾಪೈಸೆ ಬಿಡುಗಡೆ ಮಾಡಲಿಲ್ಲ. ಈ ಸರ್ಕಾರವಾದರೂ ಹಣ ಮೀಸಲಿಟ್ಟು ಯೋಜನೆಯನ್ನು ಕೈಗೆತ್ತಿಗೊಳ್ಳಲಿ ಎಂದು ಸ್ಥಳೀಯರು ಆಗ್ರಹಿಸುತ್ತಾರೆ.
ಈ ವಿಧಾನಸಭಾ ಕ್ಷೇತ್ರದಲ್ಲಿ ಬರುವ ಕಾರಟಗಿ ತಾಲ್ಲೂಕು ಭತ್ತದ ನಾಡು ಎಂದು ಕರೆಸಿಕೊಂಡಿದೆ. ರೈಸ್‌ಮಿಲ್‌ಗಳು, ಕಾರಟಗಿ ಹಾಗೂ ಸುತ್ತಮುತ್ತ ಪ್ರದೇಶದಲ್ಲಿ ತಲೆ ಎತ್ತಿವೆ. ಉದ್ಯೋಗ ಸೃಷ್ಟಿ, ಭತ್ತದ ಉತ್ಪನ್ನಗಳಿಗೆ ಉತ್ತೇಜನ ಕೊಡಬೇಕೆಂಬ ಉದ್ದೇಶದಿಂದ ಈ ಹಿಂದೆ ಸಚಿವರಾಗಿದ್ದ ಈಗಿನ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ನವಲಿ ಹತ್ತಿರ ರೈಸ್ ಟೆಕ್ನಾಲಜಿ ಪಾರ್ಕ್ ಸ್ಥಾಪಿಸಿದ್ದು ಮಳಿಗೆ, ಕಚೇರಿ, ರಸ್ತೆ, ಚರಂಡಿ, ಪೊಲೀಸ್ ಠಾಣೆ, ಉಪಾಹಾರ ಮಂದಿರ ಇತರೆ ಕಟ್ಟಡಗಳು ನಿರ್ಮಾಣಗೊಂಡಿದ್ದು ಅಭಿವೃದ್ಧಿ ಚಟುವಟಿಕೆಗಳು ಕುಂಠಿತಗೊಂಡಿವೆ. ನೂರಾರು ಕೋಟಿ ರೂಪಾಯಿ ವೆಚ್ಚ ಮಾಡಿದ್ದರೂ ಆದಾಯ ಮಾತ್ರ ಶೂನ್ಯ ಎನ್ನುವಂತಾಗಿದೆ. ರೈಸ್ ಟೆಕ್ನಾಲಜಿ ಪಾರ್ಕ್‌ಗೆ ಬಜೆಟ್ ಶಕ್ತಿ ತುಂಬುವ ಕೆಲಸ ಮಾಡಬೇಕು ಎನ್ನುವುದು ಯುವ ಮುಂದಾಳು ನಿಂಗಪ್ಪ ನಾಯಕ ಅವರ ಆಗ್ರಹ.
ಸ್ಮಾರಕಗಳ ಜೀರ್ಣೋದ್ಧಾರ: ಮೌರ್ಯ ಹಾಗೂ ವಿಜಯನಗರ ಕಾಲದಿಂದಲೂ ಐತಿಹಾಸಿಕವಾಗಿ ಪ್ರಸಿದ್ದಿ ಪಡೆದ ಕನಕಗಿರಿಯಲ್ಲಿ ಐತಿಹಾಸಿಕ ಭಾವಿಗಳು, ಸ್ಮಾರಕ, ದೇಗುಲಗಳು, ಪುಷ್ಕರಣಿ ಇವೆ. ಕಲಾತ್ಮಕ ಕೆತ್ತನೆಯ ವೆಂಕಟಚಲಪತಿ ಬಾವಿಗೆ ರಕ್ಷಣೆ ಇಲ್ಲವಾಗಿದೆ, ಪುಷ್ಕರಣಿ, ತ್ರಿವೇಣಿ ಸಂಗಮ ಹಾಗೂ ಕನಕಾಚಲಪತಿ ದೇವಸ್ಥಾನಕ್ಕೆ ಮತ್ತಷ್ಟು ಕಳೆ ತರಲು ಜೀರ್ಣೋದ್ಧಾರದ ಅವಶ್ಯಕತೆ ಇದೆ ಎಂದು ಕನಕಾಚಲಪತಿ ದೇಗುಲದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಕೀರ್ತಿ ಸೋನಿ ಒತ್ತಾಯಿಸಿದ್ದಾರೆ.
ಬಹು ವರ್ಷಗಳ ಬೇಡಿಕೆಯಾಗಿದ್ದ ಕನಕಗಿರಿ ತಾಲ್ಲೂಕು ರಚನೆಯಾಗಿರುವುದು ಸಂತಸ ತಂದಿದೆ ಆದಷ್ಟು ಬೇಗನೆ ವಿವಿಧ ಕಚೇರಿಗಳನ್ನು ಆರಂಭಿಸಿ ಜನರಿಗೆ ಅಲೆದಾಟ ತಪ್ಪಿಸಬೇಕು.ರವಿ ಬಲಿಜ ಸ್ಥಳೀಯರು ಕನಕಗಿರಿ
ಸಮನಾಂತರ ಜಲಾಶಯಗಳ ನಿರ್ಮಾಣಕ್ಕೆ ಸರ್ಕಾರ ಒತ್ತು ನೀಡಬೇಕು. ನೀರಾವರಿಯಾದರೆ ಮಾತ್ರ ಈ ಪ್ರದೇಶ ಅಭಿವೃದ್ಧಿಯಾಗುತ್ತದೆ ಸರ್ಕಾರ ಬಜೆಟ್‌ನಲ್ಲಿ ಜಲಾಶಯ ನಿರ್ಮಾಣಕ್ಕೆ ಅನುದಾನ ನೀಡಬೇಕು.ವಿಶ್ವನಾಥ ಕೋರಿಶೆಟ್ಟರ್ ಸ್ಥಳೀಯರು
ಕನಕಗಿರಿ ಅಭಿವೃದ್ಧಿ ಪ್ರಾಧಿಕಾರ ತೋಟಗಾರಿಕಾ ಟೆಕ್ನಾಲಜಿ ಪಾರ್ಕ್ ಯೋಜನೆ ಅನುಷ್ಠಾನಕ್ಕೆ ಆದ್ಯತೆ ನೀಡಲಾಗುತ್ತಿದೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಗೂ ಕೊಡುವಂತೆ ಪ್ರಸ್ತಾವ ಸಲ್ಲಿಸಿದ್ದೇನೆ.ಶಿವರಾಜ ತಂಗಡಗಿ ಜಿಲ್ಲಾ ಉಸ್ತುವಾರಿ ಸಚಿವ
* ಕೃಷ್ಣ ಬಿ ಸ್ಕೀ ಯೋಜನೆಯಿಂದ ಕನಕಗಿರಿ ತಾಲ್ಲೂಕಿನ ಐದು ಕೆರೆಗಳನ್ನು ಭರ್ತಿ ಮಾಡಬೇಕು. * ತೋಟಗಾರಿಕಾ ಟೆಕ್ನಾಲಜಿ ಪಾರ್ಕ್ ಆರಂಭವಾಗಬೇಕು.
* ಕನಕಗಿರಿ ಪಟ್ಟಣದಲ್ಲಿ ತಾಲ್ಲೂಕು ನ್ಯಾಯಾಲಯ ಎಂಜಿನಿಯರಿಂಗ್ ಮೆಡಿಕಲ್ ಡಿಪ್ಲೊಮಾ ಕಾಲೇಜುಗಳು ಬೇಕು.
* ಹುಲಿಹೈದರ ಚಿಕ್ಕಡಂಕನಲ್ ಹಾಗೂ ಮುಸಲಾಪುರದಲ್ಲಿ ಪಿಯು ಕಾಲೇಜು ಆಗಬೇಕಿದೆ. * ಹುಲಿಹೈದರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರು ಅಗತ್ಯವಿದೆ.
* ಕನಕಗಿರಿ ತಾಲ್ಲೂಕು ರಚನೆಯಾಗಿ ಎಂಟು ವರ್ಷಗಳು ಉರುಳಿದರೂ ಅನೇಕ ಕಚೇರಿಗಳು ಆರಂಭಗೊಂಡಿಲ್ಲ ಆರಂಭಗೊಂಡ ಕಚೇರಿಗಳಿಗೆ ಸ್ವಂತ ಕಟ್ಟಡಗಳಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.